ಸರ್ಕಾರದ ಭ್ರಷ್ಟಾಚಾರ ಆಚೆ ತರಲು ಅಧಿಕಾರಿ ಆತ್ಮಹತ್ಯೆ: ಸಿಎಂ ರಾಜೀನಾಮೆ ನೀಡಬೇಕು- ಶಾಸಕ ಅಶ್ವಥ್ ನಾರಾಯಣ್.

ಮೈಸೂರು,ಮೇ,30,2024 (www.justkannada.in): ಈ ಸರ್ಕಾರದ ಭ್ರಷ್ಟಾಚಾರವನ್ನ ಆಚೆ ತರಲಿಕ್ಕೆ ಓರ್ವ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ಸಂಬಂಧ ನೇರವಾಗಿ ನಿಮ್ಮ ಮೇಲೆಯೇ ಆಪಾದನೆ ಬಂದಿದೆ. ನಿಮ್ಮ ಹಿರಿತನ, ಅನುಭವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ಶಾಸಕ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಆಗ್ರಹಿಸಿದರು.

ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಡಿಸಿಎಂ ಡಾ ಅಶ್ವಥ್ ನಾರಾಯಣ್, ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿತ್ತು. ಪೇ ಸಿಎಂ, 40% ಅಭಿಯಾನ ನಡೆಸಿತ್ತು. ಸಾಕಷ್ಟು ಸುಳ್ಳು ಆರೋಪಗಳನ್ನ ಬಿಜೆಪಿ ಸರ್ಕಾರದ ಮೇಲೆ ಮಾಡಿದ್ರು. ಈಗ ರಾಜ್ಯ ಸರ್ಕಾರಕ್ಕೆ ಒಂದು ವರ್ಷ ಪೂರೈಸಿದೆ. ಈ ಒಂದು ವರ್ಷದಲ್ಲಿ ಕೊಲೆ, ಸುಲಿಗೆ, ಭ್ರಷ್ಟಾಚಾರ, ಮಾಡಿರೋದೇ ಕಾಂಗ್ರೆಸ್ ಸರ್ಕಾರದ ಸಾಧನೆ. ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಜನರ ಆಶೋತ್ತರಗಳ ವಿರುದ್ಧವಾಗಿ ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿದೆ. ಈ ಸರ್ಕಾರದ ಭ್ರಷ್ಟಾಚಾರವನ್ನ ಆಚೆ ತರಲಿಕ್ಕೆ ಓರ್ವ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಸರ್ಕಾರದಲ್ಲಿರುವವರ ನಡುವೆ ಪೈಪೋಟಿ ಏರ್ಪಟ್ಟಿದೆ.  ಸತ್ಯ ಹೇಳಲು ಸರ್ಕಾರಿ ನೌಕರ ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು.  ಡೆತ್‌ನೋಟ್‌ ನಲ್ಲಿ ಬರೆದಿಟ್ಟರೂ ಯಾವುದೇ ಕ್ರಮ ಕೈಗೊಂಡಿಲ್ಲ. ಯಾವುದೇ ಸೂಕ್ಷ್ಮತೆ ಇಲ್ಲದೆ ಎಫ್‌ ಐಆರ್ ದಾಖಲು ಮಾಡಲಾಗಿದೆ. ಡೆತ್‌ ನೋಟ್‌ನಲ್ಲಿರುವ ಆಪಾದಿತ ಅಧಿಕಾರಿಗಳ ಹೆಸರು ಇಲ್ಲ.  ಕೇವಲ ಬ್ಯಾಂಕ್ ಅಧಿಕಾರಿಗಳ ಮೇಲೆ ಎಫ್‌ ಐಆರ್ ದಾಖಲು ಮಾಡಿದ್ದಾರೆ.  ಹಣ ವಾಪಾಸ್ ಬರುತ್ತೆ ಅಂತ  ಮಂತ್ರಿ ಒಪ್ಪಿಕೊಂಡಿದ್ದಾರೆ. ಆರ್ಥಿಕ ಇಲಾಖೆ ಒಪ್ಪಿಗೆ ಇಲ್ಲದೆ ಅಕೌಂಟ್ ಓಪನ್ ಆಗಲು ಸಾಧ್ಯವೇ ? ಇದು ನೇರವಾಗಿ ನಿಮ್ಮ ಮೇಲೆಯೇ ಆಪಾದನೆ ಬಂದಿದೆ. ನಿಮ್ಮ ಹಿರಿತನ, ಅನುಭವಕ್ಕೆ ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ್ ಆಕ್ರೋಶ ವ್ಯಕ್ತಪಡಿಸಿದರು.

ಸಂಸದ ಪ್ರಜ್ವಲ್ ರೇವಣ್ಣ ವಿದೇಶದಿಂದ ವಾಪಾಸ್ಸಾಗುತ್ತಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅಶ್ವಥ್ ನಾರಾಯಣ್,  ಈ ಪ್ರಕರಣದಲ್ಲಿ ನಾಚಿಕೆ ಆಗಬೇಕಿರುವುದು ಕಾಂಗ್ರೆಸ್ ನವರಿಗೆ. ಅವರನ್ನ ವಿದೇಶಕ್ಕೆ ಕಳುಹಿಸಿದ್ದು ಕಾಂಗ್ರೆಸ್ ನವರೇ. ಪ್ರಕರಣದ ಎಲ್ಲಾ ಮಾಹಿತಿ ಕಾಂಗ್ರೆಸ್ ನವರಿಗೆ ತಿಳಿದ್ದಿತ್ತು. ಈ ಅವರು ವಾಪಾಸ್ಸಾಗುತ್ತಿರುವುದಕ್ಕೂ ಕಾಂಗ್ರೆಸ್ ನವರ ಆಕ್ಷೇಪವಿದೆ. ಪ್ರಜ್ವಲ್ ಪ್ರಕರಣದಲ್ಲಿ ತಪ್ಪು ಮಾಡಿರುವವರ ಜೊತೆ ವಿಡಿಯೋ ಹಂಚಿದವರಿಗೂ ಶಿಕ್ಷೆ ಆಗಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ, ನಗರಾಧ್ಯಕ್ಷ ಎಲ್.ನಾಗೇಂದ್ರ, ಗ್ರಾಮಾಂತರ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.

Key words: MLA, Aswath Narayan, resignation , CM Siddaramaiah