ವಿಜಯೇಂದ್ರಗೆ ಸಚಿವ ಸ್ಥಾನ ವಿಚಾರ:  ಹೆಚ್.ವಿಶ್ವನಾಥ್ ಪರೋಕ್ಷ ವಿರೋಧ.

ಮೈಸೂರು,ಮೇ,21,2022(www.justkannada.in): ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ವಿಚಾರ ಮತ್ತೆ ಚರ್ಚೆಗೆ ಬಂದಿದ್ದು ಈ ನಡುವೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರಗೆ ಸಚಿವ ಸ್ಥಾನ ನೀಡುವುದಕ್ಕೆ  ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಪರೋಕ್ಷ ವಿರೋಧ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿ ಪತ್ರಕರ್ತರ ಪ್ರಶ್ನೆಗೆ ವ್ಯಂಗ್ಯವಾಗಿ ಉತ್ತರಿಸಿದ ಎಂಎಲ್ ಸಿ ಹೆಚ್.ವಿಶ್ವನಾಥ್, ವಿಜಯೇಂದ್ರ ಮಿನಿಸ್ಟರ್ ಆಗ್ತಾರಾ, ಆಗುವುದಾದರೆ ಆಗಲಿ ಬಿಡಿ. ಗುಣಾತ್ಮಕ ವಿಚಾರಕ್ಕೆ ಬದಲಾವಣೆಗಳು ಆಗಬೇಕು. ವಿಜಯೇಂದ್ರ ಮಿನಿಸ್ಟರ್ ಮಾಡಿದ್ರೆ ಗುಣಾತ್ಮಕ ಬದಲಾವಣೆ ಆಗುತ್ತಾ ಎಂದು ಪ್ರಶ್ನಿಸಿದರು.

ವಿಶ್ವನಾಥ್ ಗೆ ಸಚಿವ ಸ್ಥಾನ ನೀಡುವಂತೆ ಹೋರಾಟ ನಡೆಸುತ್ತಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಹೋರಾಟ ಮಾಡ್ತಾ ಇದ್ದಾರೆ. ಆದರೆ ಇವರು ಕೊಡಬೇಕಲ್ಲ ಎಂದರು.

ಸಿದ್ದರಾಮಯ್ಯ ಅಧಿಕಾರದಲ್ಲಿದ್ದ ವೇಳೆ ಬೆಂಗಳೂರಿನ ರಾಜಕಾಲುವೆ ಒತ್ತುವರಿ ತೆರವು ಆರಂಭಿಸಿದ್ದರು. ಆ ಜಾಗದಲ್ಲಿ ಪ್ರಸಿದ್ಧ ನಟ, ಶ್ರೀಮಂತ ರಾಜಕಾರಣಿ ಮನೆ ಇದ್ದವು ಎಂದು ಕಾರ್ಯಾಚರಣೆ ನಿಲ್ಲಿಸಿದರು. ಬಡವರು ಮಾತ್ರ ಮನೆ ಕಳೆದುಕೊಂಡು ಬೀದಿಗೆ ಬಿದ್ದರು. ಶ್ರೀಮಂತರ ಮನೆಗಳು ಹಾಗೇ ಉಳಿದವು. ಬೆಂಗಳೂರಿನ ಕೆ.ಆರ್.ಪುರಂಗೆ ಸಿಎಂ ಹೋದರೆ ಅಲ್ಲಿ ಹೂ ಎರಚುತ್ತಾರೆ.ಅಲ್ಲಿನ ಜನರ ಮನೆಗೆ ನೀರು ಹೋಗಿದೆ ಇವರು ಹೂ ಎರಚಿ ಸಂಭ್ರಮಿಸುತ್ತಾರೆ.  ಇದು ಸರಿನಾ? ಮೂಲಭೂತ ಸೌಕರ್ಯಕ್ಕೆ ಎಲ್ಲಡೆ ಅತಿ ಹೆಚ್ಚು ಹಣ ಖರ್ಚಾಗ್ತಿದೆ. ಆದರೆ ಪ್ರತಿಫಲ ಮಾತ್ರ ಇಲ್ಲ ಎಂದು ಹೆಚ್.ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲಾ ಮಂತ್ರಿ ಎಲ್ಲಿ ಹೋದ್ರು.? ಜಿಲ್ಲೆಯಲ್ಲಿ ಮಳೆಯಿಂದ ಅನಾಹುತವಾಗಿದೆ. ನೀವು ಖುದ್ದು ಬಂದು ನೋಡಬೇಕು ತಾನೇ? ಸಿಎಂ ಎಲ್ಲಾ ಕಡೆ ಹೋಗಿ ಜನರ ಸಂಕಷ್ಟ ಆಲಿಸುತ್ತಿದ್ದಾರೆ. ಜಿಲ್ಲಾ ಮಂತ್ರಿಗಳು ಯಾಕೆ ಎಲ್ಲೂ ಹೋಗುತ್ತಿಲ್ಲ? ನಿಮಗೆ ಏನಾಗಿದೆ.? ಜನಪ್ರತಿನಿಧಿಗಳ ಸಭೆ ನಡೆಸಿ ಸಮಸ್ಯೆ ಪರಿಹರಿಸಿ. ಹಿಂದೆ ಮೋದಿ ಮೈಸೂರಿಗೆ ಬಂದಾಗ ಮೈಸೂರು ಪ್ಯಾರಿಸ್ ಮಾಡ್ತಿನಿ ಅಂತ ಹೇಳಿದ್ದರು. ಈಗ ಮೈಸೂರು ಕೊಳಚೆಯಾಗುತ್ತಿದೆ. ಇದನ್ನು ಮೋದಿ ಗಮನಿಸಲಿ ಎಂದು ಹೆಚ್.ವಿಶ್ವನಾಥ್ ಆಗ್ರಹಿಸಿದರು.

Key words: Ministerial-position-BY Vijayendra-H. Vishwanath -indirect -opposition.