ಜನರ ಸಮಸ್ಯೆ, ಅಹವಾಲು ಸ್ವೀಕರಿಸಿ ಪರಿಹಾರ ದೊರಕಿಸಿಕೊಡುವುದು ನನ್ನ ಗುರಿ-ಸಂಸದ ಯದುವೀರ್‌

ಮೈಸೂರು, ಜ. 7, 2026 (www.justkannada.in):  ಸಾರ್ವಜನಿಕರ ಸಮಸ್ಯೆಗಳು/ಅಹವಾಲುಗಳನ್ನು ಸ್ವೀಕರಿಸುವುದು ಮಾತ್ರವಲ್ಲ, ಅದಕ್ಕೆ ಪರಿಹಾರ ಕೊಡುವುದಕ್ಕೆ ಕೂಡ ನಾನು ಆದ್ಯತೆ ನೀಡುತ್ತೇನೆ. ಈಗಾಗಲೇ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದ್ದಾರೆ.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಗನಹಳ್ಳಿ ಗ್ರಾಮದ ಲಕ್ಷ್ಮಿದೇವಿ ಆವರಣದಲ್ಲಿ, ಬೆಲವತ್ತ ಗ್ರಾಮದ ಸಮುದಾಯ ಭವನದಲ್ಲಿ, ಆಲನಹಳ್ಳಿಯ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಜನ ಸಂಪರ್ಕ ಸಭೆ ನಡೆಸಿದ ನಂತರ ಸಂಸದರು ಮಾಹಿತಿ ನೀಡಿದ್ದಾರೆ.

“ಜನ ಸಂಪರ್ಕ ಸಭೆಗಳು ಮೂಲಕ ಜನರೊಂದಿಗೆ ನಂಟು ಬೆಳೆಯಲು ಅವರ ಸಮಸ್ಯೆಗಳನ್ನು ಖುದ್ದಾಗಿ ತಿಳಿಯಲು ಅನುಕೂಲವಾಗಲಿದೆ ಎಂದರು.

ಪ್ರತಿ ಪಂಚಾಯತ್‌ಗೆ ಭೇಟಿ ನೀಡಿ ಜನರ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವುದಲ್ಲದೆ ಅವುಗಳನ್ನು ತ್ವರಿತವಾಗಿ ಪರಿಹರಿಸಲು ಆದ್ಯತೆ ನೀಡುತ್ತೇವೆ. ರೈಲ್ವೆ, ರಸ್ತೆ ಮತ್ತು ಶಾಲಾ ಅಭಿವೃದ್ಧಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ಸಮಸ್ಯೆಗಳ ಬಗ್ಗೆ ನನಗೆ ಹಲವಾರು ಅಹವಾಲುಗಳು ಸಲ್ಲಿಕೆಯಾಗಿದೆ. ಅದೆಲ್ಲವನ್ನು ಬಗೆಹರಿಸಲು ಮುಂದಾಗುತ್ತೇನೆ, ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲೇ ಅಧಿಕಾರಿಗಳಿಗೆ ತಿಳಿಸಿ ಪರಿಹಾರ ದೊರಕಿಸಿಕೊಟ್ಟಿದ್ದೇವೆ ಎಂದರು.

ನಾಗರಿಕರು ಅಧಿಕಾರಿಗಳಿಗೆ ಅಹವಾಲು ಸಲ್ಲಿಸಿದಾಗಲೂ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಗತ್ಯವಿದ್ದರೆ ನಾನೇ ಇಲಾಖೆ ಅಥವಾ ಕಚೇರಿಗಳಿಗೆ ಭೇಟಿ ನೀಡಿ ಫಾಲೋ ಅಪ್‌ ಮಾಡುತ್ತೇನೆ ಎಂದು ಯದುವೀರ್‌ ಒಡೆಯರ್‌ ತಿಳಿಸಿದರು.

ಜನರಿಗಾಗಿ ನಮ್ಮ ಪ್ರಧಾನಮಂತ್ರಿಗಳು ಕೆಲಸ ಮಾಡುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಜನರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಿರುವುದು ಸ್ಪಷ್ಟವಾಗಿದೆ. ಹೀಗಾಗಿ ಜನರ ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದು ಸಂಸದರು ಹೇಳಿದರು.

ಇನ್ಮುಂದೆ ಈ ರೀತಿಯ ಜನಸಂಪರ್ಕ ಸಭೆಗಳನ್ನು ಹೆಚ್ಚಾಗಿ ಆಯೋಜಿಸಲಾಗುವುದು ಎಂದು ಜನರಿಗೆ ಸಂಸದರು ಭರವಸೆ ನೀಡಿದರು.

ಬಿಜೆಪಿ ನಗರಾಧ್ಯಕ್ಷರಾದ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ರಘು, ರುದ್ರಮೂರ್ತಿ, ಮಂಡಲ ಅಧ್ಯಕ್ಷರಾದ ಪೈಲ್ವಾನ್‌ ರವಿ, ವಸ್ತು ಪ್ರದರ್ಶನ ಪ್ರಾಧಿಕಾರ ಮಾಜಿ ಅಧ್ಯಕ್ಷ ಹೇಮಂತ್‌ ಗೌಡ, ಅಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು, ಗ್ರಾಮಸ್ಥರು ಹಾಜರಿದ್ದರು.

ಸಂಸದರಿಗೆ ಮಾಜಿ ಜಿಪಂ ಸದಸ್ಯರ ಅಭಿನಂದನೆ

“ನಮ್ಮ ಸಂಸದರು ನಮ್ಮ ಗ್ರಾಮಕ್ಕೆ ಭೇಟಿ ನೀಡಿ ಜನರಿಂದ ಎಲ್ಲಾ ಬೇಡಿಕೆಗಳನ್ನು ಸ್ವೀಕರಿಸುತ್ತಿರುವುದು ತುಂಬಾ ಸಂತೋಷ ತಂದಿದೆ. ನಮ್ಮ ಸಂಸದರು ಗ್ರಾಮದಲ್ಲಿ ಮತ್ತು ಇಡೀ ಕ್ಷೇತ್ರದಲ್ಲಿ ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಸಂಸದರು ನಮ್ಮ ಹೆಮ್ಮೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ದಿನೇಶ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

Key words: My goal, listen, people’s problems, solutions, MP Yaduveer