ಕೈಗಾರಿಕಾ ಬಾಂಧವ್ಯ ವೃದ್ಧಿಗೆ 2026ರಲ್ಲಿ ಸಿಂಗಾಪುರ ಭೇಟಿ- ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ನವೆಂಬರ್,12,2025 (www.justkannada.in): ಆಸಿಯಾನ್ ರಾಷ್ಟ್ರಗಳ ಪೈಕಿ ಭಾರತದಲ್ಲಿ ಅತ್ಯಧಿಕ ವಿದೇಶಿ ನೇರ ಹೂಡಿಕೆ ಮಾಡುತ್ತಿರುವ ಸಿಂಗಪುರ ಜತೆ ಕೈಗಾರಿಕಾ ಮತ್ತು ವಾಣಿಜ್ಯ ಸಹಭಾಗಿತ್ವ ಬೆಳೆಸಿಕೊಳ್ಳಲು ರಾಜ್ಯದ ಪಾಲಿಗೆ ಒಳ್ಳೆಯ ಅವಕಾಶಗಳಿವೆ. ಇದನ್ನು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ 2026ರ ಪ್ರಥಮಾರ್ಧದಲ್ಲಿ ಆ ದೇಶಕ್ಕೆ ಭೇಟಿ ಕೊಡಲಾಗುವುದು. ಅದಕ್ಕೂ ಮುನ್ನ ದ್ವಿಪಕ್ಷೀಯ ಕೈಗಾರಿಕಾ ಬಾಂಧವ್ಯ ವರ್ಧನೆ ಕುರಿತು ಅಧಿಕಾರಿಗಳ ಮಟ್ಟದಲ್ಲಿ ವಿಚಾರ ವಿನಿಮಯ ನಡೆಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.

ಇಂದು ತಮ್ಮನ್ನು ಖನಿಜ ಭವನದಲ್ಲಿ ಭೇಟಿಯಾದ ಸಿಂಗಪುರದ ವಿದೇಶಾಂಗ, ವಾಣಿಜ್ಯ ಮತ್ತು ಕೈಗಾರಿಕಾ ಖಾತೆಗಳ ಸಹಾಯಕ ಸಚಿವೆ ಗಾನ್ ಸಿಯೋವೋ ಹುವಾಂಗ್ ಜೊತೆ ಬಂಡವಾಳ ಹೂಡಿಕೆ ಮತ್ತು ಸಹಭಾಗಿತ್ವ ಕುರಿತು ಸಚಿವ ಎಂ.ಬಿ ಪಾಟೀಲ್ ಅವರು ಮಾತುಕತೆ ನಡೆಸಿದರು. ಸಿಂಗಾಪುರ್ ಸರಕಾರವು ಇಲ್ಲಿ ಹೊಸದಾಗಿ ನಿರ್ಮಿಸಿರುವ `ಎಂಟರಪ್ರೈಸ್ ಸಿಂಗಾಪುರ್’ ಕೇಂದ್ರದ ಉದ್ಘಾಟನೆಗಾಗಿ ಗಾನ್ ಅವರು ಬೆಂಗಳೂರಿಗೆ ಆಗಮಿಸಿದ್ದರು. ಇವರು, ಸಿಂಗಪುರದ ವಾಯುಪಡೆಯ ಮುಖ್ಯಸ್ಥರಾಗಿ (ಬ್ರಿಗೇಡಿಯರ್) ಸೇವೆ ಸಲ್ಲಿಸಿದ ಹೆಗ್ಗಳಿಕೆ ಹೊಂದಿದ್ದಾರೆ.

ಈ ಬಗ್ಗೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, `ನಮ್ಮಿಂದ ಸಿಂಗಾಪುರದ ಕಂಪನಿಗಳಿಗೆ ಏನೇನಾಗಬೇಕು ಮತ್ತು ಆ ದೇಶದಲ್ಲಿರುವ ನಮ್ಮಲ್ಲಿನ ಕಂಪನಿಗಳಿಗೆ ಅಲ್ಲಿಯ ಸರಕಾರದ ಮಟ್ಟದಲ್ಲಿ ಯಾವ ಕೆಲಸಗಳಾಗಬೇಕು ಎನ್ನುವುದನ್ನು ಚರ್ಚಿಸಲಾಯಿತು.  ವೈಮಾನಿಕ ಕ್ಷೇತ್ರದಲ್ಲಿ ಪ್ರಮುಖವಾಗಿರುವ ಎಂ.ಆರ್.ಒ. ವಲಯದಲ್ಲಿ ಸಿಂಗಪುರ್ ಹೆಸರುವಾಸಿಯಾಗಿದೆ. ಈ ಕ್ಷೇತ್ರದಲ್ಲಿ ರಾಜ್ಯಕ್ಕೆ ಸಹಾಯ ಮಾಡುವ ಭರವಸೆಯನ್ನು ಗಾನ್ ಅವರು ನೀಡಿದ್ದಾರೆ’ ಎಂದಿದ್ದಾರೆ.

ಮಾಹಿತಿ ತಂತ್ರಜ್ಞಾನ, ಸೆಮಿಕಂಡಕ್ಟರ್, ಫಿನ್-ಟೆಕ್, ಚಿಪ್ ವಿನ್ಯಾಸ, ಔಷಧ ತಯಾರಿಕೆ ಮುಂತಾದ ಕ್ಷೇತ್ರಗಳಲ್ಲಿ ಕೂಡ ರಾಜ್ಯದಲ್ಲಿ ಹೂಡಿಕೆಗೆ ಅತ್ಯುತ್ತಮ ಅವಕಾಶಗಳಿವೆ ಎನ್ನುವ ಸಂಗತಿಯನ್ನು ಅವರಿಗೆ ಮನದಟ್ಟು ಮಾಡಿಕೊಡಲಾಗಿದೆ. ಈಗ ಆರಂಭದಲ್ಲಿ ಅಧಿಕಾರಿಗಳ ಮಟ್ಟದಲ್ಲಿ ಸಭೆಗಳು ನಡೆದು, ಎರಡೂ ಕಡೆಗಳಿಗೂ ಉಪಯೋಗವಾಗಬೇಕೆಂಬ ದೃಷ್ಟಿಯಿಂದ ಒಂದು ಭೂಮಿಕೆ ನಿರ್ಮಿಸಲಾಗುವುದು ಎಂದು ಸಚಿವ ಎಂ.ಬಿ ಪಾಟೀಲ್ ಅವರು ತಿಳಿಸಿದ್ದಾರೆ.

ಬೆಂಗಳೂರು ಮತ್ತು ಸಿಂಗಾಪುರ ನಡುವೆ ಅನೇಕ ವಿಷಯಗಳಲ್ಲಿ ಸಾಮ್ಯತೆ ಇದೆ. ಎರಡೂ ನಗರಗಳು ವಿಶ್ವದರ್ಜೆಯ ನಗರಗಳು. ಹೀಗಾಗಿ ಪರಸ್ಪರ ಸಹಭಾಗಿತ್ವದ ಸಮನ್ವಯಕ್ಕೆ ಒತ್ತು ನೀಡಲಾಗುವುದು ಎಂದು ಪಾಟೀಲ ಅವರು ಹೇಳಿದರು.

2020ರಿಂದ ಇಲ್ಲಿಯವರೆಗೆ ಸಿಂಗಾಪುರದ ಕಂಪನಿಗಳು ಭಾರತದಲ್ಲಿ 174.88 ಬಿಲಿಯನ್ ಡಾಲರ್ ಹೂಡಿಕೆ ಮಾಡಿವೆ. ಇದು ದೇಶಕ್ಕೆ ಹರಿದು ಬಂದಿರುವ ಒಟ್ಟು ವಿದೇಶಿ ನೇರ ಹೂಡಿಕೆಯಲ್ಲಿ ಶೇ.24ರಷ್ಟಿದೆ. ಆ ದೇಶದಲ್ಲಿ 9 ಸಾವಿರಕ್ಕೂ ಹೆಚ್ಚು ಭಾರತೀಯ ಕಂಪನಿಗಳಿದ್ದು, ಸಿಂಗಪುರದ 440 ಕಂಪನಿಗಳು ಭಾರತದಲ್ಲಿ ಸಕ್ರಿಯವಾಗಿವೆ ಎಂದು ಸಚಿವ ಎಂ.ಬಿ ಪಾಟೀಲ್ ಅವರು ನುಡಿದಿದ್ದಾರೆ.

ಆಸ್ಟ್ರೇಲಿಯಾ ಕಾನ್ಸುಲ್ ಜನರಲ್ ಭೇಟಿ

ರಾಜ್ಯದಲ್ಲಿ ಶಿಕ್ಷಣ, ಬಾಹ್ಯಾಕಾಶ, ಜೈವಿಕ ತಂತ್ರಜ್ಞಾನ, ಆಧುನಿಕ ತಯಾರಿಕೆ, ವೈಮಾಂತರಿಕ್ಷ, ರಕ್ಷಣೆ, ಪರಿಸರಸ್ನೇಹಿ ಮತ್ತು ಮರುಬಳಕೆ ಇಂಧನ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಸಂಬಂಧ ಆಸ್ಟ್ರೇಲಿಯಾದ ಕಾನ್ಸುಲ್ ಜನರಲ್ ಹಿಲರಿ ಮೆಕ್-ಗೀಚಿ ಅವರು ಸಚಿವ ಎಂ ಬಿ ಪಾಟೀಲರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

Key words: Minister, M.B. Patil, visit, Singapore, 2026, industrial ties