ಅತ್ಯಾಚಾರ ಆರೋಪಿಗೆ 10 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದ ಮೈಸೂರು ನ್ಯಾಯಾಲಯ

ಮೈಸೂರು,ಡಿಸೆಂಬರ್,5,2023(www.justkannada.in): ಮಹಿಳೆಯೊಬ್ಬರ ಮೇಲೆ ಅತ್ಯಾಚಾರವೆಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ  ಮೈಸೂರಿನ ಮಾನ್ಯ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.

ಹುಣಸೂರು ಗ್ರಾಮಾಂತರ ಪೋಲಿಸ್ ಠಾಣಾ ಸರಹದ್ದಿನಲ್ಲಿ ರತ್ನಪುರಿ ಗ್ರಾಮದಲ್ಲಿ ವಾಸವಾಗಿದ್ದ ಸಂತ್ರಸ್ಥೆ ಮಹಿಳೆ ಮೇಲೆ  ಹುಣಸೂರು ತಾಲ್ಲೂಕು ರತ್ನಪುರಿ ಗ್ರಾಮದ ನಿವಾಸಿ ಆರೋಪಿ  ಸಲ್ಮಾನ್ ಖಾನ್(20) ಸಂತ್ರಸ್ಥೆಯನ್ನು ಮದುವೆಯಾಗುವುದಾಗಿ ನಂಬಿಸಿ, ಆಕೆಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ನಡೆಸಿದ್ದರಿಂದ ಸಂತ್ರಸ್ಥೆಯು ಗರ್ಭಿಣಿಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದರು.

ನಂತರ ಆರೋಪಿಯು ಮದುವೆಗೆ ನಿರಾಕರಿಸಿ ಮೋಸ ಮಾಡಿದ್ದರಿಂದ ಈ ಬಗ್ಗೆ ಸಂತ್ರಸ್ಥೆಯು ಆರೋಪಿಯ ವಿರುದ್ಧ ದೂರು ಸಲ್ಲಿಸಿದ್ದು, ಹುಣಸೂರು ಗ್ರಾಮಾಂತರ ಪೋಲಿಸ್ ಠಾಣಾ ಅಂದಿನ ಪೋಲಿಸ್ ತನಿಖಾಧಿಕಾರಿಯಾಗಿದ್ದ, ಪೂವಯ್ಯ ಕೆ.ಸಿ ರವರು ತನಿಖೆ ಪೂರೈಸಿ ಆರೋಪಿಯ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿಕೊಂಡಿದ್ದರು.

ಈ ಬಗ್ಗೆ ಪ್ರಕರಣದ ವಿಚಾರಣೆಯನ್ನು ನಡೆಸಿದ ಮೈಸೂರಿನ ಮಾನ್ಯ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ  ಆರೋಪಿ ವಿರುದ್ಧ ಪೂರಕ ಸಾಕ್ಷ್ಯಾಧಾರಗಳು ಸಾಬೀತಾದ ಹಿನ್ನಲೆಯಲ್ಲಿ ನ್ಯಾಯಾಧೀಶರಾದ ಎಂ.ರಮೇಶ್, ರವರು ಆರೋಪಿಗೆ ಕಲಂ. 376(2) (ಎನ್) ಐಪಿಸಿ ರೀತ್ಯಾ 10 ವರ್ಷಗಳ ಕಠಿಣ ಸೆರೆಮನೆ ವಾಸ ಮತ್ತು 30 ಸಾವಿರ ರೂಪಾಯಿಗಳ ದಂಡ ಹಾಗೂ ಕಲಂ. 417 ಐಪಿಸಿ ರೀತ್ಯಾ ಒಂದು ವರ್ಷಗಳ ಸಾದಾ ಸೆರೆಮನೆ ವಾಸ ಮತ್ತು 5 ಸಾವಿರ ರೂಪಾಯಿಗಳ ದಂಡವನ್ನು ವಿಧಿಸಿ ದಂಡ ಮೊತ್ತದ 35 ಸಾವಿರ ರೂಪಾಯಿಗಳ ಪೈಕಿ 30 ಸಾವಿರ ರೂಪಾಯಿಗಳನ್ನು ಸಂತ್ರಸ್ಥೆಗೆ ಪರಿಹಾರವನ್ನಾಗಿ ಆರೋಪಿ ನೀಡುವಂತೆ ಮತ್ತು 5 ಸಾವಿರ ರೂಪಾಯಿಗಳನ್ನು ಸರ್ಕಾರಕ್ಕೆ ದಂಡ ಪಾವತಿಸುವಂತೆ ತೀರ್ಪು ನೀಡಿದೆ

ಸಂತ್ರಸ್ಥೆಗೆ ಕಾನೂನು ಸೇವೆಗಳ ಪ್ರಾಧಿಕಾರದಿಂದ ಕನೂನಾತ್ಮಕ ಪರಿಹಾರ ನೀಡುವಂತೆ ಕಾನೂನು ಸೇವಾ ಪ್ರಾಧಿಕಾರ ಮೈಸೂರು ಜಿಲ್ಲೆ ಇವರಿಗೆ ಆದೇಶಿಸಿದೆ.

ಸರ್ಕಾರದ ಪರವಾಗಿ ಪ್ರಕರಣದ ವಿಚಾರಣೆಯನ್ನ ಸರ್ಕಾರಿ ಅಭಿಯೋಜಕರಾದ ಕೆ.ನಾಗರಾಜ ಅವರು ನಡೆಸಿದ್ದರು.

Key words: Mysore court- sentenced – rape accused – 10 years- imprisonment