ಮತಾಂತರ ನಿಷೇಧ ಕಾಯ್ದೆಗೆ ಮೈಸೂರಿನ ಬಿಷಪ್ ವಿರೋಧ.

ಮೈಸೂರು,ಡಿಸೆಂಬರ್,22,2021(www.justkannada.in): ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಮತಾಂತರ ನಿಷೇಧ ಕಾಯ್ದೆಗೆ ಮೈಸೂರಿನ ಬಿಷಪ್ ಡಾ.ಕೆ.ಎ.ವಿಲಿಯಂ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮೈಸೂರಿನ ಬಿಷಪ್ ಡಾ.ಕೆ.ಎ.ವಿಲಿಯಂ ಹೇಳಿದ್ದಿಷ್ಟು…

ಮತಾಂತರ ಕಾಯ್ದೆಯಿಂದ ನಮಗೆ ಯಾವುದೇ ಭಯ ಇಲ್ಲ. ನಾವು ಆ ರೀತಿಯ ತಪ್ಪುಗಳನ್ನು ಮಾಡ್ತಿಲ್ಲ. ನಾವು ಯಾರನ್ನು ಬಲವಂತವಾಗಿ ಕನ್ವರ್ಟ್ ಮಾಡ್ತಿಲ್ಲ. ಸಮಾಜ ಸೇವೆ ಕ್ರೈಸ್ತ ಧರ್ಮದ ಮೂಲ ಉದ್ದೇಶ. ನಾವು ಯಾರನ್ನು ಬಲವಂತವಾಗಿ ಮತಾಂತರ ಮಾಡಿಲ್ಲ. ಏನೂ ಇಲ್ಲದೇ ಅಪವಾದ, ತೊಂದರೆ ಮಾಡೊದು ಸರಿಯಲ್ಲ. ರಾಜ್ಯದಲ್ಲಿ ಈ ಬಿಲ್ ನ ಅಗತ್ಯತೆ ಇಲ್ಲ. ಆ ರೀತಿ ಬಲವಂತ ಮತಾಂತರ ಮಾಡಿದ್ರೆ ಕಾಯ್ದೆ ತರದೇ ಅಂತವರ ವಿರುದ್ಧ ಕ್ರಮಕೈಗೊಳ್ಳಿ. ಆದರೆ ಕಾಯ್ದೆ ದುರುಪಯೋಗ ಪಡಿಸಿಕೊಂಡು ತೊಂದರೆ ಮಾಡುವ ಸಾಧ್ಯತೆ ಇದೆ. ಕಾಯ್ದೆಯಿಂದ ಒಂದು ಧರ್ಮವನ್ನು ಡಿಸ್ಟರ್ಬ್ ಮಾಡಬಾರದು. ಇದು ಕೇವಲ ಕ್ರೈಸ್ತ ಧರ್ಮಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಈ ಬಗ್ಗೆ ಹೋರಾಟ ಕುರಿತು ಧರ್ಮಾಧ್ಯಕ್ಷರ ಒಕ್ಕೂಟ ತೀರ್ಮಾನ ಮಾಡುತ್ತೆ.

ನಾವು ಮತಾಂತರ ನಿಷೇಧ ಕಾಯ್ದೆ ವಿರೋಧಿಸಿ ಸಿಎಂ‌ ಭೇಟಿ ಮಾಡಿಲ್ಲ. ನಮ್ಮ ಸಮುದಾಯಕ್ಕೆ ಸ್ಮಶಾನ, ಇತರೆ ಸವಲತ್ತುಗಳನ್ನ ಕೇಳಲು ಹೋಗಿದ್ವಿ. ಮತಾಂತರ ಕಾಯ್ದೆಯಿಂದ ನಮಗೆ ಯಾವುದೇ ಭಯ ಇಲ್ಲ ಎಂದರು.

ಪ್ರತಿ ವರ್ಷದಂತೆ ಈ ಬಾರಿಯೂ ಕ್ರಿಸ್ಮಸ್ ಆಚರಣೆ

ಕ್ರಿಸ್ಮಸ್ ಆಚರಣೆ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರತಿ ವರ್ಷದಂತೆ ಈ ಬಾರಿಯೂ ಕ್ರಿಸ್ಮಸ್ ಆಚರಣೆ ಮಾಡಲಾಗುತ್ತದೆ. ಕೊರೊನಾ ಆತಂದಿಂದಾಗಿ ಕಳೆದ ಬಾರಿ ಸರಳವಾಗಿ ಕ್ರಿಸ್ಮಸ್ ಆಚರಿಸಲಾಗಿತ್ತು. ಈ ಬಾರಿ ಕೊರೊನಾ ರೂಪಾಂತರ ಓಮಿಕ್ರಾನ್ ಭೀತಿಯ ನಡುವೆ ಕ್ರಿಸ್ಮಸ್ ಆಚರಣೆ ಮಾಡಬೇಕಿದೆ.ನಾವು ಯಾವುದೇ ಧರ್ಮಕ್ಕೆ ಸೇರಿದ್ದರೂ ದೈವಿಕ ಶಕ್ತಿ ನಮ್ಮನ್ನೆಲ್ಲಾ ಕಾಪಾಡುತ್ತಿದೆ ಎಂದು ನುಡಿದರು.

ಸರ್ಕಾರದ ನಿರ್ಧಾರ ಸ್ವಾಗತ.

ಸರ್ಕಾರ ನಿನ್ನೆ ಹೊರಡಿಸಿರುವ ಸುತ್ತೋಲೆಯಲ್ಲಿ ಹೊಸ ವರ್ಷಾಚರಣೆಗೆ ಹಲವು ನಿರ್ಬಂಧಗಳನ್ನು ಹೇರಿದೆ. ಆದರೆ ಕ್ರಿಸ್ಮಸ್ ಆಚರಣೆಗೆ ಹೆಚ್ಚಿನ ನಿರ್ಬಂಧ ಹೇರಿಲ್ಲ. ಸರ್ಕಾರದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಸರ್ಕಾರ ನೀಡಿರುವ ಮಾರ್ಗಸೂಚಿಯ ಪ್ರಕಾರ ಕ್ರಿಸ್ಮಸ್ ಆಚರಣೆ ಮಾಡಲಾಗುವುದು ಎಂದು ಕ್ರೈಸ್ತ ಧರ್ಮಾಧಿಕಾರಿ ಡಾ ಕೆ ಎ ವಿಲಿಯಂ ಹೇಳಿದರು.

Key words: Mysore- Bishop- Opposition – Prohibition – Conversion