ಬೆಂಗಳೂರಿಗೆ ತಪ್ಪಿದ ‘ವಾಟರ್ ಪ್ಲಸ್’ ಟ್ಯಾಗ್.

ಬೆಂಗಳೂರು, ಸೆಪ್ಟೆಂಬರ್ 4, 2021 (www.justkannada.in): ನವ ದೆಹಲಿ, ಮುಂಬೈ, ಸೂರತ್ ಹಾಗೂ ಹೈದ್ರಾಬಾದ್ ಸೇರಿದಂತೆ ಒಟ್ಟು ಒಂಬತ್ತು ನಗರಗಳಿಗೆ ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ ‘ವಾಟರ್ ಪ್ಲಸ್’ ಪ್ರಮಾಣೀಕರಣವನ್ನು ನೀಡಿದೆ. ಇತ್ತೀಚೆಗೆ ಕೇಂದ್ರದ ಸ್ವಚ್ಛ ಭಾರತ್ ಮಿಷನ್ ಮತ್ತು ಸ್ವಚ್ಛ ಸರ್ವೇಕ್ಷಣ್ ಅಸೆಸ್‌ ಮೆಂಟ್‌ ನ ಭಾಗವಾಗಿ ಬಿಡುಗಡೆಗೊಳಿಸಲಾದ ಈ ಪ್ರಮಾಣೀಕರಣದ ಪಟ್ಟಿಯಲ್ಲಿ ಬೆಂಗಳೂರು ಮಹಾನಗರ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ. ಆದರೆ ಐಟಿ ಸಿಟಿ ಬೆಂಗಳೂರು ಬಯಲುಮುಕ್ತ ಶೌಚಾಲಯ (ಒಡಿಎಫ್) ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಆಂಧ್ರ ಪ್ರದೇಶದ ಗ್ರೇಟರ್ ವಿಶಾಖಪಟ್ಟಣಂ ಮುನಿಸಿಪಲ್ ಕಾರ್ಪೊರೇಷನ್, ವಿಜಯವಾಡ ಮುನಿಸಿಪಲ್ ಕಾರ್ಪೊರೇಷನ್ ಹಾಗೂ ತಿರುಪತಿ ಮುನಿಸಿಪಲ್ ಕಾರ್ಪೊರೇಷನ್, ಈ ಮೂರು ನಗರ ಸ್ಥಳೀಯ ಸಂಸ್ಥೆಗಳಿಗೂ ಈ ‘ವಾಟರ್ ಪ್ಲಸ್’ ಪ್ರಮಾಣೀಕರಣ ಲಭಿಸಿದೆ. ಉಳಿದ ನಗರಗಳೆಂದರೆ ಚಂಡೀಘಡ ಹಾಗೂ ಇಂದೋರ್.

ಸಂಸ್ಕರಿಸದ ತ್ಯಾಜ್ಯ ನೀರು ಬಯಲಿಗೆ ಸೇರದಿರುವಂತೆ ಖಾತ್ರಿಪಡಿಸಿ ಎಲ್ಲರಿಗೂ ನೈರ್ಮಲ್ಯವನ್ನು ಒದಗಿಸಿರುವಂತಹ ನಗರಗಳಿಗೆ ಈ ‘ವಾಟರ್ ಪ್ಲಸ್’ ದೃಢೀಕರಣವನ್ನು ನೀಡಲಾಗುತ್ತದೆ. ಸುರಕ್ಷಿತ ತ್ಯಾಜ್ಯ ನೀರು ವಿಲೇವಾರಿ, ಯಾಂತ್ರಿಕ ಉಪಕರಣಗಳನ್ನು ಬಳಸಿ ಚರಂಡಿ ಹಾಗೂ ಇಂಗುಗುಂಡಿಗಳನ್ನು ಸುರಕ್ಷಿತವಾಗಿ ಸ್ವಚ್ಛಗೊಳಿಸುವ ವಿಧಾನ, ತ್ಯಾಜ್ಯ ನೀರು ಹಾಗೂ ಚರಂಡಿ ನೀರಿನ ಸಂಸ್ಕರಣೆಯ ಸಮರ್ಪಕ ನಿವರ್ಹಣಾ ಸಾಮರ್ಥ್ಯದಂತಹ ಹಲವು ಸೌಲಭ್ಯಗಳ ಅಳವಡಿಕೆಯಂತಹ ಅತ್ಯುತ್ತಮ ಅಭ್ಯಾಸಗಳನ್ನೂ ಸಹ ಈ ಅಂದಾಜಿಸುವಿಕೆಯಲ್ಲಿ ಪರಿಗಣಿಸಲಾಗುತ್ತದೆ.

ಬೆಂಗಳೂರಿನ ನೀರಿನ ತಜ್ಞ ಎಂ.ಎನ್. ತಿಪ್ಪೇಸ್ವಾಮಿ ಅವರು ಈ ಕುರಿತು ಮಾತನಾಡಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯು ಎಸ್‌ಎಸ್‌ಬಿ) ನಗರದ ಅಗತ್ಯವನ್ನು ಸರಿದೂಗಿಸುವಲ್ಲಿ ವಿಫಲವಾಗಿದೆ ಎಂದರು. “ಕಳೆದ ೪-೫ ವರ್ಷಗಳಲ್ಲಿ, ಬಿಡಬ್ಲ್ಯು ಎಸ್‌ಎಸ್‌ಬಿ ಸಾಕಷ್ಟು  ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿಲ್ಲ. ದೇಶದ ಅನೇಕ ನಗರಗಳು ೨೪x೭ ನೀರು ಸರಬರಾಜು ಮಾಡುತ್ತಿದೆ. ಜೊತೆಗೆ, ತ್ಯಾಜ್ಯ ನೀರು ನಿರ್ವಹಣೆ ಹಾಗೂ ನೀರಿನ ಸಂರಕ್ಷಣೆಯಲ್ಲಿ ಸುಸ್ಥಿರ ಪ್ರಗತಿಯನ್ನು ತೋರಿಸುತ್ತಿವೆ. ನಮಗಿಂತಲೂ ಕಡಿಮೆ ಜಿಡಿಪಿ ಇರುವಂತಹ ರಾಷ್ಟ್ರಗಳೂ ಸಹ ಲೆಕ್ಕವಿಲ್ಲದ ನೀರಿನ ಪ್ರಮಾಣವನ್ನು ಕಡಿಮೆಗೊಳಿಸಿದೆ,” ಎಂದು ವಿವರಿಸಿದರು.

ಬಿಡಬ್ಲ್ಯು ಎಸ್‌ಎಸ್‌ಬಿ ಅಧಿಕಾರಿಗಳಿಗೆ ಈ ಫಲಿತಾಂಶದ ಬಗ್ಗೆ ಸಂತೋಷವಾಗಿಲ್ಲ. “ಬಿಬಿಎಂಪಿಯೂ ಸಹ ಈ ಸಮೀಕ್ಷೆಯಲ್ಲಿ ಭಾಗವಹಿಸಬೇಕಿತ್ತು. ಇಡೀ ದೇಶದಲ್ಲಿಯೇ ನಮ್ಮಲ್ಲಿ ಎಲ್ಲಕ್ಕಿಂತ ಹೆಚ್ಚಿನ ಸಂಖ್ಯೆಯ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಿದ್ದು, ಪ್ರತಿ ದಿನ ಸುಮಾರು ೯೦೦ ದಶಲಕ್ಷ ಲೀಟರ್‌ ಗಳಷ್ಟು ತ್ಯಾಜ್ಯ ನೀರನ್ನು ಸಂಸ್ಕರಿಸಲಾಗುತ್ತಿದೆ. ಶೇ.೩೦ರಷ್ಟು ಸಂಸ್ಕರಿಸಿದ ನೀರನ್ನು ನೆರೆಯ ನಗರಗಳಿಗೆ ನೀರಾವರಿ ಉದ್ದೇಶಗಳಿಗಾಗಿ ಸರಬರಾಜು ಮಾಡಲಾಗುತ್ತಿದೆ. ಉಳಿದ ಶೇ.೧೦ರಷ್ಟು ನೀರನ್ನು ಇತರೆ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಜೊತೆಗೆ ನಾವು ಜೆಟ್ಟಿಂಗ್ ಯಂತ್ರಗಳನ್ನೂ ಸಹ ೧೭೮ಕ್ಕೆ ಹೆಚ್ಚಿಸಿದ್ದೇವೆ,” ಎಂದು ಓರ್ವ ಅಧಿಕಾರಿ ವಿವರಿಸಿದರು.

ಬೆಂಗಳೂರು ಈ ಕೆಳಕಂಡ ಕಾರಣಗಳಿಂದಾಗಿ ‘ವಾಟರ್ ಪ್ಲಸ್’ ಪ್ರಮಾಣೀಕರಣವನ್ನು ಕಳೆದುಕೊಂಡಿತು: ಬಿಡಬ್ಲ್ಯು ಎಸ್‌ಎಸ್‌ಬಿ ಚರಂಡಿಗಳು ಹಾಗೂ ಇಂಗು ಗುಂಡಿಗಳನ್ನು ಸ್ವಚ್ಛಗೊಳಿಸಲು ಅಗತ್ಯವಿರುವುದಕ್ಕಿಂತ ಶೇ.೨೫ರಷ್ಟು ಕಡಿಮೆ ಸುರಕ್ಷತಾ ಕಿಟ್‌ಗಳನ್ನು ಹೊಂದಿವೆ. ಜೊತೆಗೆ, ಅವರ ಬಳಿ ಡೀಸ್ಲಡ್ಜಿಂಗ್ ಹಾಗೂ ಜೆಟ್ಟಿಂಗ್ ಯಂತ್ರಗಳಿಲ್ಲ ಹಾಗೂ ಕಾರ್ಯನಿರ್ವಹಣಾ ಮತ್ತು ಎಸ್‌ಟಿಪಿಗಳ ನಿರ್ವಹಣೆಯ ಮೇಲೆ ವ್ಯಯಿಸಿರುವಂತಹ ವೆಚ್ಚವನ್ನು ಮರುಗಳಿಸುವ ವಿಧಾನವಿಲ್ಲ.

ಒಡಿಎಫ್ ಸ್ಥಾನವನ್ನು ಉಳಿಸಿಕೊಂಡ ಬಿಬಿಎಂಪಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಕಳೆದ ವರ್ಷ ಗಳಿಸಿದ್ದಂತಹ ಒಡಿಎಫ್++ ಪ್ರಶಸ್ತಿಯನ್ನು ಈ ವರ್ಷವೂ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಬೆಂಗಳೂರು ನಗರವೂ ಒಳಗೊಂಡಂತೆ ದೇಶದ ಒಟ್ಟು ೩,೩೦೪ ನಗರಗಳನ್ನು ಒಡಿಎಫ್++ ಎಂದು ಪ್ರಮಾಣೀಕರಿಸಲಾಗಿದೆ.

ಒಡಿಎಫ್+ ಪ್ರಶಸ್ತಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ನೀರಿನ ವ್ಯವಸ್ಥೆಯಿರುವ ಶೌಚಾಲಯಗಳು, ಅವುಗಳ ನಿರ್ವಹಣೆ ಹಾಗೂ ನೈರ್ಮಲ್ಯವನ್ನು ಗಮನಿಸಿ ನೀಡಲಾಗುತ್ತದೆ. ಅದೇ ರೀತಿ ಒಡಿಎಫ್++ ಪ್ರಶಸ್ತಿಯನ್ನು ಸ್ಲಡ್ಜ್ (ಕೆಸರು) ಹಾಗೂ ಸೆಪ್ಟೇಜ್ ನಿರ್ವಹಣೆಗಾಗಿ (ತ್ಯಾಜ್ಯ ನಿರ್ವಹಣೆ) ನೀಡಲಾಗುತ್ತದೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: Missing- Water Plus –Tag-To -Bangalore