ಮೈಸೂರು ದಸರಾ: ಈ ಬಾರಿ ‘VIP ಉಚಿತ ಗೋಲ್ಡ್ ಪಾಸ್‌’ಗೆ ಕೊಕ್- ಸಚಿವ ಡಾ. ಯತೀಂದ್ರ ಸಿದ್ಧರಾಮಯ್ಯ

ಮೈಸೂರು, ಜುಲೈ, 27,2026 (www.justkannada.in): ಈ ಬಾರಿ ಮೈಸೂರು ದಸರಾ ಗೋಲ್ಡ್ ಪಾಸ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ವಿಐಪಿ ಉಚಿತ ಗೋಲ್ಡ್ ಪಾಸ್‌ ನೀಡದಿರಲು ನಿರ್ಧರಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ಧರಾಮಯ್ಯ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ನಡೆದ ದಸರಾ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ದಸರಾವನ್ನು ಇನ್ನಷ್ಟು ವೈಭವದಿಂದ ಆಯೋಜಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಈ ಬಾರಿ ಆಸನಗಳ ಸಂಖ್ಯೆಗೆ ಅನುಗುಣವಾಗಿ ಮಾತ್ರ ಗೋಲ್ಡ್ ಪಾಸ್ ಮುದ್ರಿಸಲಾಗುತ್ತದೆ. ಹಣ ಪಾವತಿಸಿ ಖರೀದಿಸುವ ಸಾರ್ವಜನಿಕರಿಗೆ ಮಾತ್ರ ಪಾಸ್ ನೀಡಲಾಗುವುದು. ವಿಐಪಿಗಳಿಗೆ ಉಚಿತ ಗೋಲ್ಡ್ ಪಾಸ್ ನೀಡದಿರಲು ಸರ್ಕಾರ ನಿರ್ಧರಿಸಿದೆ ಎಂದು ಸ್ಪಷ್ಟಪಡಿಸಿದರು.

ಮೈಸೂರು ದಸರಾ–2026ರ ಯಶಸ್ವಿ ಆಯೋಜನೆಗಾಗಿ 17 ಉಪಸಮಿತಿಗಳನ್ನು ರಚಿಸಲಾಗಿದ್ದು, ಕಾರ್ಯಾಧ್ಯಕ್ಷರಿಗೆ ಜವಾಬ್ದಾರಿ ವಹಿಸಲಾಗಿದೆ. ಈ ಬಾರಿ ಕರಾವಳಿ ಭಾಗದ ಜನಪ್ರಿಯ ಜಾನಪದ ಕ್ರೀಡೆಯಾದ ಕಂಬಳ ಆಯೋಜನೆ ಕುರಿತು ಚರ್ಚೆ ನಡೆಯುತ್ತಿದ್ದು, ಅದು ಅಂತಿಮಗೊಂಡರೆ 18ನೇ ಉಪಸಮಿತಿಯನ್ನು ರಚಿಸಲಾಗುವುದು ಎಂದು ಹೇಳಿದರು. ಚಾಮುಂಡಿ ಬೆಟ್ಟದ ತಪ್ಪಲಿನ ಸೈಕ್ಲಿಂಗ್ ವೆಲೋಡ್ರೋಮ್ ಪ್ರದೇಶವನ್ನು ಸ್ಥಳವಾಗಿ ಪರಿಶೀಲಿಸಲಾಗಿದ್ದು, ಮುಖ್ಯಮಂತ್ರಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

ದಸರಾ ಉದ್ಘಾಟಕರಾಗಿ ಹಲವು ಗಣ್ಯರ ಹೆಸರುಗಳು ಶಾಸಕರಿಂದ ಬಂದಿದ್ದು, ಅಂತಿಮ ಆಯ್ಕೆಯನ್ನು ಮುಖ್ಯಮಂತ್ರಿ ಮಾಡಲಿದ್ದಾರೆ ಎಂದು ತಿಳಿಸಿದರು.

ನಗರದಲ್ಲಿ ನಡೆಯುತ್ತಿರುವ ಫ್ಲೈಓವರ್, ವೈಟ್‌ ಟಾಪಿಂಗ್ ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಲ್ಲಿ ದಸರಾ ವೇಳೆಗೆ ಪೂರ್ಣಗೊಳ್ಳಬಹುದಾದ ಕಾಮಗಾರಿಗಳನ್ನು ಶೀಘ್ರ ಮುಗಿಸಲು ಸೂಚಿಸಲಾಗಿದೆ. ಪೂರ್ಣಗೊಳ್ಳದ ಕಾಮಗಾರಿಗಳನ್ನು ಹಬ್ಬದ ಅವಧಿಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದರು.

ಈ ಬಾರಿ ಡ್ರೋನ್ ಶೋವನ್ನು ಮತ್ತಷ್ಟು ವಿನೂತನವಾಗಿ ಆಯೋಜಿಸುವ ಜೊತೆಗೆ, ಕೇಂದ್ರ ಸರ್ಕಾರದ ಅನುಮತಿ ದೊರೆತರೆ ಏರ್ ಶೋ ನಡೆಸುವ ಪ್ರಯತ್ನವೂ ನಡೆಯುತ್ತಿದೆ ಎಂದು ಹೇಳಿದರು.

ದಸರಾ ಹಾಗೂ ಎಸ್‌ ಐಆರ್ ಸಂಬಂಧಿತ ಕಾರ್ಯಗಳಲ್ಲಿ ಅಧಿಕಾರಿಗಳು ನಿರತರಾಗಿದ್ದರೂ, ಸಾರ್ವಜನಿಕರ ದೈನಂದಿನ ಕೆಲಸಗಳಿಗೆ ಯಾವುದೇ ತೊಂದರೆಯಾಗದಂತೆ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ ಎಂದರು.

Key words: Mysore Dasara, VIP,  Free Gold Pass, Minister, Yatindra Siddaramaiah