ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ಇಂದೇ ರಾಜೀನಾಮೆ ಎಂಬ ಶಾಸಕ ರೇಣುಕಾಚಾರ್ಯ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ ಸಚಿವ ಮಾಧುಸ್ವಾಮಿ…

ಹಾಸನ,ಆ,22,2019(www.justkannada.in):  ಸ್ವಾಭಿಮಾನಕ್ಕೆ ಧಕ್ಕೆಯಾದರೇ ಇಂದೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದಿದ್ದ ಶಾಸಕ ಎಂ.ಪಿ ರೇಣುಕಾಚಾರ್ಯ ಅವರ ಹೇಳಿಕೆಗೆ ಸಚಿವ ಜೆ.ಸಿ ಮಾಧುಸ್ವಾಮಿ ಸಹಮತ ವ್ಯಕ್ತಪಡಿಸಿದ್ದಾರೆ.

ರೇಣುಕಾಚಾರ್ಯ ಹೇಳಿಕೆಗೆ ನಾನು ಸಹಮತ ವ್ಯಕ್ತಪಡಿಸುತ್ತೇನೆ. ನಮಗೂ ಸಚಿವ ಸ್ಥಾನ ಸಿಗದಿದ್ದರೇ ನಾವೂ ಸಹ ಅದೇ ರೀತಿ ಹೇಳುತ್ತಿದ್ದವು ಎಂದು ತಿಳಿಸಿದರು.

ಹಾಸನದಲ್ಲಿ ಇಂದು ಮಾತನಾಡಿದ ಸಚಿವ ಜೆ.ಸಿ ಮಾಧುಸ್ವಾಮಿ, ರೇಣುಕಾಚಾರ್ಯರನ್ನ ಜೊತೆಯಲ್ಲಿ ಇಟ್ಟುಕೊಳ್ಳುವ ಶಕ್ತಿಯನ್ನ ಭಗವಂತ ನೀಡಿದ್ದಾರೆ. ಹೀಗಾಗಿ ರೇಣುಕಾಚಾರ್ಯರನ್ನ ಹೋಗಲು ಬಿಡುವುದಕ್ಕೆ ಆಗುತ್ತಾ..? ನಮಗೂ ಸಚಿವ ಸ್ಥಾನ ಸಿಗದಿದ್ದರೇ ಅವರಂತೆಯೇ ನಾವು ಹೇಳುತ್ತಿದ್ದವು. ಸಚಿವ ಸ್ಥಾನ ಕೊಡುವುದು ಬಿಡುವುದು ಪಕ್ಷದ ವರಿಷ್ಟರಿಗೆ ಬಿಟ್ಟಿದ್ದು. ಕೇವಲ ಸಿಎಂ ಬಿಎಸ್ ವೈ ತೀರ್ಮಾನದಂತೆ ಎಲ್ಲವೂ ಆಗಿಲ್ಲ ಎಂದು ತಿಳಿಸಿದರು.

ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನಗೊಂಡಿದ್ದ ಶಾಸಕ ಎಂ.ಪಿ ರೇಣುಕಾಚಾರ್ಯ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ಇಂದೇ ರಾಜೀನಾಮೆ ನೀಡುತ್ತೇನೆ. ಆದರೆ ನಾನು ಸಿಎಂ ಬಿಎಸ್ ವೈ ಜತೆಯಲ್ಲೇ ಇರ್ತೇನೆ. ಪಕ್ಷದ ಬಾಗಿಲು ಬಿಟ್ಟು ಹೋಗಲ್ಲ ಎಂದಿದ್ದರು. ಜತೆಗೆ ಸೋತಿರುವ ಲಕ್ಷ್ಮಣ್ ಸವದಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.

Key words: MLA- MP Renukacharya- minister-jc maduswamy-hassan- reaction