ಮಕ್ಕಳ ದಸರಾ: ಗಿಚ್ಚಿ ಗಿಲಿಗಿಲಿ‌ ಖ್ಯಾತಿಯ ವಂಶಿಕಾ ಡ್ಯಾನ್ಸ್: 224 ವಿಧಾನಸಭಾ ಕ್ಷೇತ್ರಗಳ ಹೆಸರೇಳಿ ಅಚ್ಚರಿ ಮೂಡಿಸಿದ ಬಾಲ ಪ್ರತಿಭೆ.

ಮೈಸೂರು,ಸೆ,29,2022(www.justkannada(www.justkannada.in):  ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಇಂದು ಏರ್ಪಡಿಸಲಾಗಿರುವ ಮಕ್ಕಳ ದಸರಾ ಕಾರ್ಯಕ್ರಮವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮತ್ತು ಸಕಾಲ ಇಲಾಖೆ ಸಚಿವರಾದ ಬಿ.ಸಿ.ನಾಗೇಶ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು.

ನಗರದ ಜಗನ್ಮೋಹನ ಅರಮನೆಯಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾಗಿರುವ ಮಕ್ಕಳ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೋವಿಡ್ ನಂತರ ದಸರಾ ಹಬ್ಬವು ತನ್ನ ಹಳೆಯ ಮೆರುಗನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಅದರಂತೆ ವಿದ್ಯಾರ್ಥಿಗಳಿಗೂ ತಮ್ಮಲ್ಲಿರುವ ಪ್ರತಿಭೆ ಅನಾವರಣಕ್ಕೆ ಇಂತಹ ವೇದಿಕೆ ಅಗತ್ಯವಿದ್ದು, ಎಲ್ಲಾ ಮಕ್ಕಳಿಗೂ ಸಮಾನ ಅವಕಾಶ ನೀಡಲು ಸರ್ಕಾರದಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಬಳಿಕ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಿರುವ ನನ್ನಮ್ಮ ಸೂಪರ್ ಸ್ಟಾರ್ ಹಾಗೂ ಗಿಚ್ಚಿ ಗಿಲಿಗಿಲಿ‌ ಖ್ಯಾತಿಯ ಬಾಲ ಪ್ರತಿಭೆ ವಂಶಿಕಾ ಅಂಜನಿ ಕಶ್ಯಪ ಅತಿಥಿಯಾಗಿ‌ ಪಾಲ್ಗೊಂಡು,  ಕನ್ನಡ ಚಿತ್ರದ ರಾ..ರಾ.. ರಕ್ಕಮ್ಮ ಹಾಡಿಗೆ ನೃತ್ಯ ಮಾಡುವ ಮೂಲಕ ನೆರೆದಿದ್ದ ವಿದ್ಯಾರ್ಥಿಗಳನ್ನು ಮನರಂಜಿಸಿದರು.

ಬಾಲಕಿ 224  ವಿಧಾನ ಸಭಾ ಕ್ಷೇತ್ರದ ಹೆಸರೇಳಿ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ‌ ಮಾಡಿದ ಬಾಲೆ.

ಗಿನ್ನಿಸ್ ವರ್ಲ್ಡ್ ಆಫ್ ರೆಕಾರ್ಡ್ ದಾಖಲೆ ಮಾಡಿರುವ ಧವನಿ ಎಂಬ ಪುಟ್ಟ ಬಾಲಕಿ 224  ವಿಧಾನ ಸಭಾ ಕ್ಷೇತ್ರದ ಹೆಸರನ್ನು ಒಂದು ನಿಮಿಷದಲ್ಲಿ ಹೇಳುವ ಮೂಲಕ ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿ‌ ಮಾಡಿಸಿತು.

ಮಕ್ಕಳ ದಸರಾಕ್ಕೆ ಆಗಮಿಸಿದ್ದ ಅದ್ಬುತ ಬಾಲ ಪ್ರತಿಭೆ. ಮಾಡಿರುವ ಧವನಿ, ಕ್ಷಣಾರ್ಧದಲ್ಲೇ ರಾಜ್ಯದ ೨೨೪ ವಿಧಾನಸಭಾ ಕ್ಷೇತ್ರಗಳ ಹೆಸರನ್ನ ಹೇಳುತ್ತಾಳೆ. ಅಲ್ಲದೆ  ಮಹಾಭಾರತ  ೧೦೧ ಧುರ್ಯೋಧನನ ಸಹೋದರರ ಹೆಸರನ್ನೂ ಸಹ ಈ ಪುಟ್ಟ ಬಾಲಕಿ  ನಿರರ್ಗಳವಾಗಿ ಹೇಳುತ್ತಾಳೆ. ಜೊತೆ ವೇದ ಉಪನಿಷತ್ತು, ರಾಮಾಯಣ, ಮಹಾಭಾರತ, ಶ್ಲೋಕಗಳು, ಜನಪದ ಗೀತೆ, ಭಾವಗೀತೆ, ಚಲನಚಿತ್ರ ಗೀತೆಗಳ ಹಾಡೋಕು ಈಕೆ  ಸೈ. ಜಗನ್ಮೋಹನ ಅರಮನೆಯಲ್ಲಿ ನಡೆದ ಮಕ್ಕಳ ದಸರಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಾಲ ಪ್ರತಿಭೆ.

ಈ ಅಪ್ರತಿಮ ಬಾಲೆ ಬೆಂಗಳೂರಿನ ಹೆಗ್ಗನಹಳ್ಳಿ ನಿವಾಸಿಯಾಗಿದ್ದು,  ಸರ್ಕಾರಿ ಶಾಲೆಯಲ್ಲಿಯೊಂದರಲ್ಲಿ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುವತ್ತಿದ್ದಾಳೆ. ೮ ವರ್ಷದ ಧವನಿ ಭವಿಷ್ಯದಲ್ಲಿ ರಾಷ್ಟ್ರಪತಿ ಆಗಬೇಕಂತೆ. ಇನ್ನು ಧವನೀ ಪ್ರತಿಭೆ ಕಂಡು ಸ್ಥಳದಲ್ಲೇ ಶಾಸಕ ಎಲ್ ನಾಗೇಂದ್ರ 10 ಸಾವಿರ ನಗದು  ಬಹುಮಾನ ನೀಡಿದರು.

ಇನ್ನು ಮಕ್ಕಳ ದಸರಾ ಅಂಗವಾಗಿ ಜಗನ್ಮೋಹನ ಅರಮನೆ ಆವರಣದಲ್ಲಿ ಏರ್ಪಡಿಸಲಾಗಿರುವ ವಿಜ್ಞಾನ ಹಾಗೂ ಕರಕುಶಲ ವಸ್ತು ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಮತ್ತು ಸಹಕಾರ‌ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಉದ್ಘಾಟನೆ ಮಾಡಿದರು.

ವಸ್ತು ಪ್ರದರ್ಶನದಲ್ಲಿ ಜಿಲ್ಲೆಯ ಹೆಚ್. ಡಿ.ಕೋಟೆ ಸರ್ಕಾರಿ ಶಾಲಾ ಮಕ್ಕಳು ಶಿಕ್ಷಣದಲ್ಲಿ ಚಿತ್ರಕಲೆಯ ಉಪಯುಕ್ತತೆ, , ಸರ್ಕಾರಿ ಶಾಲಾ ಮಕ್ಕಳಿಂದ ಭೌಗೋಳಿಕ ಮತ್ತು ಪ್ರಾಕೃತಿಕ ವೈಪರೀತ್ಯ ಕಾರಣಗಳು, ಪರಿಣಾಮಗಳು, ,ಪಿರಿಯಾಪಟ್ಟಣ ಶಾಲಾ ಮಕ್ಕಳಿಂದ ಕನ್ನಡದ ಶ್ರೇಷ್ಠ ಕವಿ ಪರಂಪರೆ, ತಿ.ನರಸೀಪುರದಿಂದ ಶಿಕ್ಷಣ ಇಲಾಖೆಯ ಪ್ರೋತ್ಸಾಹದಾಯಕ ಯೋಜನೆಗಳು, ಕೆ.ಆರ್.ನಗರದ ಶಾಲಾ‌ ಮಕ್ಕಳಿಂದ ಕಲಿಕಾ ಚೇತರಿಕೆ ಕುರಿತು, ನಂಜನಗೂಡು ಶಾಲೆಯಿಂದ ಮೈಸೂರು ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ, ಮೈಸೂರು ದಕ್ಷಿಣ, ಉತ್ತರ‌ ಹಾಗೂ ಗ್ರಾಮಾಂತರ ವಲಯದ ಸರ್ಕಾರಿ ಶಾಲಾ ಮಕ್ಕಳಿಂದ ಯೋಗ, ಸ್ವಾಸ್ಥ್ಯ ಹಾಗೂ ಕರೋನಾ ಮುನ್ನೆಚ್ಚರಿಕೆ ಮತ್ತು ಕಲಿಕಾ ಪ್ರಕ್ರಿಯೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳ  ಕುರಿತು ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ.

ಈ‌ ಎರಡು ದಿನದ ಕಾರ್ಯಕ್ರಮದಲ್ಲಿ ವಿವಿಧ ವೇಷಭೂಷಣ ಸ್ಪರ್ಧೆ, ಪ್ರಬಂಧ, ಆಶುಭಾಷಣ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ನೃತ್ಯ ಪ್ರದರ್ಶನ ಸೇರಿದಂತೆ ದೇಸಿ ಆಟಗಳು ನಡೆಯಲಿದೆ.

ಕಾರ್ಯಕ್ರಮದಲ್ಲಿ ಶಾಸಕರಾದ ಎಲ್.ನಾಗೇಂದ್ರ, ಜಿಲ್ಲಾಧಿಕಾರಿಯವರಾದ ಡಾ.ಜಿ.ಬಗಾದಿ ಗೌತಮ್, ಮೇಯರ್ ಶಿವಕುಮಾರ್, ಉಪಮೇಯರ್  ಡಾ.ಜಿ.ರೂಪ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್ ಅವರು ಸೇರಿದಂತೆ ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Key words: mysore- Children’s Dasara- innaugration-minister-BC Nagesh