ಶ್ರೀರಾಮ ಭಾರತೀಯತೆಯ ಸಂಕೇತ- ಬಿಜೆಪಿ ಅಭ್ಯರ್ಥಿ ಯದುವೀರ್

ಮೈಸೂರು,ಏಪ್ರಿಲ್, 17,2024 (www.justkannada.in): ಶ್ರೀರಾಮನ ಸಮಾನತೆ, ವೈಚಾರಿಕತೆ, ಆದರ್ಶಗಳಿಂದ ಕೂಡಿದ ಸಮಸಮಾಜದ ಪರಿಕಲ್ಪನೆ. ನಮಗೆ ಸದಾ ಪ್ರೇರಣೆಯಾಗಿದೆ ಎಂದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ  ಯದುವೀರ ಚಾಮರಾಜ ಒಡೆಯರ್‌ ಅವರು ಹೇಳಿದರು.

ಚಾಮರಾಜ ಕ್ಷೇತ್ರದ ಶ್ರೀರಾಂಪೇಟೆಯಲ್ಲಿನ ಶ್ರೀರಾಮ ಮಂದಿರದಲ್ಲಿ  ರಾಮನವಮಿ ಪೂಜೆಯಲ್ಲಿ ಪಾಲ್ಗೊಂಡ ನಂತರ ಮಾತನಾಡಿದರು.

ಈ ಬಾರಿಯ ಶ್ರೀರಾಮನವಮಿಯು ಭಾರತೀಯರಿಗೆ ಅತೀ ವಿಶೇಷವಾಗಿದ್ದು, 5 ಶತಮಾನಗಳ ಭಾರತೀಯರ ಕನಸು ನನಸಾಗಿದ್ದು, ಲಕ್ಷಾಂತರ ಜನರ ತ್ಯಾಗ-ಬಲಿದಾನಗಳಿಂದ ಭಾರತೀಯರ ಅಸ್ಮಿತೆಯಾಗಿ ಶ್ರೀರಾಮ ಮಂದಿರದ ನಿರ್ಮಾಣವಾಗಿದ್ದು, ಇದಕ್ಕಾಗಿ ದೇಶವಾಸಿಗಳ ಪರವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸುವುದಾಗಿ ತಿಳಿಸಿದರು.

ಶ್ರೀರಾಮನ ಆದರ್ಶ, ಪ್ರಜಾಸೇವೆಯ ಪರಂಪರೆಯನ್ನು ಮೈಸೂರಿನ ಯದುವಂಶದ ಅರಸರು ಮುಂದುವರೆಸಿಕೊಂಡು ಬಂದಿದ್ದು, “ಸರ್ವರಿಗೂ ಸಮಬಾಳು-ಸರ್ವರಿಗೂ ಸಮಪಾಲು” ಧ್ಯೇಯೆಯೊಂದಿಗೆ ನಮ್ಮ ಪ್ರಧಾನಿಗಳಾದ ನರೇಂದ್ರ ಮೋದಿಯವರು ಆಡಳಿತ ನಡೆಸುತ್ತಿದ್ದು ಮಾಜಿ ಪ್ರಧಾನಿಗಳಾದ ಹೆಚ್‌.ಡಿ ದೇವೆಗೌಡರ ಆಶೀರ್ವಾದದೊಂದಿಗೆ ಬಿ.ಎಸ್‌ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ತಾವೂ ಸಹ ಪ್ರಜಾಸೇವೆಗೆ ಅವಕಾಶ ಬಯಸಿದ್ದು, ತಮ್ಮನ್ನು ಆಶೀರ್ವದಿಸಬೇಕಾಗಿ ಈ ಸಂದರ್ಭದಲ್ಲಿ ಯದುವೀರ್ ಅವರು ಮನವಿ ಮಾಡಿದರು.

ನಗರ ಬಿಜೆಪಿ ಅಧ್ಯಕ್ಷ  ನಾಗೇಂದ್ರ, ಮಾಜಿ ಮೇಯರ್ ರವಿಕುಮಾರ್ ಹಾಗೂ ಇತರ ಪ್ರಮಖರು  ಈ ಸಂದರ್ಭದಲ್ಲಿ ಹಾಜರಿದ್ದರು. ನಂತರ ನಡೆದ ರೋಡ್ ಶೋ ಗೆ ಜನರ ಭಾರಿ ಸ್ಪಂದನೆ ವ್ಯಕ್ತವಾಯಿತು.

Key words: mysore, BJP, candidate, Yaduveer