ಕಮಲ- ಕೈ : ಅಪ್ಪ ಮೇಲ್ಮನೆಯ ಬಿಜೆಪಿ ಸದಸ್ಯರಾದ್ರೆ, ಮಗ ಜಿಲ್ಲಾ ಪಂಚಾಯ್ತಿಯ ಕಾಂಗ್ರೆಸ್ ಸದಸ್ಯ..!

 

ಮೈಸೂರು, ಜು.23, 2020 : (www.justkannada.in news) : ವಿಧಾನಪರಿಷತ್ ಗೆ ಸಾಹಿತ್ಯ ವಲಯದಿಂದ ನಾಮನಿರ್ದೇಶಿತರಾದ ಅಡಗೂರು ಎಚ್.ವಿಶ್ವನಾಥ್ ಭಾರತೀಯ ಜನತಾ ಪಕ್ಷ ಪ್ರತಿನಿಧಿಸಿದರೆ, ಪುತ್ರ ಅಮಿತ್ ದೇವರಹಟ್ಟಿ ಮೈಸೂರು ಜಿಲ್ಲಾ ಪಂಚಾಯ್ತಿಯ ಕಾಂಗ್ರೆಸ್ ಪಕ್ಷದ ಸದಸ್ಯ. ಆ ಮೂಲಕ ಕುಟುಂಬದಲ್ಲೊಂದು ಅಪರೂಪದ ರಾಜಕೀಯ ಜುಗಲ್ ಬಂಧಿ..

2016 ರ ಫೆಬ್ರವರಿಯಲ್ಲಿ ನಡೆದ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದು ಭೇರ್ಯ ದಿಂದ ಸ್ಪರ್ಧಿಸಿದ್ದ ವಿಶ್ವನಾಥ್ ಪುತ್ರ, ಅಮಿತ್ ದೇವರಹಟ್ಟಿ ಗೆಲುವು ಸಾಧಿಸಿದ್ದರು. ಆಗ ತಂದೆ ಅಡಗೂರು ಎಚ್.ವಿಶ್ವನಾಥ್ , ಮಾಜಿ ಸಂಸದರಾಗಿ ಕಾಂಗ್ರೆಸ್ ಪಕ್ಷದಲ್ಲೇ ಮುಖಂಡರಾಗಿ ಗುರುತಿಸಿಕೊಂಡಿದ್ದರು.

 

Mysore-bjp-h.vishwanath-amith-devarahatti-congress-zp-member

ಆನಂತರದ ರಾಜಕೀಯ ಬೆಳವಣಿಗೆಯಲ್ಲಿ ಅಡಗೂರು ಎಚ್.ವಿಶ್ವನಾಥ್, ಸಿದ್ದರಾಮಯ್ಯ ಅವರ ವಿರುದ್ಧ ಅಸಮಧಾನಗೊಂಡು 2017 ರಲ್ಲಿ ಕಾಂಗ್ರೆಸ್ ಪಕ್ಷ ತ್ಯಜಿಸಿ ಜೆಡಿಎಸ್ ಸೇರ್ಪಡೆಗೊಂಡರು. ಅಲ್ಲಿ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಬಳಿಕ 2018 ರ ಮೇ ತಿಂಗಳಿನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಗೊಂಡು ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದರು. ಈ ವೇಳೆಯಲ್ಲೂ ಪುತ್ರ ಅಮಿತ್, ಕಾಂಗ್ರೆಸ್ ಪಕ್ಷದಲ್ಲೇ ಗುರುತಿಸಿಕೊಂಡಿದ್ದರು.

ನಂತರ ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದಿತು. ಆಗಲು ವಿಶ್ವನಾಥ್ ಸಚಿವ ಸ್ಥಾನದಿಂದ ವಂಚಿತರಾದರು. ಸರಕಾರ ರಚನೆಯಾದ ಕೆಲ ಸಮಯದ ಬಳಿಕ ಅಡಗೂರು ವಿಶ್ವನಾಥ್, ಮೈತ್ರಿ ಸರಕಾರದ ವಿರುದ್ಧ ಸಿಡಿದೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದರು. ಇದೇ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ನ ಕೆಲ ಶಾಸಕರು ವಿಶ್ವನಾಥ್ ಅವರಿಗೆ ಕೈಜೋಡಿಸಿದ್ದರಿಂದ ಮೈತ್ರಿ ಸರಕಾರ ಕುಸಿಯಿತು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ 12 ಮಂದಿ ವಿಶ್ವನಾಥ್ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಗೊಂಡರು.

ಬಳಿಕ 2019 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಕಣಕ್ಕಿಳಿದು ಅದೃಷ್ಠ ಪರೀಕ್ಷೆಗೆ ಮುಂದಾದ ವಿಶ್ವನಾಥ್ ಅವರಿಗೆ ಈ ಬಾರಿ ಸೋಲುಂಟಾಯಿತು. ಈ ಉಪ ಚುನಾವಣೆ ಸಂದರ್ಭದಲ್ಲೂ ಪುತ್ರ, ಜಿಲ್ಲಾ ಪಂಚಾಯ್ತಿ ಸದಸ್ಯ ಅಮಿತ್ ದೇವರಹಟ್ಟಿ ಕಾಂಗ್ರೆಸ್ ಪಕ್ಷದಲ್ಲೇ ಮುಂದುವರೆದಿದ್ದರು.

ಸಿಎಂ ಯಡಿಯೂರಪ್ಪ ಆಶ್ವಾಸನೆ ನೀಡಿದಂತೆ ಎಚ್. ವಿಶ್ವನಾಥ್ ಅವರನ್ನು ಇದೀಗ ಮೇಲ್ಮನೆ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿದ್ದಾರೆ. ಈ ತನಕ ರಾಜಕಾರಣಿ ಕೋಟದಡಿ ಟಿಕೆಟ್ ಪಡೆದು ಚುನಾವಣೆ ಎದುರಿಸುತ್ತಿದ್ದ, ಎಚ್. ವಿಶ್ವನಾಥ್, ಈಗ ಇದೇ ಮೊದಲ ಬಾರಿಗೆ ಸಾಹಿತ್ಯ ವಲಯದ ಹಿನ್ನೆಲೆಯಲ್ಲಿ ಗುರುತಿಸಿಕೊಂಡು ಮೇಲ್ಮನೆಗೆ ಪ್ರವೇಶಿಸಿದ್ದಾರೆ.

Mysore-bjp-h.vishwanath-amith-devarahatti-congress-zp-member

ಆದರೆ, ಪುತ್ರ ಅಮಿತ್ ದೇವರಹಟ್ಟಿ ಈಗಲೂ ಕಾಂಗ್ರೆಸ್ ಪಕ್ಷದಲ್ಲೇ ಇದ್ದು, ಅವರ ಫೇಸ್ ಬುಕ್ ಮುಖಪುಟದಲ್ಲಿ ಸಿದ್ದರಾಮಯ್ಯ ಅವರ ಜತೆಗಿನ ಫೋಟೋವನ್ನೇ ಉಳಿಸಿಕೊಂಡಿದ್ದಾರೆ. ಆ ಮೂಲಕ ತಂದೆ ವಿಶ್ವನಾಥ್, ಸಿದ್ದರಾಮಯ್ಯರ ಕಡು ಟೀಕಕಾರರಾದರು ತಾವು ಮಾತ್ರ ಭಿನ್ನ ಎಂಬ ಕುತೂಹಲ ಮೂಡಿಸಿದ್ದಾರೆ.

 

oooooo

key words : Mysore-bjp-h.vishwanath-amith-devarahatti-congress-zp-member