ಕೇಂದ್ರದ ನಿರ್ಧಾರಗಳಿಂದ ಕಬ್ಬು ಬೆಳೆಗಾರರು, ಕಾರ್ಖಾನೆ ಮಾಲೀಕರಿಗೂ ನಷ್ಟ- ಸಚಿವ ಶಿವಾನಂದ ಪಾಟೀಲ್‌

ಬೆಳಗಾವಿ,ಡಿಸೆಂಬರ್, 10,2025 (www.justkannada.in): ಕೇಂದ್ರ ಸರ್ಕಾರದ ನಿರ್ಧಾರಗಳಿಂದ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳು ಇಬ್ಬರಿಗೂ ನಷ್ಟವಾಗುತ್ತಿದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್‌ ಆರೋಪ ಮಾಡಿದರು.

ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಚರ್ಚೆಯಾಗುತ್ತಿದ್ದು, ಈ ವೇಳೆ ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಾಯಿತು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ್, ಕೇಂದ್ರ ಸರ್ಕಾರ ರಫ್ತು ಕೋಟಾ ಜಾಸ್ತಿ ಮಾಡಿದರೆ ಸಕ್ಕರೆ ಕಾರ್ಖಾನೆಗಳಿಗೆ ಲಾಭವಾಗುತ್ತದೆ. ಎಂ ಎಸ್‌‍ ಪಿ ಸಕ್ಕರೆ ಬೆಲೆಯನ್ನು ಹೆಚ್ಚಿಸಬೇಕೆಂದು ಕಾರ್ಖಾನೆಗಳ ಮಾಲೀಕರು ಏಳು ವರ್ಷದಿಂದ ಹೋರಾಟ ನಡೆಸುತ್ತಿದ್ದಾರೆ. ಈಗಿರುವ 31 ರೂಪಾಯಿ ಬೆಲೆಯನ್ನು ಹೆಚ್ಚಿಸಲು ಎರಡು ದಾರಿಗಳಿವೆ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಸಕ್ಕರೆ ಬೆಲೆಯನ್ನು ಹೆಚ್ಚಿಸಬಹುದು. ಚಾಕ್ಲೇಟ್‌, ಸಿಹಿ ಕಾರ್ಖಾನೆಗಳ ಮಾಲೀಕರು ಒಂದು ಕೆಜಿ ಸಕ್ಕರೆಗೆ ಕೋವಾ ಹಾಗೂ ಇತರ ಮಿಶ್ರಣ ಮಾಡಿ 2 ಕೆಜಿ ಸಿಹಿ ಹೆಚ್ಚಿಸಿಕೊಳ್ಳುತ್ತಾರೆ. ಅವರಿಗೆ ಪ್ರತ್ಯೇಕ ದರ ನಿಗದಿಪಡಿಸಬೇಕು. ಜನಸಾಮಾನ್ಯರು ಬಳಸುವ ಸಕ್ಕರೆಯ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಬೇಕು ಎಂದು ತಿಳಿಸಿದರು.

ಪ್ರತಿ ಲೀಟರ್‌ ಎಥೇನಾಲ್‌ ಗೆ 70 ರೂ. ದರವಿದ್ದು, ಅದನ್ನು ಹೆಚ್ಚಿಸಬೇಕಿದೆ. ರಫ್ತು ಅನ್ನು ಎರಡು-ಮೂರು ವರ್ಷಗಳಿಂದ ತಡೆಹಿಡಿಯಲಾಗಿದೆ. ಅದನ್ನು ಸಡಿಲ ಮಾಡಬೇಕು. ಈ ಸಲಹೆಗಳನ್ನು ಕೇಂದ್ರ ಸರ್ಕಾರ ಜಾರಿ ಮಾಡಿದರೆ ಸಕ್ಕರೆ ಕಾರ್ಖಾನೆಗಳು ಬದುಕಿಕೊಳ್ಳುತ್ತವೆ  ಎಂದು ಸಚಿವ ಶಿವಾನಂದ ಪಾಟೀಲ್ ತಿಳಿಸಿದರು.

Key words: Sugarcane, growers, factory, owners, suffer, Minister, Shivanand Patil