Saturday, August 29, 2026

BDA Apartments

Home Front Page ಬಿ.ನಾಗೇಂದ್ರ ರಾಜೀನಾಮೆ ವೇಳೆ ಸುರಿಸಿದ ಕಣ್ಣೀರು ಬಿಜೆಪಿಯನ್ನು ನಾಶ ಮಾಡಲಿದೆ-ಸಚಿವ ಮಧು ಬಂಗಾರಪ್ಪ

ಬಿ.ನಾಗೇಂದ್ರ ರಾಜೀನಾಮೆ ವೇಳೆ ಸುರಿಸಿದ ಕಣ್ಣೀರು ಬಿಜೆಪಿಯನ್ನು ನಾಶ ಮಾಡಲಿದೆ-ಸಚಿವ ಮಧು ಬಂಗಾರಪ್ಪ

ಬೆಂಗಳೂರು, ಆಗಸ್ಟ್,29,2026 (www.justkannada.in): ಅನಗತ್ಯ ಆರೋಪದ ಕಾರಣದಿಂದ ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂದರ್ಭದಲ್ಲಿ ಹಾಕಿದ ಕಣ್ಣೀರು ರಾಜ್ಯದಲ್ಲಿ ಬಿಜೆಪಿಯನ್ನು ನಾಶ ಮಾಡಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಬೆಂಗಳೂರಿನ ಗೃಹ ಕಚೇರಿಯಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಚಿವ ಮಧು ಬಂಗಾರಪ್ಪ ಅವರು, “ವಾಲ್ಮೀಕಿ ಅಭಿವೃದ್ಧಿ ನಿಗಮದ ವಿಚಾರದಲ್ಲಿ ಪ್ರತಿಪಕ್ಷ ಬಿಜೆಪಿ ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡುತ್ತಿದ್ದು, ದಲಿತ ಹಾಗೂ ಪರಿಶಿಷ್ಟ ಜಾತಿಯ ನಾಯಕ, ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಬಿ. ನಾಗೇಂದ್ರ ಅವರ ವಿರುದ್ಧ ರಾಜಕೀಯ ದುರುದ್ದೇಶದಿಂದ ಆರೋಪಗಳನ್ನು ಮಾಡಲಾಗುತ್ತಿದೆ. ಇದಕ್ಕೆ ಬಿಜೆಪಿ ತಕ್ಕೆ ಬೆಲೆಯನ್ನು ತೆರಬೇಕಾಗುತ್ತದೆ” ಎಂದು ಎಚ್ಚರಿಸಿದರು.

“ರಾಜಕಾರಣದಲ್ಲಿ ನಾಗೇಂದ್ರ ಅವರು ನನಗಿಂತ ಹಿರಿಯರು. ದಲಿತ ಮತ್ತು ಪರಿಶಿಷ್ಟ ಜಾತಿಯ ನಾಯಕರು ರಾಜಕೀಯವಾಗಿ ಬೆಳೆಯುತ್ತಿರುವುದು ಬಿಜೆಪಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸತ್ಯಕ್ಕೆ ದೂರವಾದ ಆರೋಪಗಳನ್ನು ಅವರ ಮೇಲೆ ಮಾಡಲಾಗುತ್ತಿದೆ” ಎಂದು ಆರೋಪಿಸಿದರು.

“ನಾಗೇಂದ್ರ ಅವರು ನಿರಪರಾಧಿ. ತನಿಖಾ ವರದಿಗಳನ್ನು ಪರಿಶೀಲಿಸಿ, ಚರ್ಚಿಸಿದ ಬಳಿಕ ಅವರ ಮೇಲಿನ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂಬುದು ನಮಗೆ ತಿಳಿದಿದೆ. ನಾಲ್ಕು ಬಾರಿ ಗೆದ್ದಿರುವ ಒಬ್ಬ ದಲಿತ ನಾಯಕನ ವಿರುದ್ಧ ಬಿಜೆಪಿ ನಡೆದುಕೊಂಡ ರೀತಿ ನಾಗೇಂದ್ರ ಅವರಿಗೆ ಮಾತ್ರವಲ್ಲ, ತಳ ಸಮುದಾಯಗಳಿಗೂ ನೋವುಂಟು ಮಾಡಿದೆ” ಎಂದರು.

ಆರ್.ಅಶೋಕ್ ಸಿಬಿಐ ಅಧಿಕಾರಿಯೇ?

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ನಾಗೇಂದ್ರ ವಿಚಾರದಲ್ಲಿ ಮಾಡುತ್ತಿರುವ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, “ಆರ್.ಅಶೋಕ್ ಅವರು ನಾಗೇಂದ್ರ ವಿಚಾರದಲ್ಲಿ ವಾದ ಮಾಡಲು ಸಿಬಿಐ ಅಧಿಕಾರಿಯೇ? ತನಿಖಾ ಸಂಸ್ಥೆಗಳು ತಮ್ಮ ಕೆಲಸ ಮಾಡುತ್ತವೆ. ಮುಂದೊಂದು ದಿನ ಅಶೋಕ್‌ ಅವರ ಬುಡಕ್ಕೂ ಯಾವುದಾದರೂ ವಿಷಯ ಬಂದಾಗ ಬಿಜೆಪಿಯ ಬಣ್ಣ ಏನೆಂಬುದು ಅವರಿಗೆ ತಿಳಿಯುತ್ತದೆ” ಎಂದು ತಿರುಗೇಟು ನೀಡಿದರು.

ನಾಗೇಂದ್ರ ಅವರ ರಾಜೀನಾಮೆ ವಿಚಾರದಲ್ಲಿ ಬಿಜೆಪಿ ನಾಯಕರು ಸಂಭ್ರಮಿಸುತ್ತಿರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. “ಇವರಷ್ಟು ಸಾಚಾಗಳು ಬೇರೆ ಯಾರೂ ಇಲ್ಲ ಎಂಬ ರೀತಿಯಲ್ಲಿ ಬಿಜೆಪಿ ನಾಯಕರು ವರ್ತಿಸುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ನಕಲಿ ಸಹಿ ವಿಚಾರವನ್ನು ಮರೆತಿದ್ದಾರೆಯೇ?” ಎಂದು ಪ್ರಶ್ನಿಸಿದರು.

ಮೊದಲು ಕುಮಾರಸ್ವಾಮಿ ವಿರುದ್ಧ ಪಾದಯಾತ್ರೆ ಮಾಡಲಿ

ಬಿಜೆಪಿ-ಜೆಡಿಎಸ್ ಪಾದಯಾತ್ರೆ ವಿಚಾರವಾಗಿಯೂ ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿ, “ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ ಗೆ ಅನುಮತಿ ಕೋರಿ ಮೂರು ವರ್ಷಗಳಾದರೂ ರಾಜ್ಯಪಾಲರು ಅನುಮತಿ ನೀಡಿಲ್ಲ. ಈಗ ಅವರು ನಿಮ್ಮ ಜೊತೆ ಮೈತ್ರಿಯಲ್ಲಿದ್ದಾರೆ ಎಂಬ ಕಾರಣಕ್ಕೆ ಅವರಿಗೆ ವಿನಾಯಿತಿಯೇ? ಅವರಿಗೆ ಒಂದು ನ್ಯಾಯ, ನಮಗೆ ಒಂದು ನ್ಯಾಯವೇ? ಮೊದಲು ಬಿಜೆಪಿ-ಜೆಡಿಎಸ್ ನಾಯಕರು ಕುಮಾರಸ್ವಾಮಿ ವಿರುದ್ಧ ಪಾದಯಾತ್ರೆ ಮಾಡಲಿ” ಎಂದು ವ್ಯಂಗ್ಯವಾಡಿದರು.

ಸದನದಲ್ಲಿ ಚರ್ಚೆಗೆ ಅವಕಾಶವಿದ್ದರೂ ವಿಪಕ್ಷಗಳು ಅಡ್ಡಿಪಡಿಸಿದವು

ಮುಂಗಾರು ಅಧಿವೇಶನದಲ್ಲಿ ನಾಗೇಂದ್ರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ನೋಟಿಸ್ ನೀಡಿದ್ದರೆ ಸರ್ಕಾರ ಚರ್ಚೆಗೆ ಸಿದ್ಧವಿತ್ತು. ಆದರೆ, ಸೂಕ್ತ ಚರ್ಚೆಗೆ ಬಾರದೆ ಕೇವಲ ರಾಜಕೀಯ ದುರುದ್ದೇಶದಿಂದ ಸದನದ ಕಲಾಪಕ್ಕೆ ಅಡ್ಡಿಪಡಿಸಲಾಗಿದೆ ಎಂದು ಮಧು ಬಂಗಾರಪ್ಪ ಆರೋಪಿಸಿದರು.

“ನೋಟಿಸ್ ನೀಡಿ, ಸೂಕ್ತ ಚರ್ಚೆ ನಡೆಸಿ ಎಂದು ಸರ್ಕಾರವೇ ಆಹ್ವಾನ ನೀಡಿತ್ತು. ಆದರೆ ವಿಪಕ್ಷಗಳು ಚರ್ಚೆಗೆ ಬರದೆ ಸದನದ ಸಮಯವನ್ನು ಹಾಳು ಮಾಡಿದರು. ಬರಗಾಲ, ಕಾವೇರಿ ನೀರಿನ ಸಮಸ್ಯೆ, ಕಸ್ತೂರಿ ರಂಗನ್ ವರದಿ ಸೇರಿದಂತೆ ರಾಜ್ಯದ ಹಲವಾರು ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅವಕಾಶವಿತ್ತು. ಆದರೆ ಇಲ್ಲದ ವಿಷಯವನ್ನು ಮುಂದಿಟ್ಟುಕೊಂಡು ಸದನದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದರು” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

Key words:  tears, B. Nagendra, resignation, destroy, BJP, Minister, Madhu Bangarappa