ಭಾರತ್ ಜೋಡೋ ನ್ಯಾಯ ಯಾತ್ರೆಗೆ ಅಡ್ಡಿ ಸಂವಿಧಾನ ವಿರೋಧಿ ನಡೆ-ಸಿಎಂ ಸಿದ್ದರಾಮಯ್ಯ ಕಿಡಿ.

ಮೈಸೂರು,ಜನವರಿ,24,2024(www.justkannada.in): ಅಸ್ಸಾಂನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಅಡ್ಡಿಪಡಿಸಿರುವುದು ಸಂವಿಧಾನ ವಿರೋಧಿ ನಡೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.

ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿ ಅವರ ಯಾತ್ರೆಗೆ ಉದ್ದೇಶಪೂರ್ವಕವಾಗಿ ತೊಂದರೆ ಕೊಡುತ್ತಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಮಾಡುವ ಪ್ರತಿಭಟನೆ, ಪಾದಯಾತ್ರೆಗಳನ್ನು ಬಿಜೆಪಿ ಸಹಿಸುತ್ತಿಲ್ಲ. ದೇಶದ ಸಮಸ್ಯೆಗಳನ್ನು ತಿಳಿದುಕೊಳ್ಳಲು, ಅವುಗಳಿಗೆ ಪರಿಹಾರ ಕಂಡುಕೊಳ್ಳಲು ರಾಹುಲ್ ಗಾಂಧಿ ಪಾದಯಾತ್ರೆ ಮಾಡುತ್ತಿದ್ದಾರೆ. ಪಾದಯಾತ್ರೆಗೆ ಅಗತ್ಯ ಭದ್ರತೆ ನೀಡಬೇಕಿರುವುದು ಕೇಂದ್ರ, ರಾಜ್ಯ ಸರ್ಕಾರಗಳ ಕರ್ತವ್ಯ. ನೆಹರು ಕುಟುಂಬಕ್ಕೆ ಬೆದರಿಕೆ ಇದೆ. ಉದ್ದೇಶ ಪೂರ್ವಕವಾಗಿ ಭದ್ರತಾ ಲೋಪ ಮಾಡುತ್ತಿರುವುದು ಸರಿಯಲ್ಲ. ಅಸ್ಸಾಂ ಮುಖ್ಯಮಂತ್ರಿ ಮೊದಲು ಕಾಂಗ್ರೆಸ್‌ನಲ್ಲಿ ಇದ್ದರು.  ಬಿಜೆಪಿಗೆ ಹೋಗಿ ಸಿಎಂ ಆಗಿದ್ದಾರೆ. ಮುಖ್ಯಮಂತ್ರಿ ಸ್ಥಾನದಲ್ಲಿ ಇದ್ದುಕೊಂಡು ಪಾದಯಾತ್ರೆ ತಡೆಯಲು ಪ್ರಚೋದನೆ ನೀಡುತ್ತಿದ್ದಾರೆ. ಅಮಿತ್ ಶಾ, ಮೋದಿ ಮೆಚ್ಚಿಸಲು ಹೀಗೆಲ್ಲ ಮಾಡುತ್ತಿದ್ದಾರೆ. ಇದು ಸಂವಿಧಾನ ವಿರೋಧಿ ನಡೆಯಾಗಿದೆ ಎಂದು ಖಂಡಿಸಿದರು.

ರಾಜ್ಯಕ್ಕೆ ಕೇಂದ್ರ ಸರ್ಕಾರ ಬರ ಪರಿಹಾರ ಕೊಟ್ಟಿಲ್ಲ.  ಎರಡು ತಿಂಗಳು ಹಿಂದೆಯೇ ಖುದ್ದಾಗಿ ಭೇಟಿ ನೀಡಿ ಬರ ಪರಿಹಾರಕ್ಕೆ ಮನವಿ ಸಲ್ಲಿಸಿದ್ದೆ. ಬೇಗ ಕೊಡಿ ಅಂತ ಹೇಳಿದ್ದೆವು. ಒಮ್ಮೆ ಸಭೆ ಕರೆದು ಮುಂದೂಡಿದರು.‌ ಪ್ರಧಾನಿ ಬೆಂಗಳೂರಿಗೆ ಬಂದಾಗಲೂ ಬರ ಪರಿಹಾರ ನೀಡುವಂತೆ ಹೇಳಿದ್ದೆ. ಸದ್ಯಕ್ಕೆ ನಾವೇ ಬರ ನಿರ್ವಹಣೆ ಮಾಡುತ್ತಿದ್ದೇವೆ. ರಾಜ್ಯ ಸರ್ಕಾರ ಈವರೆಗೆ 2000 ಕೋಟಿ ರೂ. ಖರ್ಚು ಮಾಡಿದ್ದೇವೆ. ಬರ ಪರಿಹಾರಕ್ಕೆ ಈಗ 550 ಕೋಟಿ ರೂ. ಬಿಡುಗಡೆ ಮಾಡಿದ್ದೇನೆ. ರೈತರಿಗೆ ಮುಂದಿನ ವಾರ ಮೊದಲ ಕಂತಿನ ಹಣ ಹಾಕುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Key words: mysore-CM Siddaramaiah – anti-constitutional move – obstruct -Bharat Jodo Nyaya Yatra.