ಬೆಂgಗಳೂರು ಗ್ರಾಮಾಂತರ, ಫೆಬ್ರವರಿ, 24,2026 (www.justkannada.in): ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೆರವಿನಿಂದ ಸಾಂಪ್ರದಾಯಿಕ ಕರಕುಶಲ ವಸ್ತುಗಳು ಸ್ವದೇಶಿಯಾಗಿ ತಯಾರಿಕೆಗೆ ಆದ್ಯತೆ ನೀಡಿ, ತಯಾರಿಸಿದ ಕರಕುಶಲ ವಸ್ತುಗಳ ಮಾರಾಟಕ್ಕೆ ಉತ್ತಮ ಮಾರುಕಟ್ಟೆ ಕಲ್ಪಿಸುವ ಮೂಲಕ ಇದರ ಸದುಪಯೋಗ ಎಲ್ಲ ವರ್ಗದ ಕರಕುಶಲ ಜನರು ಪಡೆದುಕೊಳ್ಳುವಂತಾಗಬೇಕು ಎಂದು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವಕೆ.ಹೆಚ್. ಮುನಿಯಪ್ಪ ಅವರು ಹೇಳಿದರು.
ದೇವನಹಳ್ಳಿ ಟೌನ್ ನಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಎಂಎಸ್ಎಂಇ ಇವರ ವತಿಯಿಂದ ಆಯೋಜಿಸಿದ್ದ ಪ್ರಧಾನಮಂತ್ರಿ ವಿಶ್ವಕರ್ಮ ವಸ್ತು ಪ್ರದರ್ಶನ ಹಾಗೂ ವ್ಯಾಪಾರ ಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಚಿವ ಕೆ.ಎಚ್ ಮುನಿಯಪ್ಪ ಮಾತನಾಡಿದರು.
ಗುಡಿ ಕೈಗಾರಿಕೆಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡಿ, ದೇಶದ ಆರ್ಥಿಕ ಅಭಿವೃದ್ಧಿಗೆ ಉತ್ತೇಜಿಸಬೇಕಿದ್ದು, ನಾವು ಸ್ವದೇಶಿ ವಸ್ತುಗಳನ್ನು ಹೆಚ್ಚಾಗಿ ಬಳಸುವ ಜತೆಗೆ ವಿದೇಶಗಳಿಗೆ ರಪ್ತು ಮಾಡುವಂತಾಗಬೇಕು ಎಂದರು.
ಕರಕುಶಲ ಕರ್ಮಿಗಳು ಕಚ್ಚಾವಸ್ತು ಖರೀದಿಸಲು ಬ್ಯಾಂಕಿನಿಂದ ಸಬ್ಸಿಡಿ ಸಾಲ ಪಡೆದು ಗುಡಿ ಕೈಗಾರಿಕೆ ನಿರ್ಮಿಸಿಕೊಂಡು ಸಕಾಲದಲ್ಲಿ ಸಾಲ ಮರು ಪಾವತಿಸಲು ಗಮನ ವಹಿಸಬೇಕು ಎಂದು ಸಲಹೆ ನೀಡಿದರು.
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬೃಹತ್ ಕೈಗಾರಿಕೆಗಳ ಸ್ಥಾಪಿಸಲು ಕೇವಲ ಶೇ. 20 ರಷ್ಟು ಅವಕಾಶ ಆದರೆ ಗುಡಿ ಕೈಗಾರಿಕೆಗಳು ಸ್ಥಾಪಿಸಲು ಶೇ. 80 ರಷ್ಟು ಅವಕಾಶವಿದ್ದು, ಇದರ ಸದುಪಯೋಗವನ್ನು ಯುವಕರು ಪಡೆದು ನೂರಾರು ಜನರಿಗೆ ಉದ್ಯೋಗ ಕೊಡುವಂತೆ ಉದ್ಯಮಿಗಳಾಗಿ ಬೆಳೆಯಬೇಕು ಎಂದರು.
ಈ ಮೇಳದಲ್ಲಿ ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿ (ಎಂಎಸ್ಎಂಇ) ವ್ಯಾಪ್ತಿಗೆ ಬರುವ 50 ಕ್ಕೂ ಹೆಚ್ಚು ಕುಶಲಕರ್ಮಿಗಳ ಮಳಿಗೆಗಳಲ್ಲಿ ಸಾಮಗ್ರಿಗಳು ಸಾರ್ವಜನಿಕರನ್ನು ತಮ್ಮತ್ತ ಸೆಳೆದವು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ. ರಾಜಣ್ಣ, ದೇವನಹಳ್ಳಿ ತಾಲೂಕು ಸಿ.ಜಗನ್ನಾಥ, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಾದ ನರೇಂದ್ರ ಬಾಬು, ಜಿಲ್ಲಾ ಕೌಶಲ್ಯಾಭಿವೃದ್ದಿ ಇಲಾಖೆ ಅಧಿಕಾರಿಗಳಾದ ಜಗನ್ನಾಥ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Key words: encourage, production, handicrafts, Minister, K.H. Muniyappa







