ಯಾರು ದೆಹಲಿಗೆ ಹೋಗುತ್ತಿದ್ದಾರೋ ಆ ಪುಣ್ಯಾತ್ಮರನ್ನೇ ಕೇಳಿ- ಸುತ್ತೂರು ಶಾಖಾ ಮಠದಲ್ಲಿ ಸಚಿವ ವಿ.ಸೋಮಣ್ಣ ಹೇಳಿಕೆ.

ಮೈಸೂರು,ಜೂನ್,12,2021(www.justkannada.in): ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಸಂಬಂಧ ಯಾರು ದೆಹಲಿಗೆ ಹೋಗಿದ್ದಾರೆ, ಹೋಗಿಲ್ಲ ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ನನ್ನ ಬುದ್ದಿವಂತಿಕೆಯನ್ನು ಕೊರೊನಾ ನಿಯಂತ್ರಣಕ್ಕೆ ಬಳಸುತ್ತಿದ್ದೇನೆ. ಕೆಲವರು ಆ ಬುದ್ದಿವಂತಿಕೆಯನ್ನು ಬೇರೆಯದಕ್ಕೆ ಬಳಸುತ್ತಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.jk

ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ ಸಚಿವ ವಿ.ಸೋಮಣ್ಣ, ಸುತ್ತೂರು ಶ್ರೀಗಳನ್ನು ಭೇಟಿಯಾಗಿ ಪ್ರಸಕ್ತ ವಿದ್ಯಾಮನಗಳ ಬಗ್ಗೆ ಕೆಲಕಾಲ ಚರ್ಚೆ ನಡೆಸಿದರು.

ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಸಚಿವ ವಿ.ಸೋಮಣ್ಣ, ಯಾರು ದೆಹಲಿಗೆ ಹೋಗಿದ್ದಾರೆ, ಹೋಗಿಲ್ಲ ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ಆ ಪುಣ್ಯಾತ್ಮರನ್ನೇ ಈ ಬಗ್ಗೆ ಕೇಳಿ ಯಾವ ಕಾರಣಕ್ಕೆ ದೆಹಲಿಗೆ ಹೋಗುತ್ತಿದ್ದಾರೆ. ನನ್ನನ್ನು ಸೇರಿದಂತೆ ಪ್ರತಿಯೊಬ್ಬರಿಗೂ ಒಂದೊಂದು ಕಾಯಿಲೆ ಇದೆ. ನನಗೆ ಕೆಲಸ ಮಾಡುವ ಕಾಯಿಲೆ. ಅವರಿಗೆ ದೆಹಲಿಗೆ ಹೋಗುವ ಕಾಯಿಲೆ. ಆ ಕಾಯಿಲೆಯ ಮದ್ದು ಗೊತ್ತಿಲ್ಲ ಎಂದು ಲೇವಡಿ ಮಾಡಿದರು.

ಇದು ಕೊರೊನಾ ನಿಯಂತ್ರಣ ಮಾಡಬೇಕಾದ ಸಮಯ. ಈ ಸಂದರ್ಭದಲ್ಲಿ ಇಂತಹ ಬೆಳವಣಿಗೆಗಳು ಸರಿಯಲ್ಲ. ಸಿಎಂ ಯಡಿಯೂರಪ್ಪ ಪ್ರತಿ ಜಿಲ್ಲೆ ಜಿಲ್ಲೆ ತಿರುಗುತ್ತಿದ್ದಾರೆ. ಎಲ್ಲವನ್ನೂ ಹೈ ಕಮಾಂಡ್ ಗಮನಿಸುತ್ತಿದೆ. ಹೈಕಮಾಂಡ್ ಇದಕ್ಕೆಲ್ಲಾ ಒಂದು ಅಂಕಿತ ಹಾಕಬೇಕಿದೆ ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.

ರಾಜ್ಯದಾದ್ಯಂತ 10 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ

ಇನ್ನು ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ರಾಜ್ಯದಾದ್ಯಂತ 10 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿಯಿದೆ. 2023 ರೊಳಗೆ 10 ಲಕ್ಷ ಮನೆಗಳನ್ನು ನಿರ್ಮಿಸಲಾಗುವುದು. ಈ ಪೈಕಿ ಗ್ರಾಮೀಣ ಪ್ರದೇಶದಲ್ಲಿ 6 ಲಕ್ಷ, ಪಟ್ಟಣ ಪ್ರದೇಶದಲ್ಲಿ 3 ಲಕ್ಷ ಮತ್ತು ಬೆಂಗಳೂರಿನಲ್ಲಿ 1 ಲಕ್ಷ ಮನೆಗಳನ್ನು ನಿರ್ಮಿಸಲಾಗುತ್ತದೆ. ಈಗಾಗಲೇ 2.71 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಮುಗಿದಿದೆ. ಬಾಕಿ ಉಳಿದಿರುವ ಮನೆಗಳನ್ನು ನಿಗಧಿತ ಅವಧಿಯೊಳಗೆ ನಿರ್ಮಿಸಿ ಅರ್ಹರಿಗೆ ಹಂಚಿಕೆ ಮಾಡಲಾಗುವುದು ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.

Key words: minister-V.Somanna-visit-suttur-mysore