Monday, August 24, 2026

BDA Apartments

Home Front Page ಮೈಸೂರಿನಲ್ಲಿ ಆಕ್ಸಿಜಿನ್, ಬೆಡ್ ಕೊರತೆ  ಕುರಿತು ಸಚಿವ ಎಸ್.ಟಿ.ಸೋಮಶೇಖರ್  ಸ್ಪಷ್ಟನೆ ನೀಡಿದ್ದು ಹೀಗೆ..

ಮೈಸೂರಿನಲ್ಲಿ ಆಕ್ಸಿಜಿನ್, ಬೆಡ್ ಕೊರತೆ  ಕುರಿತು ಸಚಿವ ಎಸ್.ಟಿ.ಸೋಮಶೇಖರ್  ಸ್ಪಷ್ಟನೆ ನೀಡಿದ್ದು ಹೀಗೆ..

ಮೈಸೂರು, ಏಪ್ರಿಲ್ 27,2021(www.justkannada.in):  ಮೈಸೂರು ಜಿಲ್ಲೆಯಲ್ಲಿ ಆಕ್ಸಿಜನ್ ಸೌಲಭ್ಯ ಹೊಂದಿರುವ ಹಾಸಿಗೆಗಳ  ಕೊರತೆ ಇಲ್ಲ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.jk

ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಅವಲೋಕಿಸಲು ಮಂಗಳವಾರ ಜೆ‌.ಎಸ್.ಎಸ್‌. ಆಸ್ಪತ್ರೆಗೆ ಭೇಟಿ ನೀಡಿ ಸಚಿವ ಎಸ್.ಟಿ ಸೋಮಶೇಖರ್ ಪರಿಶೀಲನೆ ನಡೆಸಿದರು. ಈ ವೇಳೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮುಡಾ ಅಧ್ಯಕ್ಷ ರಾಜೀವ್, ಪಾಲಿಕೆ ಅಧಿಕಾರಿಗಳು ಸೇರಿದಂತೆ ಹಲವರು ಸಾಥ್ ನೀಡಿದರು.

ಬಳಿಕ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ಸರ್ಕಾರವು ಖಾಸಗಿ ಆಸ್ಪತ್ರೆಗಳಿಗೆ ನಿಯೋಜಿಸಿರುವ ರೋಗಿಗಳಿಗೆ ಬೇಕಾಗುವಷ್ಟು ರೆಮ್‌ಡಿಸಿವಿರ್ ಔಷಧ ಲಭ್ಯವಿದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಲ್ಲಿ ನೋಂದಣಿಯಾಗಿರುವ ಖಾಸಗಿ ಆಸ್ಪತ್ರೆಗಳಿಗೂ ಬೇಡಿಕೆಗೆ ಅನುಗುಣವಾಗಿ ರೆಮ್‌ ಡಿಸಿವಿರ್ ಸರಬರಾಜು ಆಗಿದೆ. ಇವುಗಳನ್ನು ಹೊರತಾದ ಖಾಸಗಿ ಆಸ್ಪತ್ರೆಗಳಲ್ಲಿ ರೆಮ್‌ ಡಿಸಿವಿರ್ ಪೂರೈಕೆಯಲ್ಲಿ ತೊಂದರೆಯಾಗಿದೆ. ಎರಡು ಮೂರು ದಿನದಲ್ಲಿ  ಅಗತ್ಯಕ್ಕೆ ಅನುಗುಣವಾಗಿ ಔಷಧ ಪೂರೈಕೆ ಆಗಲಿದೆ ಎಂದರು.

ಇವತ್ತಿಗೆ 2000 ರೆಮ್ಡಿಸಿವಿರ್ ಔಷಧ ಬೇಕಾಗಿದೆ. ನೆನ್ನೆ 378 ರೆಮ್ಡಿಸಿವಿರ್ ಬಂದಿದೆ. ಇನ್ನೂ ಬೇಕಾಗಿರುವ ಔಷಧ ಪೂರೈಕೆಗೆ ಮಾಹಿತಿ ಕೊಟ್ಟಿದ್ದೇವೆ. ಔಷಧ ಬರುತ್ತಿದೆ ಎಂದರು.

ಜೆ.ಎಸ್.ಎಸ್‌. ಆಸ್ಪತ್ರೆಯು ಈಗಾಗಲೇ 411 ಹಾಸಿಗೆಗಳನ್ನು ಸರ್ಕಾರಕ್ಕೆಕೊಟ್ಟಿದೆ. ಇನ್ನೂ 100 ಆಕ್ಸಿಜನ್ ಹಾಸಿಗೆಗಳನ್ನು ನೀಡುವಂತೆ ಕೇಳಿದ್ದೇವೆ. ಪೂರಕವಾಗಿ ಸ್ಪಂದಿಸಿದ್ದಾರೆ. ಈ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

ಖಾಸಗಿ ಆಸ್ಪತ್ರೆಗಳು ಶೇಕಡ 20 ರಿಂದ 50 ರಷ್ಟು ಹಾಸಿಗೆಗಳನ್ನು ಕೊಟ್ಟಿದ್ದಾರೆ. ಎಲ್ಲರೂ ಸಹಕರಿಸುತ್ತಿದ್ದಾರೆ. ಅಧಿಕ ದರ ವಸೂಲಿ ಮಾಡಲು ಅವಕಾಶ ನೀಡುವುದಿಲ್ಲ. ಹಾಗೇನಾದರೂ ದೂರು ಬಂದರೆ ಶಿಸ್ತು ಕ್ರಮವಹಿಸಲಾಗುವುದು ಎಂದರು.

ಕೆ.ಆರ್. ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ಹೆಚ್ಚಿಸಲಾಗುತ್ತಿದೆ. ಕೋವಿಡ್ ಪಾಸಿಟಿವ್ ಬಂದವರಿಗೆಲ್ಲಾ ಆಕ್ಸಿಜನ್ ಬೆಡ್ ಬೇಕಾಗಿಲ್ಲ. ಆದರೆ ಎಲ್ಲರೂ ಆಕ್ಸಿಜನ್ ಬೆಡ್ ನಿರೀಕ್ಷಿಸುತ್ತಿದ್ದಾರೆ. ಆಕ್ಸಿಜನ್ ಹಾಗೂ ಐ‌.ಸಿ.ಯು. ಬೇಕಾ ಎಂಬುದನ್ನು ವೈದ್ಯರು ತೀರ್ಮಾನಿಸುತ್ತಾರೆ. ಅಗತ್ಯಕ್ಕೆ ಅನುಗುಣವಾಗಿ ಆಕ್ಸಿಜನ್, ಐ.ಸಿ.ಯು. ಒದಗಿಸಲಾಗುವುದು. ಐ.ಸಿ.ಯು ಮತ್ತು ಆಕ್ಸಿಜನ್ ಬೆಡ್ ಸಂಖ್ಯೆ ಹೆಚ್ಚಿಸಲು ಕ್ರಮವಹಿಸಲಾಗಿದೆ ಎಂದರು.

18 ವರ್ಷ ಮೀರಿದವರಿಗೆ ಉಚಿತವಾಗಿ ಲಸಿಕೆ ನೀಡಲು ಸರ್ಕಾರ 2600 ಕೋಟಿ ರೂ. ಅನುದಾನ ಒದಗಿಸಿದೆ. ಎಲ್ಲರೂ ಲಸಿಕೆ ಒದಗಿಸಲಾಗುವುದು. ಕೋವಿಡ್ ನಿಯಂತ್ರಣಕ್ಕೆ 14 ದಿನಗಳ ಲಾಕ್ ಡೌನ್ ಘೋಷಿಸಲಾಗಿದೆ. ಈ ಅವಧಿಯಲ್ಲಿ ಕೃಷಿ ಚಟುವಟಿಕೆ ಹಾಗೂ ಅಗತ್ಯ ಕೈಗಾರಿಕಾ, ಸೇವಾ  ಚಟುವಟಿಕೆಗೆ ನಿರ್ಬಂಧವಿಲ್ಲ. ಇದಲ್ಲದೆ ಬೆಳಗ್ಗೆ 6:00 ರಿಂದ ಬೆಳಗ್ಗೆ 10 ಗಂಟೆ ವರೆಗೆ ಅಗತ್ಯ ಆಹಾರ ಮತ್ತು ಅತ್ಯಾವಶ್ಯಕ ವಸ್ತು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಆರ್ಥಿಕ ಪ್ಯಾಕೇಜ್ ಘೋಷಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್,  ಯಾವುದೇ ವಲಯಕ್ಕೂ ಯಾವ ಪ್ಯಾಕೇಜ್ ಬಗ್ಗೆ ಚರ್ಚೆ ಆಗಿಲ್ಲ. ಸಹಕಾರ ಕ್ಷೇತ್ರದ ಬ್ಯಾಂಕ್‌ ಗಳ ಸಾಲ ಮನ್ನಾ ಬಡ್ಡಿ ಮನ್ನಾ ಇಲ್ಲ ಎಂದು ಕಡ್ಡಿ ತುಂಡಾದಂತೆ ಸ್ಪಷ್ಟನೆ ನೀಡಿದರು.

ಈ ರೀತಿಯ ಯಾವ ಪ್ರಸ್ತಾವನೆ ನಮ್ಮ ಮುಂದೆ ಇಲ್ಲ. ಇಂದಿನ ಪರಿಸ್ಥಿತಿ ನಿಭಾಯಿಸುವುದು ಅಷ್ಟೇ ನಮ್ಮ ಗುರಿ. ತಾಂತ್ರಿಕ ಸಲಹಾ ಸಮಿತಿ ಸಲಹೆಯಂತೆ ಲಾಕ್‌ಡೌನ್ ಮಾಡಲಾಗಿದೆ. ಇದು ಜನರ ಹಿತದೃಷ್ಟಿಯಿಂದ ತೆಗೆದುಕೊಂಡ ಕ್ರಮ. ಮೈಸೂರು ಜನತೆಯಲ್ಲಿ ಮನವಿ ಮಾಡುತ್ತೇನೆ. 14 ದಿನಗಳ ಲಾಕ್ ಡೌನ್‌ಗೆ ಸಹಕಾರ ನೀಡಿದರೆ ಮಾತ್ರ ಈ ಕೊರೊನಾ ಸರಪಳಿಯನ್ನು  ಮುರಿಯಲು ಸಾಧ್ಯ ಎಂದರು.

Key words: Minister – ST Somashekhar -explained -lack of oxygen – beds – Mysore.