Monday, September 7, 2026

BDA Apartments

Home Front Page ಕಸ್ತೂರಿ ರಂಗನ್ ವರದಿ: ಮಲೆನಾಡಿನ ಜನರ ಬದುಕಿಗೆ ಧಕ್ಕೆ ತರುವ ಯಾವುದೇ ಕ್ರಮಕ್ಕೆ ಅವಕಾಶವಿಲ್ಲ: ಸಚಿವ...

ಕಸ್ತೂರಿ ರಂಗನ್ ವರದಿ: ಮಲೆನಾಡಿನ ಜನರ ಬದುಕಿಗೆ ಧಕ್ಕೆ ತರುವ ಯಾವುದೇ ಕ್ರಮಕ್ಕೆ ಅವಕಾಶವಿಲ್ಲ: ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ, ಸೆಪ್ಟಂಬರ್,7,2026 (www.justkannada.in): ಕಸ್ತೂರಿ ರಂಗನ್ ವರದಿ ಜಾರಿ ವಿಚಾರದಲ್ಲಿ ರಾಜ್ಯದ ಬಿಜೆಪಿ ನಾಯಕರು ಇಂದು ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಿದ್ದಾರೆ. ಮಲೆನಾಡಿನ ರೈತರ ಪರವಾಗಿ ನಾವಿದ್ದೇವೆ ಎಂದು ಹೇಳುತ್ತಿದ್ದಾರೆ. ಹಾಗಾದರೆ ಕೇಂದ್ರ ಸರ್ಕಾರ ಒಂದರ ನಂತರ ಒಂದರಂತೆ ಈ ವರದಿಯ ಜಾರಿಗೆ ಸಂಬಂಧಿಸಿದ ಕರಡು ಅಧಿಸೂಚನೆ ಹೊರಡಿಸುತ್ತಿರುವುದಾದರೂ ಏಕೆ? ಈ ವಿಷಯದಲ್ಲಿ ಅವರ ಪಕ್ಷವೇ ಕೇಂದ್ರದಲ್ಲಿ ಅಧಿಕಾರದಲ್ಲಿರುವುದರಿಂದ ಕೇಂದ್ರ ಸರ್ಕಾರದ ನಿಲುವೇನು ಎಂದು ಮೊದಲು ಸ್ಪಷ್ಟಪಡಿಸಲಿ ಎಂದು  ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಸವಾಲೊಡ್ಡಿದ್ದಾರೆ.

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ ಅವರು, ಪಶ್ಚಿಮ ಘಟ್ಟ ನಮ್ಮ ಹೆಮ್ಮೆ. ನಮ್ಮ ಸಂಪತ್ತು. ಅದನ್ನು ರಕ್ಷಿಸಬೇಕೆಂಬುದರಲ್ಲಿ ಎರಡನೇ  ಮಾತಿಲ್ಲ. ಆದರೆ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಪರಿಸರದೊಂದಿಗೆ ಬದುಕುತ್ತಿರುವ ಮಲೆನಾಡಿನ ಜನರನ್ನೇ ಸಂಕಷ್ಟಕ್ಕೆ ಸಿಲುಕಿಸುವ ಯಾವುದೇ ಕ್ರಮವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಬಿಜೆಪಿ ನಾಯಕರು ನಾವು ಮಲೆನಾಡಿನ ರೈತರ ಪರವಾಗಿ ಮಾತನಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಕಸ್ತೂರಿ ರಂಗನ್‌ ವರದಿ ವಿರೋಧಿಸಿ ಪಾದಯಾತ್ರೆ, ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಈ ವರದಿಯ ಜಾರಿಗೆ ನೀವು ಏಕೆ ಕರಡು ಅಧಿಸೂಚನೆ ಹೊರಡಿಸುತ್ತಿದ್ದೀರಿ ಎಂದು ಪಕ್ಷದ ಕೇಂದ್ರ ನಾಯಕರನ್ನು ಪ್ರಶ್ನಿಸುವ ಧೈರ್ಯ ಅವರಿಗಿಲ್ಲ ಎಂದು ಶ್ರೀ ಮಧು ಬಂಗಾರಪ್ಪ ಹೇಳಿದರು.

2014ರ ಆಗಸ್ಟ್ 27ರಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ  ಕಸ್ತೂರಿ ರಂಗನ್‌  ವರದಿಯನ್ನು ಜಾರಿಗೆ ತರುತ್ತೇವೆ ಎಂದು ಸುಪ್ರೀಂ ಕೋರ್ಟ್‌ ನ  ಹಸಿರು ನ್ಯಾಯಾಧಿಕರಣಕ್ಕೆ ಅಫಿಡವಿಟ್ ಸಲ್ಲಿಸಿದ್ದು ಏಕೆ? ಇಂದು ಮಲೆನಾಡಿನ ಜನರ ಮುಂದೆ ಮೊಸಳೆ ಕಣ್ಣೀರು ಹಾಕುವವರು ಅಂದು ಏಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದ ಮಧು ಬಂಗಾರಪ್ಪ, ಕಸ್ತೂರಿ ರಂಗನ್ ವರದಿಯ ಕರಡು ಅಧಿಸೂಚನೆಯನ್ನು ನಾವು ಆರು ಬಾರಿಯೂ ಸ್ಪಷ್ಟವಾಗಿ ತಿರಸ್ಕರಿಸಿದ್ದೇವೆ. ರಾಜ್ಯ ವಿಧಾನಸಭೆಯಲ್ಲಿಯೂ ವರದಿಯನ್ನು ತಿರಸ್ಕರಿಸುವ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಹೀಗಿದ್ದರೂ ಕೇಂದ್ರದ ಬಿಜೆಪಿ ಸರ್ಕಾರ ಮತ್ತೆ ಮತ್ತೆ ಕರಡು ಅಧಿಸೂಚನೆಗಳನ್ನು ಹೊರಡಿಸುತ್ತಿದೆ. ಇದೀಗ ಏಳನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿರುವುದು ಯಾವ ನ್ಯಾಯ ಎಂದು ಮಧು ಬಂಗಾರಪ್ಪ ಕೇಳಿದರು.

ಕೇಂದ್ರ ಸರ್ಕಾರದ ಈ ಕ್ರಮವನ್ನು ರಾಜ್ಯ ಸರ್ಕಾರ ಸ್ಪಷ್ಟವಾಗಿ ವಿರೋಧಿಸಿದೆ. ಈ ಸಂಬಂಧ ಚರ್ಚಿಸಲೆಂದೇ ವಿಶೇಷ ಅಧಿವೇಶನ ಕರೆಯುವ ತೀರ್ಮಾನವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತೆಗೆದುಕೊಂಡಿದ್ದಾರೆ. ಯಾವ ಕಾರಣಕ್ಕೂ ಈ ವರದಿ ಜಾರಿಗೆ ಅವಕಾಶ ನೀಡಬಾರದು, ಬಿಜೆಪಿಯವರು, ಕೇಂದ್ರ ಸರ್ಕಾರದವರು ಏನು ಬೇಕಾದರೂ ಮಾಡಿಕೊಳ್ಳಲಿ, ಇದಕ್ಕೆ ನಾವೇ ಬೇಕಾದರೂ ನ್ಯಾಯಾಲಯಕ್ಕೆ ಹೋಗಿ ಮಲೆನಾಡಿನ ಜನರನ್ನು ರಕ್ಷಿಸೋಣ ಎಂದು ಅವರು ಹೇಳಿದ್ದಾರೆ ಎಂದರು

ಸಂಸದರು ಏನು ಮಾಡುತ್ತಿದ್ದರು?

ಕಸ್ತೂರಿ ರಂಗನ್ ವರದಿ ಕುರಿತು 2016ರ ಆಗಸ್ಟ್ 11ರಂದು ಕೇಂದ್ರ ಸರ್ಕಾರ ಕರೆದಿದ್ದ ಮಹತ್ವದ ಸಭೆಗೆ ಶಿವಮೊಗ್ಗದ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಅಂದಿನ ಉಡುಪಿ-ಚಿಕ್ಕಮಗಳೂರು ಸಂಸದೆಯಾಗಿದ್ದ ಶೋಭಾ ಕರಂದ್ಲಾಜೆ ಅವರು ಭಾಗವಹಿಸದೇ ಇದ್ದಿದ್ದನ್ನು ಮಧು ಬಂಗಾರಪ್ಪ ಪ್ರಶ್ನಿಸಿದರು.

ಮಲೆನಾಡಿನ ಎರಡು ಪ್ರಮುಖ ಜಿಲ್ಲೆಗಳ ಜನರ ಬದುಕಿನ ಮೇಲೆ ಪರಿಣಾಮ ಬೀರುವ ಇಂತಹ ಮಹತ್ವದ ವಿಚಾರದ ಸಭೆಗೆ ಸಂಸದರು ಹಾಜರಾಗದೇ ಇದ್ದರೆ ಹೇಗೆ?  ಅವರಿಗೆ ಅಂದು ಬೇರೆ ಮಹತ್ವದ ಕೆಲಸ ಏನಿತ್ತು? ಇವರು ಸಭೆಗೆ ಹೋಗದೆ ಬೇಜವಾಬ್ದಾರಿಯಿಂದ ನಡೆದುಕೊಂಡರೆ, ಮಲೆನಾಡಿನ ಜನರ ಸಮಸ್ಯೆಯನ್ನು  ಕೇಂದ್ರ ಸರ್ಕಾರದ ಗಮನಕ್ಕೆ ತರುವವರಾದರೂ ಯಾರು ಎಂದು ಕೇಳಿದರು.

ಇಂದು ರೈತರ ಪರವಾಗಿ ಡೋಂಗಿ ಮಾತನಾಡುವವರು ಅಂದು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದರೇ? ಜನರ ಸಮಸ್ಯೆ ಬಂದಾಗ ಮೌನವಾಗಿದ್ದು, ಚುನಾವಣೆ ಬಂದಾಗ ಮಾತ್ರ ರೈತರ ಪರವಾಗಿ ಮಾತನಾಡುವುದು ಸರಿಯಲ್ಲ ಎಂದು ಟೀಕಿಸಿದರು.

ಹಳ್ಳಿಗಳ ಸಂಖ್ಯೆ ಹೆಚ್ಚಾಗಿದ್ದು ಹೇಗೆ?

ಮೊದಲ ಆರು ಅಧಿಸೂಚನೆಗಳಲ್ಲಿ ತೀರ್ಥಹಳ್ಳಿ ತಾಲ್ಲೂಕಿನ 139 ಗ್ರಾಮಗಳ ಪಟ್ಟಿಯನ್ನು ಪ್ರಸ್ತಾಪಿಸಲಾಗಿತ್ತು. ಇದನ್ನು ತೀರ್ಥಹಳ್ಳಿಯ ಜನರು ಹಾಗೂ ಕರ್ನಾಟಕ ಸರ್ಕಾರ ವಿರೋಧಿಸಿತ್ತು. ಆದರೆ ಇದೀಗ ಅಂತಿಮ ಅಧಿಸೂಚನೆಯ ಹೆಸರಿನಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಗ್ರಾಮಗಳ ಸಂಖ್ಯೆಯನ್ನು 154ಕ್ಕೆ ಹೆಚ್ಚಿಸುವ ಪ್ರಯತ್ನ ನಡೆದಿದೆ. ಈ ಬಗ್ಗೆ ಸ್ಥಳೀಯ ಶಾಸಕ ಆರಗ ಜ್ಞಾನೇಂದ್ರ ಅವರು ಏನು ಹೇಳುತ್ತಾರೆ ಎಂಬ ಕುತೂಹಲವಿದೆ ಎಂದರು.

ನಮ್ಮ ಮಲೆನಾಡಿನ ನೆಲ, ಕೃಷಿ, ಬದುಕು ಮತ್ತು ನಮ್ಮ ಭವಿಷ್ಯವನ್ನು ರಕ್ಷಿಸಿಕೊಳ್ಳುವ ಸಂಕಲ್ಪಮಾಡಿ, ಕಸ್ತೂರಿ ರಂಗನ್‌ ವರದಿ ಜಾರಿಯ ವಿರುದ್ಧ ನಾವು ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದು,  ಈ ಸಂಬಂಧ ಈಗ ತೀರ್ಥಹಳ್ಳಿಯಲ್ಲಿ  ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಮಲೆನಾಡಿನ ಜನರು ಪ್ರಕೃತಿಯ ಶತ್ರುಗಳಲ್ಲ

ಪಶ್ಚಿಮ ಘಟ್ಟದಲ್ಲಿ ಸಾವಿರಾರು ವರ್ಷಗಳಿಂದ ಜನರು ಬದುಕುತ್ತಿದ್ದಾರೆ. ಅವರು ಕೃಷಿ ಮಾಡುತ್ತಿದ್ದಾರೆ. ಅಡಿಕೆ, ಭತ್ತ, ಕಾಫಿ, ಮೆಣಸು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಅವರ ಬದುಕು ಮತ್ತು ಪರಿಸರ ಪರಸ್ಪರ ವಿರೋಧಿಗಳಲ್ಲ. ಮಲೆನಾಡಿನ ಜನರು ಪ್ರಕೃತಿಯ ಶತ್ರುಗಳಲ್ಲ; ಅವರೇ ಪ್ರಕೃತಿಯೊಂದಿಗೆ ಬದುಕುತ್ತಿರುವವರು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಉಪಗ್ರಹ ಆಧಾರಿತ ನೈಸರ್ಗಿಕ ಭೂದೃಶ್ಯ ಹಾಗೂ ಸಾಂಸ್ಕೃತಿಕ ಭೂದೃಶ್ಯದ ಆಧಾರದ ಮೇಲೆ ಪ್ರದೇಶಗಳನ್ನು ಗುರುತಿಸುವಾಗ ಅಲ್ಲಿನ ಜನರ ಬದುಕು, ಕೃಷಿ ಹಾಗೂ ಜೀವನ ವಿಧಾನವನ್ನು ಸಮರ್ಪಕವಾಗಿ ಪರಿಗಣಿಸಲಾಗಿದೆಯೇ ಎಂಬ ಪ್ರಶ್ನೆ ಇದೆ. ಯಾವುದೇ ಸಮಿತಿ ಗ್ರಾಮಗಳಿಗೆ ತೆರಳಿ ಜನರ ಅಭಿಪ್ರಾಯ ಪಡೆದಿರುವ ಮಾಹಿತಿ ಇಲ್ಲ. ಕನಿಷ್ಠ ತಾಲ್ಲೂಕು ಕೇಂದ್ರಗಳಿಗೆ ಭೇಟಿ ನೀಡಿ ಸ್ಥಳೀಯ ವಾಸ್ತವಾಂಶಗಳನ್ನು ಪರಿಶೀಲಿಸಲಾಗಿದೆಯೇ ಎಂಬುದೂ ಸ್ಪಷ್ಟವಾಗಿಲ್ಲ. ಕಚೇರಿಯಲ್ಲಿ ಕುಳಿತು ನಕ್ಷೆ ನೋಡಿ ಮಲೆನಾಡಿನ ಬದುಕನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬಂಗಾರಪ್ಪ ಅವರ ಹಾದಿಯಲ್ಲಿ ಮುಖ್ಯಮಂತ್ರಿ

“ಹಿಂದೆ ನಮ್ಮ ತಂದೆ ಬಂಗಾರಪ್ಪ ಅವರು ಕಾವೇರಿ ನೀರು ವಿಚಾರವಾಗಿ ವಿಶೇಷ ಅಧಿವೇಶನ ಕರೆದಿದ್ದರು. ಇಂದು ನಾನು ಬಂಗಾರಪ್ಪ ಅವರ ಶಿಷ್ಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅವರದ್ದೇ ಹಾದಿಯಲ್ಲಿ ನಡೆದು ಕಸ್ತೂರಿ ರಂಗನ್ ವಿಚಾರವಾಗಿ ವಿಶೇಷ ಅಧಿವೇಶನ ಕರೆದಿದ್ದಾರೆ. ಇದಕ್ಕಾಗಿ ಮುಖ್ಯಮಂತ್ರಿಗಳಿಗೆ ಧನ್ಯವಾದ ತಿಳಿಸುತ್ತೇನೆ” ಎಂದರು.

ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಕೆಲಸ ಮಾಡಿದ್ದು ನನ್ನ ಭಾಗ್ಯ. ನಮ್ಮ ತಂದೆಯವರ ಕೈಯಲ್ಲಿ ಸಚಿವರಾಗಿ ಡಿ.ಕೆ. ಶಿವಕುಮಾರ್ ಅವರು ಕೆಲಸ ಮಾಡಿದ್ದರು. ಇಂದು ನಾನು ಡಿ.ಕೆ. ಶಿವಕುಮಾರ್ ಅವರ ಅಡಿಯಲ್ಲಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಮಧು ಬಂಗಾರಪ್ಪ ಹೇಳಿದರು.

ಶಿಕಾರಿಪುರದಲ್ಲಿ ನಾಳೆ ಜಿಲ್ಲಾಮಟ್ಟದ ಪ್ರಜಾಸೇವೆ ಕಾರ್ಯಕ್ರಮ

ಸರ್ಕಾರದ ವಿವಿಧ ಸೇವೆಗಳು ಹಾಗೂ ಸೌಲಭ್ಯಗಳು ಜನರ ಮನೆ ಬಾಗಿಲಿಗೇ ತಲುಪುವಂತೆ ಮಾಡುವ ಉದ್ದೇಶದಿಂದ ನೂತನವಾಗಿ ಪ್ರಜಾಸೇವೆ ಇಲಾಖೆಯನ್ನು ರೂಪಿಸಲಾಗಿದ್ದು, ಆಡಳಿತವನ್ನು ಜನಸ್ನೇಹಿ, ಪಾರದರ್ಶಕ ಹಾಗೂ ಉತ್ತರದಾಯಿತ್ವಯುತವಾಗಿಸುವುದು ಇಲಾಖೆಯ ಪ್ರಮುಖ ಗುರಿಯಾಗಿದೆ ಸಚಿವ ಮಧು ಬಂಗಾರಪ್ಪ ಹೇಳಿದರು.

ಸರ್ಕಾರಿ ಕಚೇರಿಗಳಿಗೆ ಜನರು ಪದೇಪದೇ ಅಲೆದಾಡುವ ಪರಿಸ್ಥಿತಿಯನ್ನು ಕಡಿಮೆ ಮಾಡುವುದು, ವಿವಿಧ ಸರ್ಕಾರಿ ಸೇವೆಗಳನ್ನು ಸುಲಭವಾಗಿ ಹಾಗೂ ತ್ವರಿತವಾಗಿ ಜನರಿಗೆ ಒದಗಿಸುವುದು ಪ್ರಜಾಸೇವೆ ಇಲಾಖೆಯ ಪ್ರಮುಖ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.

ಶಿಕಾರಿಪುರದಲ್ಲಿ ಜಿಲ್ಲಾಮಟ್ಟದ ಪ್ರಜಾಸೇವೆ ಕಾರ್ಯಕ್ರಮ ಆಯೋಜಿಸಿರುವುದೇಕೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, “ಶಿವಮೊಗ್ಗ ಜಿಲ್ಲೆಯಲ್ಲಿ ಸೂರ್ಯ ಮೊದಲು ಕಾಣಿಸಿಕೊಳ್ಳುವುದು ಶಿಕಾರಿಪುರದಲ್ಲಿ. ಹೀಗಾಗಿ ಇಲ್ಲಿಂದಲೇ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದೇವೆ,” ಎಂದು ಮಾರ್ಮಿಕವಾಗಿ ಹೇಳಿದರು.

ಸೆಪ್ಟೆಂಬರ್ 5ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡ್ಲಿಗಿಯಲ್ಲಿ ರಾಜ್ಯಮಟ್ಟದ ಪ್ರಜಾಸೇವೆ ಕಾರ್ಯಕ್ರಮ ನಡೆಸಿದ್ದರು. ಅದೇ ದಿನ ಶಿಕ್ಷಕರ ದಿನಾಚರಣೆ ಇದ್ದ ಹಿನ್ನೆಲೆಯಲ್ಲಿ ತಮ್ಮ ಇಲಾಖೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಶಿಕಾರಿಪುರದಲ್ಲಿ ಜಿಲ್ಲಾಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಶಿಕ್ಷಕರು ‘Tr.’ ಬಳಸುವುದಕ್ಕೆ ಟೀಕೆ ಸರಿಯಲ್ಲ

ರಾಜ್ಯದ ಎಲ್ಲಾ ಶಿಕ್ಷಕರು ತಮ್ಮ ಹೆಸರಿನ ಹಿಂದೆ ಹೆಮ್ಮೆಯಿಂದ ‘Tr.’ (Teacher) ಎಂಬ ಪೂರ್ವಪ್ರತ್ಯಯವನ್ನು ಬಳಸಲು ಅಧಿಕೃತವಾಗಿ ಅನುಮತಿ ನೀಡಲಾಗಿದೆ. ಶಿಕ್ಷಕರಿಗೆ ಗೌರವ ಸೂಚಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಇದನ್ನು ಟೀಕಿಸುವುದು ಸರಿಯಲ್ಲ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಇಲಾಖೆ ಈ ಗೌರವ ನೀಡುವ ಸಂಬಂಧ ಈಗಾಗಲೇ ಆದೇಶ ಹೊರಡಿಸಿದೆ. ಪ್ರೊಫೆಸರ್‌ ಗಳಿಗೆ ಗೌರವ ಇದೆ. ಜ್ಞಾನವನ್ನು ಧಾರೆ ಎರೆಯುವ ಶಿಕ್ಷಕರಿಗೂ ನಾವು ಈ ಗೌರವ ನೀಡಬೇಕೆಂದು ಈ ತೀರ್ಮಾನ ತೆಗೆದುಕೊಂಡಿದ್ದೇವೆ. ಇದನ್ನು ಸಕಾರಾತ್ಮಕವಾಗಿ ನೋಡಬೇಕು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದ ಆಯನೂರು ಮಂಜುನಾಥ್, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ರಮೇಶ್ ಶೆಟ್ಟಿ, ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ ಗೌಡ, ಭೋವಿ ನಿಗಮದ ಮಾಜಿ ಅಧ್ಯಕ್ಷರಾದ ಎನ್.ರವಿಕುಮಾರ್, ಶಿವಮೊಗ್ಗ ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಹೆಚ್.ಸಿ ಯೋಗೇಶ್, ಶಿವಮೊಗ್ಗ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಮ್ ಪಾಷಾ, ಹಿಂದುಳಿದ ವರ್ಗಗಳ ರಾಜ್ಯ ಸಂಯೋಜಕ ಜಿ.ಡಿ ಮಂಜುನಾಥ್ ಹಾಜರಿದ್ದರು

Key words: Kasturi Rangan, report, Minister, Madhu Bangarappa