ಶಾಸಕ ರಾಮದಾಸ್ ಏರ್ಪಡಿಸಿದ್ದ ಕಾರ್ಪೋರೇಟರ್ ಸಭೆಗೆ ಭೇಟಿ ನೀಡಿ ಅಚ್ಚರಿ ತಂದ ಸಚಿವ ಸೋಮಶೇಖರ್

ಬಿಜೆಪಿ ಶಿಸ್ತಿನ ಪಕ್ಷವೆಂದ ಉಸ್ತುವಾರಿ ಸಚಿವ ಸೋಮಶೇಖರ್

ಮೈಸೂರು: ಕೆ.ಆರ್. ಕ್ಷೇತ್ರದ ಬಿಜೆಪಿ ಶಾಸಕರಾದ ಎಸ್.ಎ.ರಾಮದಾಸ್ ಅವರು ಭಾನುವಾರ ಏರ್ಪಡಿಸಿದ್ದ ತಮ್ಮ ಕ್ಷೇತ್ರದ ಕಾರ್ಪೋರೇಟರ್ ಗಳ ಸಭೆಗೆ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಭೇಟಿ ನೀಡಿ ಅಚ್ಚರಿ ಮೂಡಿಸಿದರು.

ಬಳಿಕ ಮಾತನಾಡಿದ ಸಚಿವರು, ಬಿಜೆಪಿ ಶಿಸ್ತಿನ ಪಕ್ಷ ಎಂಬುದು ಪದೇ ಪದೆ ಸಾಬೀತಾಗುತ್ತಲೇ ಇದೆ. ಇಲ್ಲಿ ಸಭೆಯಲ್ಲಿ ಎಲ್ಲರೂ ಸಹಕಾರ ಹಾಗೂ ಶಿಸ್ತಿನಿಂದ ಕುಳಿತಿರುವುದು ಇದನ್ನು ಸೂಚಿಸುತ್ತದೆ ಎಂದು ತಿಳಿಸಿದರು.

ಶಾಸಕರಾದ ರಾಮದಾಸ್ ಅವರು ಸಂಘಟಿತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಕಾರ್ಯ ಹೀಗೆಯೇ ಮುಂದುವರಿಯಲಿ. ಮನೆಯಲ್ಲಿ ಮಾಡಿದಂತೆ ಅಡುಗೆಯನ್ನು ಮಾಡಿ ತಮ್ಮ ಕ್ಷೇತ್ರದ ವಲಸೆ ಕಾರ್ಮಿಕರಿಗೆ ಕಾರ್ಖಾನೆ ಮಾದರಿಯಂತೆ ಊಟ ವಿತರಣೆ ಮಾಡಿದ್ದಾರೆ. ನಾನು ಇದನ್ನು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದೇನೆ. ಇಂಥ ಕಾರ್ಯಗಳು ಉಳಿದ ಜನಪ್ರತಿನಿಧಿಗಳು ಅನುಸರಿಸುವಂತಾಗಲಿ ಎಂದು ಸಚಿವರು ತಿಳಿಸಿದರು.

ಜಿಲ್ಲೆಯಲ್ಲಿ ಕೊರೋನಾ ಮುಕ್ತವಾಗಿರುವುದಕ್ಕೆ ಪೌರಕಾರ್ಮಿಕರು, ವೈದ್ಯರು, ನರ್ಸ್ ಗಳು, ಪೊಲೀಸರು ಸೇರಿದಂತೆ ಹಲವರ ಕೊಡುಗೆಗಳು ಇವೆ. ಈ ರೀತಿಯಾಗಿ ಜ ಕಾರ್ಯನಿರ್ವಹಿಸಿದರನ್ನು ಶೀಘ್ರದಲ್ಲಿ ಗೌರವಿಸುವ ಕೆಲಸ ಆಗಲಿದೆ. ಈ ನಿಟ್ಟಿನಲ್ಲಜ ರಾಮದಾಸ್ ಅವರ ಸಲಹೆ, ಸಹಕಾರವನ್ನೂ ಪಡೆಯಲಿದ್ದೇನೆ ಎಂದು ಸಚಿವರು ತಿಳಿಸಿದರು.

ಶಾಸಕರಾದ ಎಸ್.ಎರಾಮದಾಸ್ ಮಾತನಾಡಿ, ನಮ್ಮ ಪಕ್ಷದಲ್ಲಿ ಮೊದಲಿನಿಂದಲೂ ಅನ್ಯೋನ್ಯತೆಯಿಂದ ಇರುವ ಪರಿಪಾಠ ಬಂದಿದೆ. ಅದು ಪಕ್ಷದ ಕಾರ್ಯಕರ್ತನಿಂದ ಹಿಡಿದು ಮೇರುಮಟ್ಟದ ನಾಯಕರವರೆಗೂ ಬೆಳೆದುಕೊಂಡು ಬಂದಿದೆ. ಈಗ ಕೊರೋನಾ ಹತೋಟಿಗೆ ಬಂದಿರುವ ಹಿನ್ನೆಲೆಯಲ್ಲಿ ಪಕ್ಷದ ಎಲ್ಲ ಕಾರ್ಪೊರೇಟರ್ ಗಳು ಎಲ್ಲ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳ ಮನೆಗೆ ಹೋಗಿ ಸೌಹಾರ್ದಯುತ ಬಾಂಧವ್ಯ ಬೆಳೆಸಿಕೊಳ್ಳುವ ಯೋಜನೆ ಹಾಕಿಕೊಳ್ಳಲಾಗಿದ್ದು, ಶೀಘ್ರದಲ್ಲೇ ಕಾರ್ಯಗತಗೊಳಿಸಲಾಗುವುದು ಎಂದು ತಿಳಿಸಿದರು.