ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರುದ್ಯೋಗಿ ಯುವ ಜನರಿಗೆ ನರಕ ತೋರಿಸಿದೆ- ಸಿದ್ದರಾಮಯ್ಯ ಟೀಕೆ.

ಬೆಂಗಳೂರು,ಜೂನ್,7,2022(www.justkannada.in): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಎಂಟು ವರ್ಷದಲ್ಲಿ ನಿರುದ್ಯೋಗಿ ಯುವ ಜನರಿಗೆ ನರಕ ತೋರಿಸಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಿದ್ದರಾಮಯ್ಯ ಹೇಳಿರುವುದಿಷ್ಟು…

ಯಾವುದೇ ದೇಶದ ಆರ್ಥಿಕತೆಗೆ ವೇಗ ಬರುವುದು ಅಲ್ಲಿನ ಯುವ ಜನರು ದುಡಿಮೆಯಲ್ಲಿ ತೊಡಗಿಕೊಂಡಾಗ ಮಾತ್ರ. ಜನರು ಖರ್ಚು ಮಾಡುತ್ತಿದ್ದರೆ ದೇಶದ ಆರ್ಥಿಕತೆಯ ಬೆಳವಣಿಗೆ ಸಮರ್ಪಕವಾಗಿರುತ್ತದೆ. ದೇಶವನ್ನು ಮುನ್ನಡೆಸುವ ಜವಾಬ್ಧಾರಿ ಹೊತ್ತವರಿಗೆ ಇಷ್ಟು ಜ್ಞಾನವಿಲ್ಲದೆ ಹೋದರೆ ಅಂಥ ದೇಶ ಅರಾಜಕತೆಯತ್ತ ಸಾಗಿ ಅಧೋಗತಿಗೆ ಇಳಿಯುತ್ತದೆ. ಇದಕ್ಕೆ ಸದ್ಯ ಭಾರತವೇ ಉದಾಹರಣೆ.

ಎಂಜಿನಿಯರಿಂಗ್ ಮುಂತಾದ ಪದವಿ, ಸ್ನಾತಕೋತ್ತರ ಪದವಿ ಮುಗಿಸಿರುವ ದೇಶದ ಯುವ ಜನತೆ ಕೆಲಸ ಕೇಳಿದರೆ ಮೋದಿಯವರು ಪಕೋಡ ಮಾರಿ ಎನ್ನುತ್ತಾರೆ. ಒಬ್ಬ ಇಂಜಿನಿಯರ್ ಅನ್ನು ಸಿದ್ಧಪಡಿಸಲು ದೊಡ್ಡ ಮೊತ್ತದ ತೆರಿಗೆ ಹಣವನ್ನು ಆತನ ಮೇಲೆ ವಿನಿಯೋಗಿಸಲಾಗಿರುತ್ತದೆ. ಇಂದು ದೇಶದ ಕೋಟ್ಯಾನುಕೋಟಿ ಪದವೀಧರರು ಹಳ್ಳಿಗಳಲ್ಲಿ ಅವಮಾನ ಅನುಭವಿಸುತ್ತಿದ್ದಾರೆ. ನಗರಗಳಲ್ಲಿ ಸೆಕ್ಯುರಿಟಿ ಗಾರ್ಡುಗಳಾಗಿ, ಟ್ಯಾಕ್ಸಿ ಚಾಲಕರಾಗಿ, ಸ್ವಿಗ್ಗಿ, ಝೊಮ್ಯಾಟೊ ಮುಂತಾದ ಕಡೆ ಸೇಲ್ ಮಾಡುವವರಾಗಿ, ಗಾರ್ಮೆಂಟುಗಳಲ್ಲಿ 8-10 ಸಾವಿರಕ್ಕೆ ದುಡಿಯುತ್ತಿದ್ದಾರೆ.

ಬಿಜೆಪಿಯು ಒಂದು ಕಾಲದಲ್ಲಿ ಪದೆ ಪದೆ ಪ್ರತಿಭಾ ಪಲಾಯನದ ಬಗ್ಗೆ ಮಾತನಾಡುತ್ತಿತ್ತು. ಆದರೆ 2014 ರಿಂದ 2021 ರ ವೇಳೆಗೆ 7 ವರ್ಷಗಳಲ್ಲಿ 8 ಲಕ್ಷ ಜನ ಭಾರತದ ನಾಗರಿಕತ್ವವನ್ನೆ ತೊರೆದು ಬೇರೆ ದೇಶಗಳಿಗೆ ಹೋಗಿ ನೆಲೆಸಿದ್ದಾರೆ. ವಿಜ್ಞಾನ, ಅರ್ಥಶಾಸ್ತ್ರ, ಇಂಜಿನಿಯರಿಂಗ್, ಬಾಹ್ಯಾಕಾಶ ಮುಂತಾದ ಕ್ಷೇತ್ರಗಳಲ್ಲಿನ ಬುದ್ಧಿವಂತ ಯುವಕರು ದೇಶದಲ್ಲಿ ಭವಿಷ್ಯ ರೂಪಿಸಿಕೊಳ್ಳುವ ಅವಕಾಶ ಮತ್ತು ಭರವಸೆಗಳನ್ನು ಕಾಣದೆ ದೇಶ ತೊರೆಯುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಯುವ ಭಾರತದ ಭಾರತದ ಇಂದಿನ ಸರಾಸರಿ ವಯಸ್ಸು 28.3 ವರ್ಷ. ಇಲ್ಲಿ 35 ವರ್ಷದ ಒಳಗಿನ ಯುವ ಸಮೂಹ ಶೇ.65 ರಷ್ಟಿದೆ. ರಾಷ್ಟ್ರವೊಂದರ ಇತಿಹಾಸದಲ್ಲಿ ಬಹಳ ಅಪರೂಪಕ್ಕೆ ಈ ರೀತಿಯ ಅವಕಾಶಗಳು ದೊರೆಯುತ್ತವೆ. 25 ವರ್ಷದೊಳಗಿನÀವರ ಸಂಖ್ಯೆ ಶೇ.50 ರಷ್ಟಿದೆ. 2014 ರಲ್ಲಿ 25 ವರ್ಷದವರಿದ್ದ ಯುವಕರು 2024 ಕ್ಕೆ 35 ವರ್ಷದವರಾಗುತ್ತಾರೆ. 20 ವರ್ಷದವರು 30 ವರ್ಷದವರಾಗುತ್ತಾರೆ. ಆದರೆ ಏರುತ್ತಿರುವ ನಿರುದ್ಯೋಗದಿಂದಾಗಿ 35 ವರ್ಷದ ಯುವಕರು ಬದುಕು ಕಟ್ಟಿಕೊಳ್ಳುವ ಅವಕಾಶ ಶೇ.75 ರಷ್ಟು ಕುಸಿದು ಹೋಗುತ್ತಿದೆ. ಭಾರತೀಯರ ತಲಾವಾರು ಆದಾಯದ ಜಿಡಿಪಿ 2020 ರಲ್ಲಿ 1877 ಡಾಲರುಗಳಷ್ಟಾಗಿದೆ. ಇನ್ನು 15 ವರ್ಷಕ್ಕೆ ಭಾರತ ವಯಸ್ಕರ ದೇಶವಾಗುತ್ತದೆ. ದುಡಿಮೆಯ ಶಕ್ತಿ ಕ್ಷೀಣಿಸುತ್ತಾ ಹೋಗುತ್ತದೆ. ಆಗ ಅಭಿವೃದ್ಧಿಯನ್ನು ಸಾಧಿಸುವುದು ಹೇಗೆ? ಎಂದು ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.

ಮೋದಿಯವರು 2014 ರಲ್ಲಿ 2 ಕೋಟಿ ಉದ್ಯೋಗ ಸೃಷ್ಟಿಯ ಮಾತನ್ನಾಡಿದ್ದರು. ಆ ಉದ್ಯೋಗಗಳು ಎಲ್ಲಿಗೆ ಹೋದವು? 2020 ರಲ್ಲಿ ದೇಶದ 11716 ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆAದು ಕೇಂದ್ರ ಸರ್ಕಾರದ ಎನ್‌ಸಿಆರ್‌ಬಿ ದಾಖಲೆಗಳು ಹೇಳುತ್ತಿವೆ. ಇದರಲ್ಲಿ ಕರ್ನಾಟಕದ ಉದ್ಯಮಿಗಳು 1772. ಇದು 2019 ಕ್ಕೆ ಹೋಲಿಸಿದರೆ ಶೇ.103 ರಷ್ಟು ಹೆಚ್ಚು.

ದೇಶದಲ್ಲಿ 60 ಲಕ್ಷ ಎಂ ಎಸ್ ಎಂ ಇ ಗಳನ್ನು ಮುಚ್ಚಲಾಗಿದೆ. 2014 ರಲ್ಲಿ ಎಂಎಸ್ಎಂಇ ಮತ್ತು ಅವುಗಳ ಸಂಬಂಧಿತ ವಲಯದಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರ ಸಂಖ್ಯೆ ಸುಮಾರು 10 ಕೋಟಿಗಳಷ್ಟಿತ್ತುಗೀಗ ಅದು 2.5 ಕೋಟಿಗೆ ಕುಸಿದಿದೆ. ಮೋದಿಯವರ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯ ಮಾತು ನಿಜವಾಗಿದ್ದರೆ ಎಂಎಸ್ಎAಇ ವಲಯವೊಂದರಲ್ಲೆ ಹೊಸದಾಗಿ ಕನಿಷ್ಟ ಎಂದರೂ 16 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ ಈಗ 2014 ರಲ್ಲಿ ಇದ್ದ ಉದ್ಯೋಗಗಳೂ ನಾಶವಾಗಿ ಹೋಗಿ ಎಂಎಸ್ಎಂಇ ಯಲ್ಲಿ ಕೇವಲ 2.5 ಕೋಟಿ ಉದ್ಯೋಗಗಳು ಉಳಿದಿವೆ ಎಂದು ವರದಿಗಳು ಹೇಳುತ್ತಿವೆ.

ಇತ್ತ ಸರ್ಕಾರಿ ಉದ್ಯೋಗಗಳನ್ನೂ ತುಂಬುತ್ತಿಲ್ಲ. 8.72 ಲಕ್ಷ ಉದ್ಯೋಗಗಳು ಕೇಂದ್ರ ಸರ್ಕಾರದಲ್ಲಿ ಖಾಲಿ ಇವೆ. ರಾಜ್ಯಗಳು ಸುಮಾರು 45 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಕೇಂದ್ರ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ಕೂಲಿ ರೂ.590. ನರೇಗಾ ಕಾರ್ಮಿಕರಿಗೂ ಇಷ್ಟೆ ಕೂಲಿಯನ್ನು ಕೊಡಬೇಕು. ಆದರೆ ಕಳೆದ ವರ್ಷ ಕರ್ನಾಟಕದ ನರೇಗಾ ಕೂಲಿ ಕಾರ್ಮಿಕರಿಗೆ 289 ರೂಪಾಯಿಗಳನ್ನು ನಿಗಧಿಪಡಿಸಿದ್ದರು. ಈ ವರ್ಷ ಇನ್ನೂ ರಿವೈಸ್ ಮಾಡಿಲ್ಲ. 2022-23 ರ ಆರ್ಥಿಕ ವರ್ಷದಲ್ಲಿ 11 ಕೋಟಿ ಜನ ಕೆಲಸ ಬೇಕೆಂದು ಅರ್ಜಿ ಹಾಕಿದ್ದಾರೆಂದು ನರೇಗಾ ಸಂಘರ್ಷ ಸಮಿತಿಗಳು ಮತ್ತು ಪಿಎಐಜಿ ಮಾಡಿರುವ ಸಮೀಕ್ಷೆಗಳ ವರದಿಗಳು ಹೇಳುತ್ತಿವೆ. 11 ಕೋಟಿ ಜನರಿಗೆ ಕನಿಷ್ಟ 100 ದಿನ ಉದ್ಯೋಗ ನೀಡಬೇಕೆಂದರೆ ಕನಿಷ್ಟ ಅಂದರೂ ರೂ.2.65 ಲಕ್ಷ ಕೋಟಿ ಅನುದಾನವನ್ನು ನೀಡಬೇಕು. ಆದರೆ ಬಜೆಟ್ನಲ್ಲಿ ಕೇವಲ ರೂ.73,000 ಕೋಟಿ ಅನುದಾನ ಒದಗಿಸಲಾಗಿದೆ. ಇದರಲ್ಲಿ ಹಳೆಯ ಬಾಕಿ ಮೊತ್ತವಾದ 18000 ಕೋಟಿಯನ್ನು ಕಳೆದರೆ ನೈಜವಾಗಿ ನರೇಗಾಕ್ಕೆ ಸಿಗುವುದು ರೂ.55,000 ಕೋಟಿ ಮಾತ್ರ. ಇದರಲ್ಲಿ ದಿನಕ್ಕೆ ರೂ.334 ರೀತಿ ಕೂಲಿ ಕೊಟ್ಟರೆ 10 ಕೋಟಿ ಕುಟುಂಬಗಳಿಗೆ ಕೇವಲ 16 ದಿನಗಳಿಗೆ ಮಾತ್ರ ಸಾಕಾಗುತ್ತದೆ.

ಕೇಂದ್ರ ಸರ್ಕಾರ ನಿರಂತರವಾಗಿ ಸರ್ಕಾರಿ ಸಂಸ್ಥೆ, ಕಂಪನಿ, ಕಾರ್ಖಾನೆಗಳನ್ನು ಮುಚ್ಚುತ್ತಿರುವುದರಿಂದ 2018 ರ ಹೊತ್ತಿಗೆ ಕೇಂದ್ರ ಸರ್ಕಾರದ ಸಾರ್ವಜನಿಕ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿದ್ದ ನೌಕರರ ಸಂಖ್ಯೆ ಸುಮಾರು 2.5 ಲಕ್ಷದಷ್ಟು ಕಡಿಮೆಯಾಗಿದೆ. 2013-14 ರಲ್ಲಿ 16.50 ಲಕ್ಷದಷ್ಟಿದ್ದ ಕೇಂದ್ರ ಸರ್ಕಾರದ ಸಾರ್ವಜನಿಕ ಉದ್ದಿಮೆಗಳ ನೌಕರರ ಸಂಖ್ಯೆ 2018 ರ ವೇಳೆಗೆ 14 ಲಕ್ಷಕ್ಕೆ ಇಳಿದಿದೆ. 2021 ರಲ್ಲಿ ಈ ಸಂಖ್ಯೆ ಇನ್ನಷ್ಟು ಕಡಿಮೆಯಾಗಿದೆ.

ಖಾಸಗಿ ಮತ್ತು ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುತ್ತಿರುವ ನೌಕರರ ಸಂಖ್ಯೆ 1000 ಜನಕ್ಕೆ ಅಮೆರಿಕದಲ್ಲಿ 77, ಬ್ರೆಜಿಲ್ನಲ್ಲಿ 111, ಫ್ರಾನ್ಸ್ನಲ್ಲಿ 114, ಚೀನಾದಲ್ಲಿ ಸುಮಾರು 60 ರಷ್ಟಿದೆ. ಸ್ವೀಡನ್ನಲ್ಲಿ 138, ನಾರ್ವೆಯಲ್ಲಿ 160 ರಷ್ಟಿದ್ದರೆ ಭಾರತದಲ್ಲಿ ಇರುವುದು 12-14 ಮಾತ್ರ.

2021 ರ ಮಾರ್ಚ್ ನಲ್ಲಿ ಕೇಂದ್ರ ಸರ್ಕಾರದ ಪರ್ಸನಲ್ & ಲಾ ಕುರಿತಾದ ಸ್ಟ್ಯಾಂಡಿಂಗ್ ಕಮಿಟಿಯು ಪಾರ್ಲಿಮೆಂಟ್ನಲ್ಲಿ ಮಂಡಿಸಿದ ವರದಿಯಂತೆ ಭಾರತೀಯ ರೈಲ್ವೆಯಲ್ಲಿ 29541 ಹುದ್ದೆಗಳನ್ನು ಎಸ್ಸಿ/ಎಸ್ಟಿ ಮತ್ತು ಓಬಿಸಿ ಗುಂಪಿನ ಯುವಜನರಿಗಾಗಿ ಮೀಸಲಿರಿಸಲಾಗಿದೆ. ಅದರಲ್ಲಿ 17769 ಹುದ್ದೆಗಳು ಖಾಲಿ ಇವೆ. ಗೃಹ ಇಲಾಖೆಯಲ್ಲಿ 3943 ಹುದ್ದೆಗಳು ಈ ವರ್ಗದವರಿಗಾಗಿ ಮೀಸಲಿವೆ. ಆದರೆ 2021 ರ ಮಾರ್ಚ್ ವೇಳೆಗೆ 17493 ಹುದ್ದೆಗಳು ಖಾಲಿ ಇದ್ದವು. ಹಣಕಾಸು ಇಲಾಖೆಯಲ್ಲಿ ಶೇ.70 ರಷ್ಟು ಮೀಸಲಾತಿ ಹುದ್ದೆಗಳಲ್ಲಿ ಶೇ.70 ರಷ್ಟು ಹುದ್ದೆಗಳು ಖಾಲಿ ಇದ್ದವು. ಈ ಇಲಾಖೆಯಲ್ಲಿ 10921 ಹುದ್ದೆಗಳು ಮೀಸಲಾತಿ ವರ್ಗದವರಿಗೆ ಮೀಸಲಿದ್ದರೆ, 7040 ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಸಿಎಂಐಇ [ದ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ] ಯ ಪ್ರಸ್ತುತ ವರದಿಗಳ ಪ್ರಕಾರ ಈಗ ನಗರ ನಿರುದ್ಯೋಗ ಶೇ.7.9 ರಷ್ಟಿದೆ ಹಾಗೂ ಗ್ರಾಮೀಣ ನಿರುದ್ಯೋಗ ಶೇ. 7.0 ರಷ್ಟಿದೆ. ಈ ಪ್ರಮಾಣದ ನಿರುದ್ಯೋಗ 100 ವರ್ಷಗಳಲ್ಲೆ ಅಧಿಕ.

ಕರ್ನಾಟಕದ ವಿದ್ಯಾವಂತ ಯುವಜನರ ನಿರುದ್ಯೋಗದ ಪ್ರಮಾಣ ತನ್ನೆಲ್ಲ ಮಿತಿಗಳನ್ನು ಮೀರಿದೆ. ಬಿಜೆಪಿ ಮತ್ತು ಮೋದಿಯವರ ದುರಾಡಳಿತದಿಂದಾಗಿಯೇ ಈ ದುಸ್ಥಿತಿ ಬಂದೊದಗಿದೆ. ರೊಚ್ಚಿಗೆದ್ದ ನಿರುದ್ಯೋಗಿ ಪದವೀಧರರ ರಟ್ಟೆಯ ಸಿಟ್ಟು ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ತಿರುಗದಂತೆ ತಡೆಯುವ ಸಲುವಾಗಿಯೇ ನಿರುದ್ಯೋಗಿ ಯುವ ಸಮೂಹದ ಕೈಗೆ ತ್ರಿಶೂಲ, ಮಾರಕಾಸ್ತ್ರಗಳನ್ನು ನೀಡಿ ಜಾತಿ-ಧರ್ಮದ ಹೆಸರಿನಲ್ಲಿ ಪರಸ್ಪರ ಕಚ್ಚಾಡಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

Key words: Modi government – hell – unemployed- young people-Siddaramaiah