ಮೈಸೂರು, ನವೆಂಬರ್, 13,2025 (www.justkannada.in): ಕ್ಷೇತ್ರದ ವ್ಯಾಪ್ತಿಯಲ್ಲಿರುವ ಪಿರಿಯಾಪಟ್ಟಣದಲ್ಲಿ ತಂಬಾಕು ಬೆಳೆಗಾರರ ಸಂಖ್ಯೆ ಹೆಚ್ಚಾಗಿದ್ದು, ಇವರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ತಂಬಾಕು ಮಂಡಳಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಚನೆ ನೀಡಿದ್ದೇನೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ಪಿರಿಯಾಪಟ್ಟಣದಲ್ಲಿ ತಂಬಾಕು ಮಂಡಳಿಯ ಅಧಿಕಾರಗಳೊಂದಿಗೆ ಸಭೆ ನಡೆಸಿದ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಸದ ಯದುವೀರ್, ಬೆಳಗಾರರ ಹಿತ ಕಾಪಾಡಲು ನಮ್ಮ ಕೇಂದ್ರ ಬಿಜೆಪಿ ಸರ್ಕಾರ ಬದ್ಧವಾಗಿದೆ ಎಂದರು.
ಮಂಡಳಿಯ ನಿರ್ದೇಶಕರು ಮತ್ತು ರೈತರೊಂದಿಗೆ ತಂಬಾಕು ಬೆಳೆಯುವ ಸಮುದಾಯದ ತುರ್ತು ಕಾಳಜಿಗಳನ್ನು ಗಮನಕ್ಕೆ ತರಲಾಯಿತು. ನಂತರ ಇದಕ್ಕೆ ಪರಿಹಾರ ಒದಗಿಸುವ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಹೇಳಿದ್ದಾರೆ.
ರೈತರಿಗೆ ನ್ಯಾಯಯುತ ಬೆಲೆ ಸಿಗಬೇಕಾದರೆ ದರ ಹೆಚ್ಚಿಸಬೇಕು, ತಂಬಾಕು ಹರಾಜು ಮತ್ತು ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಬೇಕು, ತಂಬಾಕು ಮಂಡಳಿ ಕಚೇರಿಗಳಿಗೆ ಭೇಟಿ ನೀಡುವ ರೈತರಿಗೆ ಸೌಲಭ್ಯಗಳು ಮತ್ತು ಸೌಕರ್ಯಗಳನ್ನು ಒದಗಿಸಬೇಕು ಎಂದು ಸಭೆಯಲ್ಲಿ ಸೂಚನೆ ನೀಡಲಾಯಿತು ಎಂದು ಸಂಸದ ಯದುವೀರ್ ತಿಳಿಸಿದ್ದಾರೆ.
7 ಕೋಟಿ ರೂ. ಹಗರಣವನ್ನು ನಿಷ್ಪಕ್ಷಪಾತ ತನಿಖೆಗಾಗಿ ಸಿಬಿಐಗೆ ವಹಿಸಬೇಕು. ನೋಂದಾಯಿತ ಕಾರ್ಡ್‌ದಾರರಿಗೆ ಮದುವೆ ಮತ್ತು ಶಿಕ್ಷಣ ಉದ್ದೇಶಗಳಿಗಾಗಿ ಸಾಲದ ಮಿತಿ ಹೆಚ್ಚಿಸಬೇಕು. ರೈತನ ಮರಣದ ಸಂದರ್ಭದಲ್ಲಿ ಕುಟುಂಬಗಳಿಗೆ ನೀಡಲಾಗುವ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು (ಪ್ರಸ್ತುತ ₹50,000) ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಂಸದ ಯದುವೀರ್ ಮಾಹಿತಿ ನೀಡಿದ್ದಾರೆ.
ರೈತ ಸಮುದಾಯಕ್ಕೆ ನ್ಯಾಯ, ಪಾರದರ್ಶಕತೆ ಖಚಿತಪಡಿಸಿಕೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಲಾಯಿತು ಎಂದು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ.
Key words: MP Yaduveer, fair price, tobacco, growers







