ಇವರೆಲ್ಲರೂ ಕುರ್ಚಿ ಚಿಂತಕರು, ರಾಜ್ಯಕ್ಕೆ ಇವರ ಕೊಡುಗೆ ಏನು? ಸಚಿವ ಪ್ರಿಯಾಂಕ್ ಖರ್ಗೆ ಕಿಡಿ

ಬೆಂಗಳೂರು,ನವೆಂಬರ್,3,2025 (www.justkannada.in): ‘ ಪ್ರಿಯಾಂಕ್ ಖರ್ಗೆ ಮತ್ತು ಯತೀಂದ್ರ ಸಿದ್ದರಾಮಯ್ಯ  ಅವರು ರಾಜ್ಯವನ್ನ ನಿಯಂತ್ರಿಸುತ್ತಿರುವುದು ವಿಷಾದಕರ ಎಂದು ಟ್ವೀಟ್ ಮಾಡಿದ್ದ ರಾಜ್ಯಸಭಾ ಬಿಜೆಪಿ ಸದಸ್ಯ ಲಹರ್ ಸಿಂಗ್ ಗೆ ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯ ಲಹರ್ ಸಿಂಗ್  ಅವರು ಒಂದೂವರೆ ದಶಕಕ್ಕೂ ಹೆಚ್ಚು ಕಾಲ ರಾಜ್ಯದಲ್ಲಿದ್ದಾರೆ. ರಾಜ್ಯಕ್ಕೆ ಅವರ ಕೊಡುಗೆ ಏನು? ಅವರ ಜನಪ್ರಿಯತೆ ಮತಗಳ ಮೂಲಕ ಬರುವ ಸಾಮರ್ಥ್ಯ ಹೊಂದಿಲ್ಲ. ಅವರ ಕೊಡುಗೆಗಳಲ್ಲಿ ಒಂದನ್ನು ನನಗೆ ತೋರಿಸಲಿ. ಇವರೆಲ್ಲರೂ ಕುರ್ಚಿ ಚಿಂತಕರು ಎಂದು ಲೇವಡಿ ಮಾಡಿದರು.

ನಾನು ಕಾಂಗ್ರೆಸ್ಸಿಗ. ನನ್ನ ಸಿದ್ಧಾಂತವನ್ನು ನಾನು ರಕ್ಷಿಸುತ್ತೇನೆ. ಪ್ರಧಾನಿ ಮೋದಿ ಅವರ ಸಿದ್ಧಾಂತವನ್ನು ರಕ್ಷಿಸಲು ಅವರನ್ನು ನಿಯೋಜಿಸಿದ್ದಾರೆಯೇ? ಅವರು ಆರ್‌ಎಸ್‌ಎಸ್ ಸದಸ್ಯರಲ್ಲದಿದ್ದರೆ ಆರ್‌ಎಸ್‌ಎಸ್ ಬಗ್ಗೆ ಏಕೆ ಮಾತನಾಡುತ್ತಿದ್ದಾರೆ? ಎಂದು ಪ್ರಶ್ನಿಸಿದರು.

ಪ್ರಿಯಾಂಕ್ ಖರ್ಗೆ ಮತ್ತು ಯತೀಂದ್ರ ಸಿದ್ದರಾಮಯ್ಯ ಅವರ ಬಗ್ಗೆ ಟ್ವೀಟ್ ಮಾಡಿದ್ದ ಲಹರ್ ಸಿಂಗ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್​ ಕಾಂಗ್ರೆಸ್ ಪಕ್ಷದ ಸೂಪರ್ ಅಧ್ಯಕ್ಷರಂತೆ ವರ್ತಿಸಿದರೆ, ಸಿಎಂ ಸಿದ್ದರಾಮಯ್ಯ ಅವರ ಮಗ ಯತೀಂದ್ರ ಸೂಪರ್ ಸಿಎಂರಂತೆ ವರ್ತಿಸುತ್ತಿದ್ದಾರೆ. ದುರಹಂಕಾರದಿಂದ ತಮ್ಮ ಪಕ್ಷ ಮತ್ತು ಸರ್ಕಾರದಲ್ಲಿರುವ ಹಿರಿಯರ ಮೇಲೆ ಅವರಿಬ್ಬರು ಸವಾರಿ ಮಾಡುತ್ತಿದ್ದರೂ ಸಹಿಸಿಕೊಳ್ಳಲಾಗುತ್ತಿದೆ. ಕರ್ನಾಟಕವನ್ನು ಇಬ್ಬರ ಪುತ್ರರು ನಿಯಂತ್ರಿಸುತ್ತಿರುವುದು ವಿಷಾದಕರ ಎಂದು ಆರೋಪಿಸಿದ್ದರು.

Key words: BJP, Lahar singh, Minister,  Priyank Kharge