ಪರಿಷತ್ ನಾಮಕರಣ: ಕಾಂಗ್ರೆಸ್ ಏಕೆ ಇಬ್ಬರು ಬಲಗೈ ಬಂಧುಗಳಿಗೆ ಮಣೆ ಹಾಕಿತು ?

ಬೆಂಗಳೂರು,ಸೆಪ್ಟಂಬರ್,8,2025 (www.justkannda.in): ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್‌ ಬಾಬು, ಕರ್ನಾಟಕ ಸರಕಾರದ ಅನಿವಾಸಿ ಭಾರತೀಯ ಸಮಿತಿಯ ಅಧ್ಯಕ್ಷೆ ಆರತಿ ಕೃಷ್ಣ, ಎಐಸಿಸಿ ಪರಿಶಿಷ್ಟ ಜಾತಿ ವಿಭಾಗದ ಪ್ರಧಾನ ಕಾರ್ಯದರ್ಶಿ ಜಕ್ಕಪ್ಪನವ‌ರ್ ಹಾಗೂ ಇಂಡಿಯನ್ ಎಕ್ಸ್ ಪ್ರೆಸ್ ಮೈಸೂರು ಬ್ಯೂರೊ ಮುಖ್ಯಸ್ಥರಾದ ಮೈಸೂರಿನ ಕೆ. ಶಿವಕುಮಾ‌ರ್ ಅವರು ಕಡೆಗೂ ವಿಧಾನ ಪರಿಷತ್ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಸಮ್ಮತಿಸಿರುವ ಪಟ್ಟಿಗೆ ರಾಜ್ಯಪಾಲರು ಅಂಕಿತ ಹಾಕುವ ಮೂಲಕ, ಪಟ್ಟಿಯ ಕಥೆ ಏನು ಎಂಬ ಗೊಂದಲಕ್ಕೂ ತೆರೆ ಬಿದ್ದಿದೆ. ಈಗ ಕಾಂಗ್ರೆಸ್ ವಲಯದಲ್ಲಿಯೇ ಎಲ್ಲರೂ ಕೇಳುತ್ತಿರುವ ಪ್ರಶ್ನೆ, “ಸಾಮಾಜಿಕ ನ್ಯಾಯದ ಹರಿಕಾರನಂತಿರುವ ಪಕ್ಷವೇಕೆ, ದಲಿತ ಸಮುದಾಯದ ಬಲಗೈ ಪಂಗಡದ ಇಬ್ಬರನ್ನು ಆಯ್ಕೆ ಮಾಡಿತು ?”

ನಾಮನಿರ್ದೇಶನಗೊಂಡಿರುವ ನಾಲ್ವರ ಪೈಕಿ ಆರತಿ ಕೃಷ್ಣಅವರು ಒಕ್ಕಲಿಗರು.  ರಮೇಶ್ ಬಾಬು ಅವರು ಹಿಂದುಳಿದ ವರ್ಗಕ್ಕೆ ಸೇರಿದ್ದರೆ, ಜಕ್ಕಪ್ಪನವರ್ ಹಾಗೂ ಕೆ. ಶಿವಕುಮಾ‌ರ್ ಅವರು ದಲಿತ ಬಲಗೈ ಸಮುದಾಯಕ್ಕೆ ಸೇರಿದವರು. ದಲಿತ ಸಮುದಾಯದಲ್ಲಿಯೇ ಎಡಗೈ ಇಲ್ಲವೇ ಕೊಲಂಬೋ ಸಮುದಾಯಕ್ಕೆ ಸೇರಿದವರು ಸಿಗಲಿಲ್ಲವೇ ?

ಇದಕ್ಕೆ ಕಾಂಗ್ರೆಸ್ ಪಡಸಾಲೆಯಲ್ಲಿಯೇ ದೊರೆಯುವ ಉತ್ತರ- ಜಕ್ಕಪ್ಪನವರ್ ಹಾಗೂ ಶಿವಕುಮಾರ್ ಅವರು ಒಳಮೀಸಲಿನ ಫಲಾನುಭವಿಗಳು. ಮೊದಲಿನಿಂದಲೂ ದಲಿತರು ಕಾಂಗ್ರೆಸ್ ಬೆಂಬಲಿಸಿಕೊಂಡು ಬರುತ್ತಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಎಡಗೈ ಹಾಗೂ ಕೊಲಂಬೋ ಸಮುದಾಯ ಸ್ವಲ್ಪ ದೂರು ಸರಿದಿತ್ತು. ಎಡಗೈನವರಂತೂ ಬಿಜೆಪಿ ಜತೆ ಗುರುತಿಸಿಕೊಂಡಿದ್ದರು. ಇಂಥಾ ಹೊತ್ತಲ್ಲಿ ಬಲಗೈ, ಎಡಗೈಗೆ ತಲಾ ಶೇ.6ರಷ್ಟು ಹಾಗೂ ಕೊಲಂಬೋಗೆ ಶೇ.5ರಷ್ಟು ಒಳ ಮೀಸಲು ಘೋಷಿಸಿದ ಕಾಂಗ್ರೆಸ್ ಸರಕಾರದ ಕ್ರಮ, ಪರಂಪರಾನುಗತ ಬಲಗೈನವರಿಗೆ ಸಿಟ್ಟು ತರಿಸಿತ್ತು. ಇದನ್ನು ಶಮನ ಮಾಡುವ ಉದ್ದೇಶದಿಂದಲೇ ಸರಕಾರ, ಬಲಗೈ ಸಮುದಾಯದ ಇಬ್ಬರನ್ನು ನೇಮಿಸಿದೆ !

ಉತ್ತರ ಕರ್ನಾಟಕದ ಎಚ್. ಕೆ. ಪಾಟೀಲ್ ಗರಡಿಯಲ್ಲಿ ಬೆಳೆದ ಜಕ್ಕಪ್ಪನವರ್ ಅವರು ಖರ್ಗೆ ಶಿಷ್ಯರಾದರೆ, ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜನ ಖರ್ಗೆ ಇಬ್ಬರಿಗೂ ಪರಮ ಆಪ್ತರು.

ಸರ್ಕಾರದಿಂದ ನಾಮನಿರ್ದೇಶನಗೊಂಡಿದ್ದ ಕಾಂಗ್ರೆಸ್ ಯು.ಬಿ. ವೆಂಕಟೇಶ್‌ ಮತ್ತು ಪ್ರಕಾಶ್‌ ಕೆ. ರಾಥೋಡ್ ಅವರ ಅವಧಿ 2024ರ ಅಕ್ಟೋಬರ್‌ ನಲ್ಲಿ ಮತ್ತು ಜೆಡಿಎಸ್‌ ನ ಕೆ.ಎ. ತಿಪ್ಪೇಸ್ವಾಮಿ ಅವರ ಅವಧಿ 2025ರ ಜನವರಿ ವೇಳೆಗೆ ಮುಕ್ತಾಯಗೊಂಡಿತ್ತು. ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಸಿ.ಪಿ. ಯೋಗೇಶ್ವ‌ರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಸ್ಥಾನಗಳು ಖಾಲಿಯಾಗಿದ್ದವು.

Key words: MLC, nomination, Congress