ಈ ಬಾರಿ ಮೈಸೂರು ಜಿಲ್ಲೆಯಲ್ಲಿ SSLC ಪರೀಕ್ಷೆ ಬರೆಯದ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು- ಶಾಸಕ ತನ್ವೀರ್ ಸೇಠ್

ಮೈಸೂರು,ಮೇ,12,2025 (www.justkannada.in): ಪ್ರಸಕ್ತ ಸಾಲಿನಲ್ಲಿ ಮೈಸೂರು ಜಿಲ್ಲೆಯಲ್ಲಿ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಸ್‌ ಎಸ್‌ ಎಲ್‌ಸಿ ಪರೀಕ್ಷೆಯನ್ನೇ ಬರೆದಿಲ್ಲ. ಇದು ಆಘಾತಕಾರಿ ವಿಷಯವಾಗಿದ್ದು, ನಮ್ಮ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಅಂತಹ ವಿದ್ಯಾರ್ಥಿಗಳಿಗೆ ಸಪ್ಲಿಮೆಂಟರಿ ಪರೀಕ್ಷೆ ಬರೆಯಲು ಅವಕಾಶ ನೀಡಿದೆ. ನಮ್ಮ ಶಿಕ್ಷಣ ತಜ್ಞರ ತಂಡ ಪರೀಕ್ಷೆಯನ್ನೇ ಬರೆಯದ ಮಕ್ಕಳ ಮಾಹಿತಿ ಪಡೆದು ಅವರುಗಳ ಮನೆ ಮನೆಗೆ ಭೇಟಿ ನೀಡಿ ಅವರನ್ನು ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಭಾಗವಹಿಸುವಂತೆ ಉತ್ತೇಜನ ನೀಡಲು ಮುಂದಾಗಿದೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.

ರಾಜೇಂದ್ರನಗರದ ಕೆಪಿಎಸ್ ಶಾಲೆಯಲ್ಲಿ ಸುಮಾರು 99.75 ಲಕ್ಷ ರೂ. ವೆಚ್ಚದಲ್ಲಿ ಐದು ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಎಸ್‌ಎಸ್‌ಎಲ್‌ಸಿಯಲ್ಲಿ 7 ಸ್ಥಾನದಲ್ಲಿದ್ದ ಮೈಸೂರು ಜಿಲ್ಲೆ 15ನೇ ಸ್ಥಾನಕ್ಕೆ ಹೋಗಿರುವುದು ನಿಜ, ಆದರೇ, ಪಿಯುಸಿಯಲ್ಲಿ 22 ಸ್ಥಾನದಲ್ಲಿದ್ದ ಮೈಸೂರು ಜಿಲ್ಲೆ 12ನೇ ಸ್ಥಾನಕ್ಕೆ ಬಂದಿದೆ. ಸ್ಥಾನ ಮತ್ತು ಸಂಖ್ಯೆಯಲ್ಲಿ ಏರುಪೇರಾದರೂ ನಮ್ಮ ಜಿಲ್ಲೆಯ ಮಕ್ಕಳ ಸಾಧನೆ ಅದ್ಭುತವಾಗಿದೆ. ಫಲಿತಾಂಶದಲ್ಲಿ ನಮಗೆ ಯಾವುದೇ ಸ್ಥಾನ ಪಡೆಯುವುದಕ್ಕಿಂತ ಗುಣಮಟ್ಟದ ಶಿಕ್ಷಣ ನೀಡುವುದು ಮುಖ್ಯವಾಗಿತ್ತು. ಹಾಗಾಗಿ ಸ್ಥಾನಗಳಿಕೆಯಲ್ಲಿ ಸ್ವಲ್ಪ ಏರುಪೇರಾಗಿದೆ. ಶಿಕ್ಷಣದ ಜತೆ ವಿದ್ಯಾರ್ಥಿಗಳಿಗೆ ನಮ್ಮ ದೇಶದ ಸಂಸ್ಕೃತಿ, ಮೌಲ್ಯಗಳನ್ನು ಕಲಿಸುವ ನಿಟ್ಟಿನಲ್ಲಿ ನಮ್ಮ ಶಿಕ್ಷಕರು ಕಾರ್ಯೋನ್ಮುಖರಾಗಿದ್ದಾರೆ. ಶಾಲೆಗಳಿಗೆ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಅದನ್ನು ಒದಗಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದೇವೆ. ಭಾಷಾ ವಿಷಯದಲ್ಲಿ ಎಸ್‌ಎಸ್‌ ಎಲ್‌ಸಿಯಲ್ಲಿ ನಮ್ಮ ಮಕ್ಕಳು ಹೆಚ್ಚು ಅನುತ್ತೀರ್ಣರಾಗಿದ್ದಾರೆ. ಭಾಷೆಯನ್ನು ಪ್ರಾಥಮಿಕ ಹಂತದಲ್ಲಿಯೇ ಕಲಿಸಬೇಕು. ಏಕಾಏಕಿ ಒತ್ತಡ ಹೇರಬಾರದು, ಮಾತೃಭಾಷೆಯಲ್ಲಿಯೇ ಶಿಕ್ಷಣ ಕೊಡಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯಲ್ಲಿ ತ್ರಿಭಾಷಾ ಸೂತ್ರವನ್ನು ಇದೀಗ ಅಳವಡಿಸಿಕೊಳ್ಳಲಾಗಿದೆ ಎಂದರು.

ಗ್ರೆಸ್ ಮಾರ್ಕ್ಸ್ ಅಥವಾ ಕಾಪಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಇದನ್ನು ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳಿಗೆ ಸ್ಪಷ್ಟಪಡಿಸಬೇಕು. 35 ಅಂಕಗಳನ್ನು ಪಡೆಯಲು ಕಷ್ಟವಾಗುವುದಿಲ್ಲ, 70 ಅಂಕ ಪಡೆಯಲು ವಿದ್ಯಾರ್ಥಿಗಳ ಶ್ರಮ ಅಗತ್ಯ ಅದಕ್ಕಿಂತಲೂ ಹೆಚ್ಚು ಅಂಕ ಪಡೆಯಲು ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳ ಒಟ್ಟಾರೆ ಶ್ರಮ ಅಗತ್ಯವಾಗಿದೆ ಎಂದರು.

ಕೆಪಿಎಸ್ ಶಾಲೆಯ ಸಿಡಿಸಿ ಉಪಾಧ್ಯಕ್ಷರಾದ ಎಂ.ಎನ್.ಮಹದೇವ, ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸೈಯದ್ ಎಕ್ಬಾಲ್, ಉಪಾಧ್ಯಕ್ಷರಾದ ಷಹೆನ್‌ಷಾ, ಪ್ರಧಾನ ಕಾರ್ಯದರ್ಶಿ ಅಫ್ರೋಜ್, ಕೆಪಿಸಿಸಿ ಸಂಯೋಜಕಾರ ಶೌಕತ್ ಅಲೀಖಾನ್, ಬೀದಿಬದಿ ವ್ಯಾಪಾರಿಗಳ ವಿಭಾಗದ ಅಧ್ಯಕ್ಷರಾದ ಎಂ.ರಸೂಲ್, ಕಾರ್ಮಿಕ ವಿಭಾಗದ ಅಧ್ಯಕ್ಷರಾದ ಮೊಹಮ್ಮದ್ ಶಿಫ್ಟನ್, ಅಜೀಜ್ ಸೇಠ್ ಬ್ಲಾಕ್ ಪ್ರಧಾನ ಕಾರ್ಯದರ್ಶಿ ವಸೀಂ, ಇಲಿಯಾಸ್ ಬಾಬು ಕೆಸರೆ, ನವಾಜ್, ವಿನೋದ್ ಕುಮಾರ್, ದೀಪಕ್ ಶಿವಣ್ಣ, ಪ್ರಾಂಶುಪಾಲರಾದ ಎನ್.ಎಂ.ವಿಜಯೇಂದ್ರ ಕುಮಾರ್, ಶಿಕ್ಷಣ ತಜ್ಞರಾದ ನಬೀಜಾನ್ ಮತ್ತಿತರರು ಇದ್ದರು.

Key words: More than, 1500 students, SSLC exams ,Mysore district, MLA, Tanveer Sait