ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯ ಕಾಯ್ದೆ 2000ಕ್ಕೆ ತಿದ್ದುಪಡಿಗೆ ಮುಂದಾಗಿರುವುದು ಅಪಾಯಕಾರಿ ಬೆಳವಣಿಗೆ- ‘ಕೈ’ ಮುಖಂಡ ಎಚ್.ಎ ವೆಂಕಟೇಶ್..

ಮೈಸೂರು,ಫೆ,25,2020(www.justkannada.in): ವಿಶ್ವವಿದ್ಯಾಲಯದ ಕುಲಪತಿಗಳ ಆಯ್ಕೆ ಪ್ರಕ್ರಿಯೆ ಕಾಯ್ದೆ ತಿದ್ದುಪಡಿ ಹಿನ್ನೆಲೆ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಖಂಡ ಎಚ್.ಎ ವೆಂಕಟೇಶ್,  ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯ ಕಾಯ್ದೆ 2000ಕ್ಕೆ ತಿದ್ದುಪಡಿ ತರಲು ಮುಂದಾಗಿರುವುದು ಅಪಾಯಕಾರಿ ಬೆಳವಣಿಗೆ ಎಂದು ಕಿಡಿಕಾರಿದ್ದಾರೆ.

ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಂಡಿಕೇಟ್ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಎಚ್.ಎ.  ವೆಂಕಟೇಶ್ , ಕಾಯ್ದೆ ತಿದ್ದುಪಡಿ ಹಿಂದೆ ಉನ್ನತ ಶಿಕ್ಷಣ ಕೇಂದ್ರವಾಗಿರುವ ವಿಶ್ವವಿದ್ಯಾನಿಲಯದ ಸ್ವಾಯತ್ತತೆಯನ್ನು ಮೊಟಕುಗೊಳಿಸುವ ಹುನ್ನಾರವಿದೆ. ಈಗಾಗಲೇ ರಾಜ್ಯದ ಹಲವು ವಿಶ್ವವಿದ್ಯಾನಿಲಯಗಳ ರ‍್ಯಾಂಕಿಂಗ್ ರಾಷ್ಟ್ರಮಟ್ಟದಲ್ಲಿ ಕುಸಿತಗೊಂಡಿದೆ.

ಇದೀಗ ಕಾಯ್ದೆ ತಿದ್ದುಪಡಿಯಿಂದಾಗಿ ವಿಶ್ವವಿದ್ಯಾನಿಲಯಗಳ ಗುಣಮಟ್ಟ ಇನ್ನಷ್ಟು ಹದಗೆಡುವ ಸಾಧ್ಯತೆಯಿದೆ. ಜನಾಭಿಪ್ರಾಯ ಪಡೆಯದೇ ಗೌಪ್ಯವಾಗಿ ಕಾಯ್ದೆ ತಿದ್ದುಪಡಿಗೆ ಮುಂದಾಗಿರುವುದು ಅನುಮಾನಾಸ್ಪದವಾಗಿದೆ. ವಿವಿಗಳ ಕುಲಪತಿಗಳ ನೇಮಕ ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವರಾಗಿರುವವರ ರಾಜಕೀಯ ನಿಲುವಿಗೆ ಅನುಗುಣವಾಗಿ ನಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಯುಜಿಸಿ ನಿಗಧಿಪಡಿಸಿದ ಶೈಕ್ಷಣಿಕ ಅರ್ಹತೆ, ಅಗತ್ಯ ಅನುಭವ ಕಡೆಗಣಿಸಲ್ಪಡಬಹುದು. ರಾಜಕೀಯ ಕಾರಣಕ್ಕೆ ಉನ್ನತ ಶಿಕ್ಷಣ ಕ್ಷೇತ್ರ ಕಲುಷಿತಗೊಳ್ಳಲಿದೆ. ಹಾಗಾಗಿ ರಾಜ್ಯ ಸರ್ಕಾರ ಯಾವ ಉದ್ದೇಶದಿಂದ ಈ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ ಎಂಬುದನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಕಾಯ್ದೆ ತಿದ್ದುಪಡಿ ಕುರಿತು ನುರಿತ ಶೀಕ್ಷಣ ತಜ್ಞರ ಸಲಹೆ ಸೂಚನೆಗಳನ್ನ ಪಡೆಯಬೇಕು.  ಕಾಯ್ದೆ ಮಾರ್ಪಾಡಿನ ಹಿಂದೆ  ಬಹಳ ದೊಡ್ಡ ಸಂಚು ಅಡಗಿದೆ. ಇದನ್ನು ಶಿಕ್ಷಣ ತಜ್ಞರು, ವಿಶ್ರಾಂತ ಕುಲಪತಿಗಳು, ರಾಜಕೀಯ ಮುಖಂಡರು ಉಗ್ರವಾಗಿ ವಿರೋಧಿಸಬೇಕು ಎಂದು ಎಚ್.ಎ ವೆಂಕಟೇಶ್ ಮನವಿ ಮಾಡಿದರು.

key words: mysore- amendment – Karnataka State University Act 2000 – dangerous- development-congress leader-HA Venkatesh.