Sunday, August 9, 2026

BDA Apartments

Home Front Page ರೇಷ್ಮೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಅನುದಾನ ನೀಡಿ: ಸಿಎಂಗೆ ಸಚಿವ ಡಾ. ನಾರಾಯಣ ಗೌಡ...

ರೇಷ್ಮೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಅನುದಾನ ನೀಡಿ: ಸಿಎಂಗೆ ಸಚಿವ ಡಾ. ನಾರಾಯಣ ಗೌಡ ಮನವಿ

ಬೆಂಗಳೂರು, ಏಪ್ರಿಲ್ 17, 2020 (www.justkannada.in):
ರೇಷ್ಮೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂದು ಸಚಿವ ಡಾ. ನಾರಾಯಣ ಗೌಡ ಅವರು ಸಿಎಂ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದಾರೆ.

ಇಂದು ಸಿಎಂ ಯಡಿಯೂರಪ್ಪ ಅವರನ್ನ ಸಿಎಂ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಅಗತ್ಯ ಅನುದಾನದ ವಿಚಾರವಾಗಿ ಡಿಸಿಎಂ ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಚಿವರು ಪ್ರಸ್ತಾಪಿಸಿದ್ದರು. ರೇಷ್ಮೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಅವರ ನೆರವಿಗೆ ಧಾವಿಸಲೇಬೇಕು. ಈಗಾಗಲೆ ಇಲಾಖೆಯಿಂದ ರೇಷ್ಮೆ ನೂಲು ಬಿಚ್ಚಣಿಕೆದಾರರ ಕಚ್ಚಾ ರೇಷ್ಮೆಯನ್ನ ಅಡಮಾನವಾಗಿ ಇಟ್ಟು ಸಾಲ ನೀಡಲಾಗುತ್ತಿದೆ. ಹೀಗಾಗಿ ಹೆಚ್ಚಿನ ಅನುದಾನ ದೊರಕಿದಲ್ಲಿ, ರೇಷ್ಮೆ ಬೆಳೆಗಾರರ ಸಮಸ್ಯೆಯನ್ನ ಪರಿಹರಿಸಬಹುದು. ಅದಕ್ಕೆ ಅಗತ್ಯ ಇರುವ ಅನುದಾನ ದೊರಕುವಂತಾಗಬೇಕು, ಈ ನಿಟ್ಟಿನಲ್ಲಿ ಇಲಾಖೆಯಿಂದ ಈಗಾಗಲೆ ಪ್ರಸ್ತಾವನೆ ಕೂಡ ಸಿದ್ದಪಡಿಸಲಾಗಿದೆ ಎಂದು ಸಭೆಯಲ್ಲಿ ಡಿಸಿಎಂ ಅಶ್ವತ್ಥನಾರಾಯಣ ಅವರ ಮುಂದೆ ಪ್ರಸ್ತಾಪಿಸಿದ್ದರು.

ಇಂದು ಪ್ರಸ್ತಾವನೆಯನ್ನ ಮುಖ್ಯಮಂತ್ರಿಗಳಗೆ ನೀಡಲಾಗಿದೆ. ರಾಜ್ಯದಲ್ಲಿ ಪ್ರಸ್ತುತ ಕೊವಿಡ್ – 19 ಸಂಬಂಧದ ಲಾಕ್ ಡೌನ್ ಪರಿಸ್ಥಿತಿಯಲ್ಲಿ ರೇಷ್ಮೆ ಗೂಡಿನ ದರ ಕುಸಿಯುತ್ತಿರುವುದರಿಂದ ಹಾಗೂ ಈ ರೇಷ್ಮೆ ಗೂಡನ್ನ ಖರೀದಿಸುವ ರೇಷ್ಮೆ ನೂಲು ಬಿಚ್ಚಾಣಿಕೆದಾರರು ಕಡಿಮೆ ದರದಲ್ಲಿ ಖರೀದಿಸುತ್ತಿರುವುದರಿಂದ ರಾಜ್ಯಾಧ್ಯಂತ ಸುಮಾರು ಒಂದುವರೆ ಲಕ್ಷ ರೇಷ್ಮೆ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮುಖ್ಯಮಂತ್ರಿಗಳಲ್ಲಿ ಸಚಿವ ಡಾ. ನಾರಾಯಣ ಗೌಡ ಅವರು ವಿವರಿಸಿದ್ದಾರೆ. ಅಲ್ಲದೆ ರೇಷ್ಮೆ ನೂಲನ್ನ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ(ಕೆಎಸ್‍ಎಮ್‍ಬಿ) ವತಿಯಿಂದ ತಾಂತ್ರಿಕ ಸಮಿತಿ ನಿಗದಿಪಡಿಸಿರುವ ದರಗಳಲ್ಲಿ ಖರೀದಿಸುವುದು/ ನಿಯಮಾನುಸಾರ ಒತ್ತೆ ಇಟ್ಟು ಸಾಲ ನೀಡಿದ್ದಲ್ಲಿ ನೇರವಾಗಿ ರಾಜ್ಯದಲ್ಲಿ ಸಮಸ್ತ ರೇಷ್ಮೆ ಬೆಳೆಗಾರರಿಗೆ ಅನುಕೂವಾಗುತ್ತದೆ. ಈ ಹಿನ್ನೆಲೆಯಲ್ಲಿ ರೇಷ್ಮೆ ಇಲಾಖೆಗೆ ಅಗತ್ಯವಿರುವ ರೂ. 50 ಕೋಟಿ ಅನುದಾನವನ್ನು ಒದಗಿಸುವಂತೆ ಸಚಿವ ಡಾ. ನಾರಾಯಣಗೌಡ ಅವರು ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

ಸಚಿವರ ಮನವಿಯನ್ನ ಆಲಿಸಿರುವ ಮುಖ್ಯಮಂತ್ರಿಗಳು ಶೀಘ್ರದಲ್ಲಿಯೇ ಅನುಮೋದನೆ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ.