ಮೈಸೂರು ಮೇಯರ್ ಚುನಾವಣೆಯಲ್ಲಿ ಮೈತ್ರಿ ಮುಂದುವರಿಕೆ: ಜಿ.ಟಿ ದೇವೇಗೌಡರ ನಡುವಿನ ಭಿನ್ನಾಭಿಪ್ರಾಯ ಕುರಿತು ಸಾ.ರಾ ಮಹೇಶ್ ಪ್ರತಿಕ್ರಿಯಿಸಿದ್ದು ಹೀಗೆ…

ಮೈಸೂರು,ಜ,15,2020(www.justkannada.in):  ಮೈಸೂರು ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಹಿನ್ನೆಲೆ ಕಾಂಗ್ರೆಸ್ –ಜೆಡಿಎಸ್ ಮೈತ್ರಿ ಮುಂದುವರೆಯಲಿದೆ ಎಂದು ಮಾಜಿ ಸಚಿವ ಸಾ.ರಾ ಮಹೇಶ್ ತಿಳಿಸಿದರು.

ಮೈಸೂರು ಪಾಲಿಕೆ ಮೇಯರ್ ಚುನಾವಣೆ ಕುರಿತು ಖಾಸಗಿ ಹೋಟೆಲ್ ನಲ್ಲಿ  ಕಾಂಗ್ರೆಸ್ ಹಾಗೂ ಜೆಡಿಎಸ್ ಜಂಟಿ ಸುದ್ದಿಗೋಷ್ಠಿ  ನಡೆಸಿತು. ಸುದ್ದಿ ಗೋಷ್ಠಿಯಲ್ಲಿ ಮಾಜಿ ಸಚಿವ ಸಾರಾ ಮಹೇಶ್, ವಿಧಾನ ಪರಿಷತ್ ಸದಸ್ಯ ಧರ್ಮಸೇನಾ, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜೆಡಿಎಸ್ ನಗರಾಧ್ಯಕ್ಷ ಚಲುವೇಗೌಡ, ಕೆ.ಟಿ.ಶ್ರೀಕಂಟೇಗೌಡ, ಪ್ರೊ.ರಂಗಪ್ಪ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮೇಯರ್ ಪುಷ್ಪಲತಾ ಜಗನ್ನಾಥ್, ಉಪಮೇಯರ್ ಶಫಿ ಅಹಮ್ಮದ್ ಭಾಗಿಯಾಗಿದ್ದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾ.ರಾ ಮಹೇಶ್,  ಕಳೆದ ಬಾರಿ ಮೈಸೂರು ಪಾಲಿಕೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದೆವು.ನಮ್ಮ ಪಕ್ಷದ ವರಿಷ್ಠರಾದ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ನ ಹಿರಿಯ ನಾಯಕರಾದ ಸಿದ್ದರಾಮಯ್ಯನವರ ಸಲಹೆ ಪಡೆದು ಮೈಸೂರು ಪಾಲಿಕೆಯಲ್ಲಿ ಒಟ್ಟಿಗೆ ಹೆಜ್ಜೆ ಇಟ್ಟಿದ್ದೆವು. ಈಗಾಗಲೇ ಒಂದು ವರ್ಷದ ಅವಧಿ ಮುಗಿದಿದೆ. ಮೇಯರ್ ಪುಷ್ಪಲತಾ ಜಗನ್ನಾಥ್ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಈ ಬಾರಿಯೂ ಕೂಡಾ ನಾವು ಮೈತ್ರಿ ಮುಂದುವರೆಸುತ್ತಿದ್ದೇವೆ. ಜೆಡಿಎಸ್ ಗೆ ಮೇಯರ್ ಹಾಗೂ ಕಾಂಗ್ರೆಸ್ ಗೆ  ಉಪಮೇಯರ್ ನೀಡುವ ಕುರಿತಾಗಿ ಮಾತುಕತೆ ನಡೆದಿದೆ ಎಂದರು.

ಒಪ್ಪಂದದಂತೆ ಮೊದಲ ಅವಧಿ ಕಾಂಗ್ರೆಸ್ ಗೆ ಎರಡನೇ ಅವಧಿ ಜೆಡಿಎಸ್ ಗೆ ಮೂರನೇ ಅವಧಿ ಮತ್ತೆ ಕಾಂಗ್ರೆಸ್ ಹಾಗೂ ಉಳಿದೆರಡು ಅವಧಿ ಜೆಡಿಎಸ್ಗೆ ಮೇಯರ್ ಸ್ಥಾನ ಸಿಗಲಿದೆ. ಈಗ ಮೊದಲ ಮೊದಲ ಅವಧಿ ಮುಕ್ತಾಯವಾಗಿದೆ. ಎರಡನೇ ಅವಧಿಗೆ ಜೆಡಿಎಸ್ ಗೆ ಮೇಯರ್ ಸ್ಥಾನ ಸಿಗಲಿದೆ. ಇದಕ್ಕೆ ಎರಡೂ ಪಕ್ಷಗಳ ಸದಸ್ಯರು ಹಾಗೂ ಮುಖಂಡರು ಒಪ್ಪಿಗೆ ನೀಡಿದ್ದಾರೆ. ಸ್ಥಳೀಯ ಶಾಸಕರು, ಮುಖಂಡರು ಸಲಹೆ ಪಡೆದು ಮೇಯರ್ ಆಯ್ಕೆ ಮಾಡುತ್ತೇವೆ ನಮ್ಮ ಪಕ್ಷದ ನಾಯಕರಾದ ಜಿ.ಟಿ.ದೇವೇಗೌಡರ ಸಲಹೆ ಕೂಡಾ ಪಡೆದಿದ್ದೇವೆ ಎಂದರು.

ಜಿ.ಟಿ ದೇವೇಗೌಡರಷ್ಟು ರಾಜಕೀಯ ಅನುಭವ ನನಗಿಲ್ಲ…

ಜಿ.ಡಿ ದೇವೇಗೌಡರ ನಡುವಿನ ಭಿನ್ನಾಭಿಪ್ರಾಯ ಕುರಿತು ಮಾತನಾಡಿದ ಸಾ.ರಾ ಮಹೇಶ್, ಜಿ.ಟಿ ದೇವೇಗೌಡರಷ್ಟು ರಾಜಕೀಯ ಅನುಭವ ನನಗಿಲ್ಲ. ಅವರ ಅನುಭವವನ್ನು ಪಡೆದು, ಅವರು ನೀಡುವ ಆದೇಶವನ್ನು ಪಾಲಿಸುತ್ತೇವೆ. ಪ್ರತಿಯೊಂದು ಪಕ್ಷದಲ್ಲೂ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿರುತ್ತವೆ.ಒಂದು ಮನೆಯಲ್ಲೂ ಅಣ್ಣ ತಮ್ಮಂದಿರ ನಡುವೆ ಭಿನ್ನಾಭಿಪ್ರಾಯವಿರುತ್ತದೆ. ನಮ್ಮಲ್ಲಿರುವ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ಎಲ್ಲರೂ ಒಂದಾಗಿ ಮುಂದುವರಿಯುತ್ತೇವೆ ಎಂದರು.

ಮಾಜಿ ಸಚಿವ ಜಿ.ಟಿ ದೇವೇಗೌಡ ಅವರನ್ನು ಕೂಡ ಭೇಟಿ ಮಾಡಿ ಮಾತುಕತೆ ನಡೆಸಿದ್ದೇವೆ. ಬೆಂಗಳೂರು ರೈಲು ನಿಲ್ದಾಣದಲ್ಲಿ ಜಿ.ಟಿ ದೇವೇಗೌಡರು ಸಿಕ್ಕಾಗ ಸುಮಾರು ಹದಿನೈದು ನಿಮಿಷ ಮಾತುಕತೆ ನಡೆಸಿದೆವು. ಒಳ್ಳೆಯ ಅಭ್ಯರ್ಥಿ ಆಯ್ಕೆ ಮಾಡಿ ಎಂದು ಜಿ.ಟಿ ದೇವೇಗೌಡ ಸೂಚಿಸಿದರು. ಅವರು ಚುನಾವಣೆ ದಿನ ಬಂದು ಜೆಡಿಎಸ್ ಅಭ್ಯರ್ಥಿಗೆ ಮತ ಚಲಾಯಿಸುವುದಾಗಿ ತಿಳಿಸಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಸಾ.ರಾ ಮಹೇಶ್ ತಿಳಿಸಿದರು.

ಎರಡೂ ಪಕ್ಷಗಳ ನಾಯಕರು ಒಮ್ಮತದಿಂದ ಅಭ್ಯರ್ಥಿಗಳ ಆಯ್ಕೆ – ಕಾಂಗ್ರೆಸ್ ಎಂ.ಎಲ್.ಸಿ ಧರ್ಮಸೇನಾ ಹೇಳಿಕೆ…

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ -ಕಾಂಗ್ರೆಸ್ ಎಂ.ಎಲ್.ಸಿ ಧರ್ಮಸೇನಾ, ನಮ್ಮಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಲ್ಲ. ಈ ಬಾರಿ ಮೇಯರ್ ಸ್ಥಾನ ಜೆಡಿಎಸ್ ಗೆ, ಉಪ ಮೇಯರ್ ಸ್ಥಾನ ಕಾಂಗ್ರೆಸ್ ಗೆ ಹಂಚಿಕೆ ಮಾಡಲಾಗಿದೆ. ಎರಡೂ ಪಕ್ಷಗಳ ನಾಯಕರು ಒಮ್ಮತದಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ ಎಂದು ತಿಳಿಸಿದರು.

Key words: Mysore city corporation- mayor election-  Sa Aa Mahesh -GT Deve Gowda.