ಜಿ.ಎನ್. ಮೋಹನ್’ರ ಕ್ವಾರಂಟೈನ್ ಮೆಲುಕು: ಹಾಳಾದೊವೆರಡು ಮೊಲೆ ಬಂದು…

ನಾಲ್ಕು ಪುಟ ತಿರುಗಿಸಿರಬಹುದು ಅಷ್ಟೇ
ಕೈ ಗಕ್ಕನೆ ನಿಂತಿತು
ಒಂದಷ್ಟು ಹೊತ್ತು ಅಷ್ಟೇ,
ನನ್ನ ಬೆರಳುಗಳಿಗೆ ಪುಟ ತಿರುಗಿಸುವುದೇ ಮರೆತು ಹೋಯಿತು
ಕಣ್ಣುಗಳಿಗೆ ಎದುರಿಗಿದ್ದ ಅಕ್ಷರ ಕ್ರಮೇಣ ಕಾಣಿಸದಂತಾಗಿ ಹೋಯಿತು
ನನ್ನ ಕಣ್ಣುಗಳು ಒದ್ದೆಯಾಗಿ ಹೋಗಿದ್ದವು
ಒಂದು ಹನಿ ಬೇಡ ಬೇಡವೆಂದರೂ ಅದೇ ಹಾಳೆಗಳ ಮೇಲೆ ಜಾರಿ ಬಿದ್ದೇ ಬಿಟ್ಟಿತು

‘ಮತ್ತದೇ ಸಂಜೆ.. ಅದೇ ಏಕಾಂತ..’ ಅನಿಸಿಬಿಟ್ಟಾಗಲೆಲ್ಲಾ ನನ್ನ ಮನಸ್ಸು ತಡಕುವುದು ಪುಸ್ತಕಗಳನ್ನೇ
ಹಾಗೆ ಅಂದೂ ಸಹಾ ಕಪಾಟಿನಲ್ಲಿದ್ದ ಒಂದು ಪುಸ್ತಕವನ್ನು ಎಳೆದುಕೊಂಡಿತ್ತು
ನಾಲಿಗೆ ಮತ್ತೆ ಮತ್ತೆ ಅದೇ ಹಲ್ಲಿಗೆ ಹೊರಳುವ ಹಾಗೆ ನಾನು ಕೈಗೆತ್ತಿಕೊಂಡಿದ್ದು
ಚಂದ್ರಶೇಖರ ಆಲೂರರ ‘ಆನು ಒಲಿದಂತೆ ಹಾಡುವೆ’
ನನ್ನ ಕಾಲಕ್ಕೆ ಜಾರಲು ಆ ಪುಸ್ತಕ ಒಂದು ನೆಪ ಅಷ್ಟೇ

ಹಾಗೆ ಜಾರುತ್ತಿರುವಾಗಲೇ ಅದು ಕಣ್ಣಿಗೆ ಬಿತ್ತು-
‘ಸುಮಕೆ ಸೌರಭ ಬಂದ ಗಳಿಗೆ’

ನನ್ನ ಮನಸ್ಸು ಓಡಿದ್ದು ಅಂಗೋಲಾದ ಕಡೆಗೆ
ದೂರದ ಆಫ್ರಿಕಾ ಖಂಡದ ಅಂಗೋಲಾ ದೇಶದ ಕಡೆಗೆ

ಒಂದಷ್ಟು ದಿನದ ಹಿಂದೆ ಗೆಳೆಯ ಪ್ರಸಾದ್ ನಾಯ್ಕ್ ಫೋನ್ ಮಾಡಿದ್ದ
ನಿಮ್ಮ ಮೇಲ್ ನೋಡಿ ಅಂತ
ನಾನು ಸುರತ್ಕಲ್ ನಿಂದ ಅಂಗೋಲಾಗೆ ಹಾರಿದ ಹುಡುಗ ಇನ್ನೇನು ಬರೆದಿರುತ್ತಾನೆ ಎಂದುಕೊಂಡೇ ಕಂಪ್ಯೂಟರ್ ಆನ್ ಮಾಡಿದ್ದೆ

ಮೊದಲ ಬಾರಿಗೆ ವಿದೇಶಕ್ಕೆ ಹೋದವರು ಬೆರಗುಗಣ್ಣು ಬಿಟ್ಟುಕೊಂಡು ಅಲ್ಲಿನ ಭರ್ಜರಿ ಕಟ್ಟಡವನ್ನೋ, ಪುಷ್ಕಳ ಊಟವನ್ನೋ ಇಲ್ಲವೇ ಪಬ್ ನಲ್ಲಿ ಬಿಯರ್ ಹೀರಿದ್ದನ್ನೋ ಬಣ್ಣಿಸಿರುತ್ತಾರೆ

ಹಾಗೆಂದು ಬಲವಾಗಿ ನಂಬಿಕೊಂಡೇ ಕ್ಲಿಕ್ ಮಾಡಿದ ನಾನು ಗರ ಹೊಡೆದು ಕುಳಿತುಬಿಟ್ಟೆ

ಪ್ರಸಾದ್ ಒಂದು ಕಗ್ಗತ್ತಲ ಕಾಲವನ್ನು ಹಿಡಿದು ನನ್ನೆದುರು ನಿಂತಿದ್ದ

ಇನ್ನೂ ನಿನ್ನೆ ಮೊನ್ನೆ ಅಂಗಳದಲ್ಲಿ ಕುಂಟಾಬಿಲ್ಲೆ ಆಡುತ್ತಿದ್ದ ಹುಡುಗಿಯನ್ನು ಹುಡುಕಿಕೊಂಡು ಯೌವ್ವನ ಹೆಜ್ಜೆಯಿಡುವಾಗ ಅದನ್ನು ನಾನು ‘ಸುಮಕೆ ಸೌರಭ ಬರುವ ಗಳಿಗೆ’ ಎಂದೇ ತಿಳಿದಿದ್ದೆ

ನಾನೊಬ್ಬನೇ ಏಕೆ? ಆ ಪುಸ್ತಕವೂ ಹಾಗೇ ನಂಬಿತ್ತು.

ಆದರೆ ಅಲ್ಲೊಂದು ಲೋಕವಿತ್ತು.

ಯೌವನವೆನ್ನುವುದು ಸದ್ದು ಮಾಡದೆ, ಕಳ್ಳ ಹೆಜ್ಜೆ ಹಾಕುತ್ತ ಒಳಗೆ ಲಗ್ಗೆ ಹಾಕುತ್ತದೆ ಎನ್ನುವುದು ಒಂದು ಭಯಾನಕ ದುಸ್ವಪ್ನವಾಗಿದ್ದ ಲೋಕ

ಅಂಗಳದಲ್ಲಿ ಆಡುವ ಮಗು ನಾನು ದೊಡ್ಡವಳಾಗಿಬಿಟ್ಟರೆ ಎಂದೇ ಬೆಚ್ಚಿ ಬೀಳುವ ಲೋಕ

ನನಗೆ ಯೌವನ ಬೇಡ ಎಂದು ನಿದ್ರೆಯಲ್ಲಿ ದುಃಸ್ವಪ್ನ ಕಂಡು ಚೀರಿ ಎದ್ದು ಕುಳಿತುಕೊಳ್ಳುವವರ ಲೋಕ

ಯೌವನ ಇನ್ನೇನು ನನ್ನನ್ನು ತಾಕುತ್ತದೆ ಎನ್ನುವ ಕಾರಣಕ್ಕೆ
ಇದ್ದ ಧೈರ್ಯವೆಲ್ಲಾ ಕುಸಿದು ಮನಶ್ಶಾಸ್ತ್ರಜ್ಞರನ್ನು ಹುಡುಕಿ ಹೋಗುತ್ತಿರುವವರ ಲೋಕ

ಅಷ್ಟೇ ಅಲ್ಲ, ಯೌವನದ ಆಗಮನವನ್ನು ಧಿಕ್ಕರಿಸಿ ಸಾವಿಗೆ ಶರಣಾಗುತ್ತಿದ್ದವರ ಲೋಕ

ಎದೆ ಗುಬ್ಬಿ ಮೂಡುತ್ತಿದೆ ಎಂದರೆ ಸಾಕು ಎಷ್ಟೋ ಮನೆಗಳಲ್ಲಿ ಬೆಂಕಿ ಒಲೆ ಸಿದ್ಧವಾಗುತ್ತಿತ್ತು
ಕಲ್ಲು, ಬಟ್ಟಲು ಆ ಬೆಂಕಿಯಲ್ಲಿ ಕಾಯುತ್ತಿದ್ದವು
ತೆಂಗಿನ ಚಿಪ್ಪಿನೊಳಗೆ ಕೆಂಡ ಸೇರುತ್ತಿದ್ದವು
ಹಾಗೆ ತಯಾರಾದ ಬೆಂಕಿಯನ್ನು ಕೈನಲ್ಲಿಟ್ಟುಕೊಂಡ ಅಮ್ಮಂದಿರು
ಮಕ್ಕಳನ್ನು ಹಿಡಿದುಕೊಂಡು ಇನ್ನು ಮೊಲೆ ಮೂಡುವುದೇ ಇಲ್ಲ
ಎನ್ನುವಂತೆ ಅದನ್ನು ಸುಟ್ಟು ಹಾಕಿಬಿಡುತ್ತಿದ್ದರು

ಹಾಹಾಕಾರ, ನೋವು, ಅಳು ಯಾವುದೂ ಈ ಎದೆ ಸುಡುವಿಕೆಯನ್ನು ತಡೆಯುತ್ತಿರಲಿಲ್ಲ

ಮೊಲೆ ಇಲ್ಲವಾಗಿಬಿಡಬೇಕು ಎನ್ನುವುದಷ್ಟೆ ಅಲ್ಲಿದ್ದ ಆತಂಕ

ಅದನ್ನು ‘ಬ್ರೆಸ್ಟ್ ಐರನಿಂಗ್’ ಎನ್ನುತ್ತಾರೆ
‘ಎದೆ ಇಸ್ತ್ರಿ’

ಒಂದು ದಿನ ಹೀಗೆ ಮನಸ್ಸಿಗೆ ಏನು ಕವಿದುಕೊಂಡಿತ್ತೋ
ನಾನು ಹಾಗೂ ಎಸ್ ಕೆ ಕರೀಂ ಖಾನ್ ಕಡಲ ತಡಿಯಲ್ಲಿ ಹೆಜ್ಜೆ ಹಾಕುತ್ತಿದ್ದೆವು
ಕತ್ತಲ ರಾತ್ರಿ,
ಎಲ್ಲೂ ಕಾಣದ ಚಂದ್ರಮನ ಬೆಳಕು ಮನಸ್ಸಿಗೆ ಇನ್ನಷ್ಟು ಕಳವಳ ತುಂಬಿತ್ತು

ಅವರು ಹೇಳಿ ಕೇಳಿ ‘ಜಾನಪದ ಜಂಗಮ’
ನನ್ನ ಮನಸ್ಸಿಗೆ ಕಳವಳಕ್ಕೆ ಮಾತು ಕೊಟ್ಟರೋ ಎನ್ನುವಂತೆ ದನಿ ಎತ್ತಿದರು

‘ಎಮ್ಮೇಯ ಮೇಯ್ಸ್ಕೊಂಡು ಸುಮ್ಮಾನೆ ನಾನಿದ್ದೆ
ಹಾಳಾದೋವೆರಡು ಮೊಲೆ ಬಂದು। ನನ್ನಪ್ಪ
ಕಂಡೋರ್ಗೆ ನನ್ನ ಕೊಡುತಾನೆ’

ಅರೆ! ನಾನು ಎಂದೂ ಕೇಳದ ಸಾಲು ಅದು
ಆಗ ತಾನೇ ಯೌವನವನ್ನು ಕೈಗೆಟುಕಿಸಿಕೊಂಡಿದ್ದ,
‘ಕಾಮಾನ ಬಾಣ ಆತುರ ತರವೇನಾ’ ಎನ್ನುವ ಹುಮ್ಮಸ್ಸಿನಲ್ಲಿದ್ದವ

ನನಗೆ ಕಂಡಿದ್ದೆಲ್ಲವೂ ಕಾಮನ ಬಾಣವೇ ಆಗಿ ಕಾಣುತ್ತಿತ್ತು
ಪ್ರತೀ ಮರದ ಹಿಂದೆಯೂ ಹೂ ಬಿಲ್ಲ ಹಿಡಿದ ಮನ್ಮಥರೇ
ಯೌವನ ಎನ್ನುವುದು ನನಗೆ ಅಂತಹ ಕನಸು ಕೊಟ್ಟಿತ್ತು

ಆದರೆ.. ಆದರೆ ಇಲ್ಲಿ ಕಡಲ ಬೋರ್ಗರೆತವನ್ನೂ ಮೀರುವಂತೆ
ಈ ಅಜ್ಜ ಕರೀಂಖಾನ್ ಹಾಡುತ್ತಿರುವುದಾದರೂ ಏನು?

ತನ್ನ ಬಾಳಿ ಬದುಕಿದ ಮನೆಯನ್ನ, ತನ್ನ ತವರನ್ನ, ತನ್ನ ಖುಷಿಯನ್ನ ಆಗಲಿ ಹೋಗಬೇಕಲ್ಲಾ ಎನ್ನುವ ಕಾರಣಕ್ಕೆ
ಮುಂದೆಲ್ಲಿ ಹೋಗುತ್ತೇನೋ, ಏನು ಕಾಣಬೇಕಿದೆಯೋ ಎನ್ನುವ ಕಾರಣಕ್ಕೋ
ಆಕೆ ಈ ಅಗಲಿಕೆಗೆ ಕಾರಣವಾಗಿ ಮೂಡಿರುವ ತನ್ನ ಮೊಲೆಯನ್ನೇ ದ್ವೇಷಿಸುತ್ತಿದ್ದಾಳೆ

ಯಾವುದು ಸಂಭ್ರಮದ ಸೂಚಕ ಎಂದು ನಾನಂದುಕೊಂಡಿದ್ದೆನೋ ಅದನ್ನು ಆಕೆ
‘ಹಾಳಾದೋವೆರಡು’ ಎಂದು ಬಣ್ಣಿಸುತ್ತಿದ್ದಾಳೆ

ಅಲ್ಲಿ ಆ ಅಂಗೋಲಾದ ಹುಡುಗ ಹೇಳುತ್ತಿರುವ ಕ್ಯಾಮೆರೂನ್ ನ ಕಥೆಯಲ್ಲಿ
ಮೊಲೆಗಳನ್ನೇ ಸುಟ್ಟು ಹಾಕುತ್ತಿದ್ದಾರೆ

ತನ್ನ ಮನೆಯಲ್ಲಿರುವ ಹುಡುಗಿಗೆ ಮೊಲೆ ಬಂತು ಎಂದು ಗೊತ್ತಾದರೆ ಸಾಕು
ಎಲ್ಲಿ ಅವಳನ್ನು ಅತ್ಯಾಚಾರ ಮಾಡಿಬಿಡುತ್ತಾರೋ, ಎಲ್ಲಿ ಹೊತ್ತೊಯ್ದುಬಿಡುತ್ತಾರೋ
ಎಲ್ಲಿ ಅವಳನ್ನು ಕೊಂದುಬಿಡುತ್ತಾರೋ ಎನ್ನುವ ತಾಯಂದಿರ ಆತಂಕವೇ ಈ ಎಲ್ಲಕ್ಕೂ ಕಾರಣವಾಗಿ ಹೋಗಿತ್ತು

ಎದೆ ಎನ್ನುವುದೇ ಬೇಡ ಎನ್ನುವ ನಿರ್ಧಾರಕ್ಕೆ ಬಂದುಬಿಟ್ಟಿದ್ದರು

ಚೀನಾದಲ್ಲಿ ಹೀಗೆ ಪಾದಗಳನ್ನು ಬೆಳೆಯಲು ಬಿಡುವುದಿಲ್ಲ ಎಂದು ಓದಿ ಗೊತ್ತಿತ್ತು
ಪಾದಗಳು ಬೆಳೆಯದಂತೆ ಹಸುಗೂಸುಗಳಿಗೆ ಇನ್ನೂ ತೊಟ್ಟಿಲಲ್ಲಿರುವಾಗಲೇ
ಗಟ್ಟಿ ಬಟ್ಟೆ ಕಟ್ಟಲು ಶುರು ಮಾಡುತ್ತಾರೆ
ಇದು ಇನ್ನೂ ಎಷ್ಟೋ ವರ್ಷಗಳ ಕಾಲ ಮುಂದುವರೆಯುತ್ತದೆ
ಇನ್ನು ಮುಂದಕ್ಕೆ ಪಾದ ಬೆಳೆಯುವುದಿಲ್ಲ ಎಂದು ಗೊತ್ತಾಗುವವರೆಗೆ

ಆದರೆ ಅಲ್ಲಿ ಅದು ಸೌಂದರ್ಯಕ್ಕಾಗಿ.
ಪುಟ್ಟ ಪಾದಗಳೇ ಸೌಂದರ್ಯ ಎಂದು ನಂಬಿರುವವರ ನಾಡು ಅದು
ಅಲ್ಲಿ ಅದು ಇನ್ನೂ ಚೆನ್ನಾಗಿ ಕಾಣಸಿಕೊಳ್ಳಲು ಮಾಡಿಕೊಂಡಿದ್ದ ದಾರಿ

ಆದರೆ ಇಲ್ಲಿ ಸೌಂದರ್ಯವನ್ನೇ ಸುಟ್ಟುಕೊಳ್ಳುತ್ತಿದ್ದರು
ಅದು ಅವರಿಗೆ ಆಯ್ಕೆಯಾಗಿರಲಿಲ್ಲ, ಆತಂಕದ ಕರಿಮೋಡವಾಗಿತ್ತು

ಅಲ್ಲಿಗೊಬ್ಬ ಬಂದ. ಗಿಲ್ಡಾಸ್ ಪಾರ್ ಎಂಬಾತ.
‘ಪ್ಲಾಸ್ಟಿಕ್ ಡ್ರೀಮ್’ ಎನ್ನುವ ತನ್ನ ಯೋಜನೆಗೆ ಫೋಟೋಗಳನ್ನು ಕ್ಲಿಕ್ಕಿಸಲು

ಆಗಲೇ ಆತ ಬೆಚ್ಚಿ ಬಿದ್ದದ್ದು
ಕ್ಯಾಮೆರೂನ್ ನಲ್ಲಿದೆ ಎಂದುಕೊಂಡಿದ್ದ ಬ್ರೆಸ್ಟ್ ಐರನಿಂಗ್ ನೋಡಿದರೆ ಆಫ್ರಿಕಾದ ಬಹುತೇಕ ಎಲ್ಲಾ ದೇಶಗಳಲ್ಲೂ ಇತ್ತು

ಅಷ್ಟೇ ಅಲ್ಲ ನಿಧಾನವಾಗಿ ಇತರ ದೇಶಕ್ಕೂ ಹೆಜ್ಜೆ ಹಾಕಿತ್ತು

ಆಗ ಆತ ತನ್ನ ಯೋಜನೆಯನ್ನೇ ಬದಲಿಸಿದ

ತಾಯಂದಿರ ಮನ ಒಲಿಸಿ ಈ ಕರಾಳ ಆಚರಣೆಯನ್ನು ಸಮಾಜದ ಎದುರು ಫೋಟೋಗಳ ಮೂಲಕ ತೆರೆದಿಡುತ್ತಾ ಹೋದ
ಗೊತ್ತಿಲ್ಲ ಎಷ್ಟು ಮಕ್ಕಳು ಬಚಾವಾಗಿದ್ದಾರೆ ಎಂದು

ಇದೆಲ್ಲಾ ಓದುತ್ತಿರುವಾಗಲೇ ನನ್ನಒಳಗೆ ಏನೋ ಒಂದು ನೆನಪು ಕದಲಿದಂತಾಯ್ತು

ಮಸುಕು ಮಸುಕಾಗಿ ಮೂಡುತ್ತಿದ್ದ ಪದಗಳನ್ನು ಜೋಡಿಸುತ್ತಾ ಹೋದೆ

‘ಮೈ ನೆರೆದ ಮಗಳೊಬ್ಲು ಮನೆಯಲ್ಲಿದ್ದಾಳಂದ್ರೆ
ಊರ ಒಡೆಯ ಸೀರೆ ಕುಬುಸ ತರತೀನಂದ
ಕಲ್ಲು ಮುಳ್ಳಿಗೆ ಹೇಳಲಾ ನನ ಗೋಳ
ನಾನೇ ಕಲ್ಲಾಗೋಗಲಾ..’

ಹಳ್ಳಿ ಹಳ್ಳಿಗಳೊಳಗೆ ಅದೇ ಎದೆ ಗುಬ್ಬಿ ಮೂಡುತ್ತಿದ್ದ ತಕ್ಷಣ ಎರಗುತ್ತಿದ್ದ
ಹದ್ದುಗಳ ಬಗ್ಗೆ ಕೆ ರಾಮಯ್ಯ ಬರೆದ ಕವಿತೆಯಿದು
ಎಲ್ಲರ ಬಾಯಲ್ಲಿ ಹೋರಾಟದ ಹಾಡಾಗಿ ಚಿಮ್ಮಿತ್ತು

ಈಗ ಹೇಳಿ ‘ಸುಮಕೆ ಸೌರಭ ಬಂದ ಗಳಿಗೆ’ ಯಾವುದು??