ಮೈಸೂರು,ಅಕ್ಟೋಬರ್,16,2025 (www.justkannada.in): ಹೆಚ್.ಡಿ.ಕೋಟೆ ಹಾಗೂ ಸರಗೂರು ತಾಲ್ಲೂಕಿನ ಅರಣ್ಯ ಪ್ರದೇಶದ ಹಂಚಿನಲ್ಲಿ ವಾಸವಾಗಿರುವ ಸಾರ್ವಜನಿಕರಿಗೆ ಉಂಟಾಗಿರುವ ತೊಂದರೆಗಳನ್ನು ಪರಿಹರಿಸಲು ಅಧಿಕಾರಿಗಳು ಕ್ರಮ ವಹಿಸಿ ಎಂದು ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಅನಿಲ್ ಚಿಕ್ಕಮಾದು, ಅರಣ್ಯ ಭಾಗದಲ್ಲಿ ವಾಸವಾಗಿದ್ದ ಕೆಲವರಿಗೆ ಸರ್ಕಾರದ ವತಿಯಿಂದ ಮನೆ ನಿರ್ಮಾಣ ಮಾಡಿ ಕೊಡಲಾಗಿದೆ ಆದರೆ ಅವರ ಬಳಿ ಹಕ್ಕು ಪತ್ರ ಇಲ್ಲ. ಇಂತಹ ಸಮಸ್ಯೆಗಳನ್ನು ಪರಿಹರಿಸಿ ಎಂದರು.
ಡಿ.ಬಿ.ಕುಪ್ಪೆಯಲ್ಲಿ 376 ಜನರಿಗೆ ಜಮೀನಿನ ಹಕ್ಕು ಪತ್ರ ನೀಡಲು ದಾಖಲೆಗಳನ್ನು ಪರಿಶೀಲಿಸಲಾಗಿದೆ. ತಿರಸ್ಕೃತಗೊಂಡಿರುವ 90 ಹಕ್ಕು ಪತ್ರಗಳನ್ನು ಮರು ಪರಿಶೀಲಿಸಿ ಅದರಲ್ಲಿ ಅರ್ಹರಿದ್ದಲ್ಲಿ ಹಕ್ಕು ಪತ್ರ ನೀಡಿ ಎಂದರು.
ಈ ಹಿಂದೆ ನೀಡಲಾಗಿರುವ ಕೆಲವು ಹಕ್ಕು ಪತ್ರಗಳಲ್ಲಿ ಅವರ ಮಕ್ಕಳ ಹೆಸರು ನಮೂದಿಸಿರುವುದಿಲ್ಲ. ಇದರಿಂದ ಮಕ್ಕಳು ಹಕ್ಕು ಪಡೆಯಲು ಸಮಸ್ಯೆಯಾಗುತ್ತಿದ್ದು, ಸರಿಪಡಿಸಬೇಕಿದೆ ಎಂದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಅವರು ಮಾತನಾಡಿ ಹೆಚ್. ಡಿ ಕೋಟೆ ತಾಲೂಕಿನ ಹರಿಹರಪುರ ಗ್ರಾಮದ ಸರ್ವೆ ನಂ 3 ರಲ್ಲಿ 530 ಎಕರೆ ಭೂಮಿಯಲ್ಲಿ 370 ಎಕರೆ ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿದ್ದು, ಉಳಿದಿರುವ 160 ಎಕರೆಯಲ್ಲಿ ಈಗಾಗಲೇ ಮಂಜೂರು ಮಾಡಿ ಉಳಿದಿರುವ 30 ಎಕರೆ ಭೂಮಿಯನ್ನು ಮಂಜೂರು ಮಾಡಲು ಕ್ರಮವಹಿಸಿ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ಯುಕೇಶ್ ಕುಮಾರ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
Key words: action, solve, forest area, problems, MLA, Anil Chikkamadu