ಮೈಸೂರು,ಅಕ್ಟೋಬರ್,14,2026 (www.justkannada.in): ರಾಜ್ಯದಲ್ಲಿ ಜೂನ್ ನಿಂದ 1225 ಕರ್ನಾಟಕ ಪಬ್ಲಿಕ್ ಶಾಲೆಗಳು ಪ್ರಾರಂಭವಾಗಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿದರು.
ನಗರದ ಕರ್ನಾಟಕ ಕಲಾಮಂದಿರದಲ್ಲಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2026 ಅಂಗವಾಗಿ ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿ ವತಿಯಿಂದ ಆಯೋಜಿಸಿದ್ದ ಮಕ್ಕಳ ದಸರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಸಿಎಸ್ ಆರ್ ಅನುದಾನಲ್ಲೂ 1000 ಶಾಲೆಗಳನ್ನು ಸ್ಥಾಪಿಸಲು ಕ್ರಮವಹಿಸಲಾಗುತ್ತಿದೆ ಎಂದರು.
ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ (ಕೆಪಿಎಸ್) ಎಲ್ ಕೆ ಜಿ ಯಿಂದ ದ್ವಿತೀಯ ಪಿಯುಸಿ ವರೆಗೆ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುವುದು. ಪ್ರತಿ ತರಗತಿಗೆ ಒಬ್ಬರು ಶಿಕ್ಷಕರು ಹಾಗೂ ಕೌಶಲ್ಯ ಅಭಿವೃದ್ದಿ, ನಾಟಕ, ದೈಹಿಕ ಹಾಗೂ ಸಂಗೀತ ಶಿಕ್ಷಣಕ್ಕೆ ಪ್ರತ್ಯೇಕ ಶಿಕ್ಷಕರು ಇರಲಿದ್ದಾರೆ. ಅಲ್ಲದೇ ಮಕ್ಕಳಿಗೆ ಇಲಾಖೆಯಿಂದಲೇ ಜೂನ್ ತಿಂಗಳಿಂದ ಉಚಿತ ಬಸ್ ವ್ಯವಸ್ಥೆಯನ್ನು ಸಹ ಮಾಡಲಾಗುವುದು ಎಂದು ತಿಳಿಸಿದರು.
ಶಿಕ್ಷಣ ಸಚಿವನಾಗಿ ನಾಲ್ಕನೇ ಬಾರಿಗೆ ಮಕ್ಕಳ ದಸರಾ ಆಚರಣೆಯಲ್ಲಿ ಪಾಲ್ಗೊಳ್ಳುತ್ತಿರುವುದು ನನಗೆ ತುಂಬಾ ಸಂತೋಷ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಮಕ್ಕಳ ಸೇವೆ ಮಾಡಲು ಹಾಗೂ ಇಲಾಖೆಯಲ್ಲಿ ನನಗೆ ಸಂಪೂರ್ಣ ಅಧಿಕಾರ ನೀಡಿರುವುದಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ನಮ್ಮ ಸರ್ಕಾರದಿಂದ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ, ಗೌರವಿಸುವ ಕೆಲಸ ಮಾಡಲಾಗುತ್ತಿದೆ. ಇದರಿಂದ ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಯಲು ಸಾಧ್ಯ, ಮಕ್ಕಳೇ ನನಗೆ ಮೊದಲ ದೇವರು, ಜನರಿಗೆ ಬರಗಾಲವನ್ನು ಎದುರಿಸುವ ಶಕ್ತಿಯನ್ನು ತಾಯಿ ಚಾಮುಂಡೇಶ್ವರಿ ನೀಡಲಿ ಎಂದು ಪ್ರಾರ್ಥಿಸಿದರು.
ಸಾಧನೆಗೈದ ಮಕ್ಕಳಿಗೆ ಸಚಿವರಿಂದ ಸನ್ಮಾನ: ಧಾರಾವಾಹಿಯಲ್ಲಿ ಕಲಾವಿದೆ ಬೆಂಗಳೂರಿನ ಕು. ಟಿ.ಬಿ ರಚನಾ, ಕ್ರೀಡಾಪಟು ಮೈಸೂರಿನ ಮೇದಿನಿ ಗ್ರಾಮದ ತನುಶ್ರೀ ಹಾಗೂ ವಿಶೇಷ ಚೇತನ ಕ್ರೀಡಾಪಟು ಧಾರವಾಡದ ವಿನಾಯಕ ಹಳ್ಳಿಕೇರಿ ಅವರಿಗೆ ಸಚಿವ ಮಧು ಬಂಗಾರಪ್ಪ ಅವರು ಸನ್ಮಾನಿಸಿದರು.
ಕು.ರಚನಾರಿಂದ ನೃತ್ಯ ಪ್ರದರ್ಶನ: ಬೆಂಗಳೂರಿನ ಮೂಲದ ಧಾರಾವಾಹಿ ಕಲಾವಿದೆ ಕು.ಟಿ.ಬಿ ರಚನಾ, ಅವರು ಓಂ ನಮಃ ಶಿವಾಯ… ಓಂ ನಮಃ ಶಿವಾಯ… ಹರಹರ ಶಂಭೊ… ಶಿವ ಶಂಭೊ… ಸ್ವಯಂಭೊ… ಹಾಗೂ ನಗರವಿ ಶಾರದ ನಟರಾಜು ಬಂದನು… ಹಾಡುಗಳಿಗೆ ನೃತ್ಯ ಮಾಡಿ ಸಭಿಕರನ್ನು ರಂಜಿಸಿದರು.
ಕಲಾಥಾನ್ ಮೆರವಣಿಗೆ : ವಿವಿಧ ವೇಷಭೂಷಣ ಕಲಾಪ್ರಕಾರಗಳೊಂದಿಗೆ 1000 ಮಕ್ಕಳೊಂದಿಗೆ ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಡಿ.ದೇವರಾಜು ಅರಸು ರಸ್ತೆ ಮಾರ್ಗವಾಗಿ ಕಲಾಮಂದಿರದವರೆಗೆ ಕಲಾಥಾನ್ ಮೆರವಣಿಗೆ ನಡೆಯಿತು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿ ಉಪ ವಿಶೇಷಾಧಿಕಾರಿ ಹಾಗೂ ಉಪ ಕಾರ್ಯದರ್ಶಿ(ಆಡಳಿತ) ಬಿ.ಎನ್.ಸವಿತಾ, ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅರುಣ್ ಕುಮಾರ್, ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿ ಅಧ್ಯಕ್ಷೆ ಚೂಡಾಮಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕ ಆರ್.ನಾಗರಾಜು, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಡಿ.ಉದಯ ಕುಮಾರ್ ಸೇರಿದಂತೆ ಇತರರು ಇದ್ದರು.
1,225 KPS schools, start, state, June, Education Minister, Madhu Bangarappa, Mysore






