ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪನಾಗ್ ಬೆಂಬಲಕ್ಕೆ ನಿಂತ ಕಾರ್ಪೋರೇಟರ್ಸ್.

ಮೈಸೂರು,ಜೂನ್,3,2021(www.justkannada.in): ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಅಸಮಾಧಾನಗೊಂಡು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪನಾಗ್ ಅವರ ಬೆಂಬಲಕ್ಕೆ ಇದೀಗ ಪಾಲಿಕೆ ಸದಸ್ಯರು ನಿಂತಿದ್ದಾರೆ.jk

ಈ ಮಧ್ಯೆ ಶಿಲ್ಪಾನಾಗ್ ಅವರು ರಾಜೀನಾಮೆ‌ ಘೋಷಿಸಿ ಪಾಲಿಕೆಯಿಂದ ಹೊರ‌ ನಡೆಯುತ್ತಿದ್ದಾಗ ಸೆಕ್ಯೂರಿಟಿಗಾರ್ಡ್ ಒಬ್ಬರು ಶಿಲ್ಪಾನಾಗ್ ಅವರ ಕಾಲಿಗೆ ಬಿದ್ದು ಹೋಗಬೇಡಿ ಎಂದ ಘಟನೆ ನಡೆದಿದೆ.  ಕಾರು ಹತ್ತಲು‌ ಬಂದ  ವೇಳೆ ಶಿಲ್ಪನಾಗ್  ಅವರ ಸೆಕ್ಯೂರಿಟಿ ಗಾರ್ಡ್ ಕಾಲಿಗೆ ಬಿದ್ದು ಹೋಗದಂತೆ ಮನವಿ ಮಾಡಿದರು. ಈ ವೇಳೆ ಶಿಲ್ಪಾನಾಗ್ ಅವರು ಕೈಮುಗಿದು ಕಾರು ಏರಿ ಹೊರಟ  ಘಟನೆ ನಡೆಯಿತು.

ನಮ್ಮ ಪಾಲಿಕೆ ಆಯುಕ್ತರು ರಾಜೀನಾಮೆ ಕೊಡಕ್ಕೆ ನಾವು ಬಿಡಲ್ಲ- ಪ್ರಭಾರ ಮೇಯರ್ ಅನ್ವರ್ ಬೇಗ್

ಇನ್ನು ಶಿಲ್ಪಾನಾಗ್ ಅವರ ಬೆಂಬಲಕ್ಕೆ ನಿಂತ ಮೈಸೂರು ಪಾಲಿಕೆ ಪ್ರಭಾರ ಮೇಯರ್ ಅನ್ವರ್ ಬೇಗ್, ನಮ್ಮ ಪಾಲಿಕೆ ಆಯುಕ್ತರು ರಾಜೀನಾಮೆ ಕೊಡಕ್ಕೆ ನಾವು ಬಿಡಲ್ಲ. ಇಂತಹ ಕಮಿಷನರ್ ದೇಶಕ್ಕೆ ಬೇಕು, ಇಂತವರ ರಾಜೀನಾಮೆ ಆಗಬಾರದು. ನಾವು ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.

ಈಗ 65 ವಾರ್ಡ್ ಸದಸ್ಯರನ್ನ ಸಭೆಗೆ ಕರೆದಿದ್ದೇನೆ. ಯಾವುದೇ ಕಾರಣಕ್ಕೂ ಶಿಲ್ಪಾನಾಗ್‌ ರಂತಹ ಅಧಿಕಾರಿಗಳನ್ನ ನಾವು ಕಳೆದುಕೊಳ್ಳಲು ಸಿದ್ಧರಿಲ್ಲ. ಜಿಲ್ಲಾಧಿಕಾರಿಗಳಿಂದ ಇಷ್ಟೆಲ್ಲಾ ತೊಂದರೆ ಆಗ್ತಿದೆ ಅಂತ ನಮಗೆ ಗೊತ್ತಿಲ್ಲ. ಕೊರೋನಾ ಸಂಬಂಧಿಸಿದ ಸುದ್ದಿಗೋಷ್ಠಿ ಅಂತಾ ನಾವು ಬಂದೆವು. ಇಲ್ಲಿ ನೋಡಿದರೆ ನಮ್ಮ ಆಯುಕ್ತರು ಇಷ್ಟೊಂದು ತೊಂದರೆ ಅನುಭವಿಸುತ್ತಿದ್ದಾರೆ. ಈಗ ನಾವೆಲ್ಲರೂ ನಮ್ಮ ಕಮಿಷನರ್‌ನ ಉಳಿಸಿಕೊಳ್ಳುತ್ತೇವೆ. ನಾಳೆಯಿಂದಲೇ ಹೋರಾಟ ಮಾಡುತ್ತೇವೆ. ಮೈಸೂರಿನ ಜನರು ನಮ್ಮೊಟ್ಟಿಗಿದ್ದಾರೆ ಎಂದು ಪ್ರಭಾರ ಮೇಯರ್ ಅನ್ವರ್ ಬೇಗ್ ಹೇಳಿದ್ದಾರೆ.

Key words: Mysore city Commissioner- Shilpanag- support-Corporators.