ಪರಿಸರ ಸ್ನೇಹಿ ಕೆಲಸಗಳ  ಮೂಲಕ ಬೆಟ್ಟವನ್ನು ದೇಶದಲ್ಲಿಯೇ ಮಾದರಿ ಧಾರ್ಮಿಕ ತಾಣವಾಗಿ ರೂಪಿಸಿ- ಚಾಮುಂಡಿ ಬೆಟ್ಟ ಸಮಿತಿ ಆಗ್ರಹ.

ಮೈಸೂರು,ಜನವರಿ,12,2023(www.justkannada.in):  ತಜ್ಞರ ಅಭಿಪ್ರಾಯದಂತೆ ಚಾಮುಂಡಿ ಬೆಟ್ಟದ ಉಳಿವಿಗೆ ಪೂರಕ ಕೆಲಸಗಳನ್ನ ಮಾಡಿಲು ಮಾತ್ರ ಕೇಂದ್ರ ಪ್ರಸಾದ ಯೋಜನೆಯ ಹಣವನ್ನ ಬಳಸಿ . ಪರಿಸರ ಸ್ನೇಹಿ ಕೆಲಸಗಳ  ಮೂಲಕ ಬೆಟ್ಟವನ್ನು ದೇಶದಲ್ಲಿಯೇ ಮಾದರಿ ಧಾರ್ಮಿಕ ತಾಣವಾಗಿ ರೂಪಿಸಿ ಎಂದು ಚಾಮುಂಡಿ ಬೆಟ್ಟ ಸಮಿತಿ ಆಗ್ರಹಿಸಿದೆ.

ಇಂದು ಪತ್ರಕರ್ತರ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ  ಚಾಮುಂಡಿ ಬೆಟ್ಟ ಸಮಿತಿ ಸದಸ್ಯರು,  ಚಾಮುಂಡಿ ಬೆಟ್ಟದ ಪ್ರಾಕೃತಿಕ ಸಂರಚನೆ ತುಂಬಾ ಸೂಕ್ಷ್ಮ ಮತ್ತು ದುರ್ಬಲ ಎಂದು ಈಗಾಗಲೇ ತಜ್ಞರು ತಿಳಿಸಿದ್ದಾರೆ. ಇದರ ಜೊತೆಗೆ ಜಾಗತಿಕ ತಾಪಮಾನ ಏರಿಕೆಯ ಕಾರಣದಿಂದ ಪದೇಪದೇ ಹವಾಮಾನ ವೈಪರೀತ್ಯಗಳು ಆಗುತ್ತಿದ್ದು ಈಗಾಗಲೇ ಬೆಟ್ಟದ ಕೆಲವು ಕಡೆ ಭೂಕುಸಿತ ಕೂಡ ಆಗಿದ್ದನ್ನು ಮೈಸೂರು ಜನರು ಮರೆತಿಲ್ಲ. ಇಂತಹ ಸಂದರ್ಭದಲ್ಲಿ ಬೆಟ್ಟದ ಮೇಲೆ ಯಾವುದೇ ರೀತಿಯ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವುದಾದರೂ ತಜ್ಞರ ಅಭಿಪ್ರಾಯ ಕೇಳಿಯೇ ಮಾಡುವುದು ಅತ್ಯಂತ ವಿವೇಕದ ಕೆಲಸ ಮತ್ತು ಇದು ಅನಿವಾರ್ಯ ಕೂಡ. ಈಗ ಬೆಟ್ಟದ ಮೇಲೆ ನಡೆಯುತ್ತಿರುವ ಕೆಲವು ಕಾಮಗಾರಿಗಳು ಮತ್ತು ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯ ಹಣದಿಂದ ಮಾಡಲುದ್ದೇಶಿಸಿರುವ ಸೌಂದರ್ಯೀಕರಣ ಕೆಲಸ ಮತ್ತು ಹಲವಾರು ಸೌಲಭ್ಯಗಳನ್ನು ಒದಗಿಸುವ ಕೆಲಸಗಳು ( Beautification and Amenitles ) ಬೆಟ್ಟದ ಪರಿಸರಕ್ಕೆ ಮಾರಕವಾಗಿ ಮತ್ತು ಧಾರ್ಮಿಕ ಪಾವಿತ್ರ್ಯಕ್ಕೆ ಕುಂದು ತರುವ ಸಂಭವವಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ .

ಹೀಗಾಗಿ ಇಂತಹ ಕೆಲಸಗಳ ಬದಲಿಗೆ ಕೇಂದ್ರದ ಪ್ರಸಾದ ಯೋಜನೆಯ ಹಣವನ್ನು ಬೆಟ್ಟದ ಉಳಿವಿಗೆ ಪೂರಕವಾದ ಈ ಕೆಳಗಿನ ಕೆಲಸಗಳನ್ನು ಮಾಡುವುದು ಉಪಯೋಗಿಸುವುದು ಸೂಕ್ತ ಎಂದು ತಜ್ಞರು  ಅಭಿಪ್ರಾಯಪಟ್ಟಿದ್ದಾರೆ. ಅವರ ಅಭಿಪ್ರಾಯದಂತೆ ಬೆಟ್ಟದ ಮೇಲೆ ಮತ್ತು ಸುತ್ತ ಮುತ್ತ ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಬೆಳಸಿ ಹಸುರೀಕರಣ ಮಾಡುವುದು. ಬೆಟ್ಟದ ಮೇಲೆ ಚರಂಡಿ ನೀರನ್ನು ಸಂಸ್ಕರಣೆ ಮಾಡುವುದು, ಸಮರ್ಪಕವಾಗಿ ತ್ಯಾಜ್ಯ ನಿರ್ವಹಣೆ ಮಾಡುವುದು, ಸೋಲಾರ್ ವಿದ್ಯುತ್ ಬಳಸುವುದು – ಇಂತಹ ಪರಿಸರ ಸ್ನೇಹಿ ಕೆಲಸಗಳನ್ನು ಮಾಡುವ ಮೂಲಕ ಬೆಟ್ಟವನ್ನು ದೇಶದಲ್ಲಿಯೇ ಮಾದರಿ ಧಾರ್ಮಿಕ ತಾಣವಾಗಿ ರೂಪಿಸಬೇಕು  ಬೆಟ್ಟದ ಮೇಲೆ ಮತ್ತು ಸುತ್ತಲೂ ಇರುವ ಕೆರೆಗಳ ನಿರ್ವಹಣೆಗೆ ಸರಿಯಾದ ಕ್ರಮ ಕೈಗೊಳ್ಳುವುದು. ಚಾಮುಂಡಿ ಬೆಟ್ಟದ ಸುತ್ತಲಿನ ಅರಣ್ಯ ಪ್ರದೇಶವನ್ನು ಒತ್ತುವರಿಯಿಂದ ತಪ್ಪಿಸಲು ಸರಿಯಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಮಿತಿ ಸದಸ್ಯರು ಸಲಹೆ ನೀಡಿದರು.

ಈ ಕೆಲಸಗಳನ್ನು ಮಾಡುವ ಮೂಲಕ ಚಾಮುಂಡಿ ಬೆಟ್ಟದ ಸಂರಕ್ಷಣೆ ಮಾಡುವಂತೆ ಚಾಮುಂಡಿಬೆಟ್ಟ ಉಳಿಸಿ ಸಮಿತಿಯು ಮನವಿ  ಮಾಡಿದ್ದು ಅದಕ್ಕೆ ನಿರ್ದಿಷ್ಟ ಅವಧಿಯಲ್ಲಿ ಸ್ಪಂದಿಸದಿದ್ದಲ್ಲಿ ಪಾದಯಾತ್ರೆ, ಜಾಥಾ, ಸಹಿಸಂಗ್ರಹ, ಸತ್ಯಾಗ್ರಹ ಇತ್ಯಾದಿ ಕ್ರಮಗಳ ಮೂಲಕ ಚಾಮಲಾಪುರ ಮಾದರಿಯ ಹೋರಾಟ ಮಾಡಲು ಜನಶಕ್ತಿ ಕಟ್ಟಲು ಸಿದ್ಧತೆ ಮಾಡುತ್ತದೆ ಎಂದು ಹೇಳಿದೆ.

Key words: mysore-Chamundi Hills- Committee – through -eco-friendly -works