ಬೆಂಗಳೂರು ಗ್ರಾಮಾಂತರ, ಜನವರಿ,9,2026 (www.justkannada.in): ಜಿಲ್ಲೆಯಲ್ಲಿ ಜವಳಿ ಮಾರುಕಟ್ಟೆ ಸಂಕೀರ್ಣ ನಿರ್ಮಾಣವಾಗುವುದರಿಂದ ಸ್ಥಳೀಯ ನೇಕಾರರಿಗೆ ಹಾಗೂ ಸೀರೆ ಉತ್ಪಾದಕರಿಗೆ ವ್ಯಾಪಾರ ವಹಿವಾಟಿಗೆ ಉತ್ತೇಜಿಸಲು ಸಹಕಾರಿಯಾಗಲಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪನವರು ಹೇಳಿದರು.
ದೊಡ್ಡಬಳ್ಳಾಪುರ ನಗರದಲ್ಲಿ ನೇಕಾರರ ಜವಳಿ ಮಾರುಕಟ್ಟೆ ಸಂಕೀರ್ಣದ ನಿರ್ಮಾಣ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಸಚಿವ ಕೆ.ಚ್ ಮುನಿಯಪ್ಪ,ಸರ್ಕಾರದ ಅನುದಾನ ಹಾಗೂ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ಅನುದಾನ ಸೇರಿ 2.70 ಕೋಟಿ ರೂ. ವೆಚ್ಚದಲ್ಲಿ 30 ಮಳಿಗೆಗಳ ಎರಡು ಮಹಡಿಯ ಕಟ್ಟಡ ನಿರ್ಮಾಣವಾಗಲಿದ್ದು, ಮೊದಲ ಹಂತದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ15 ಮಳಿಗೆಗಳು ನಿರ್ಮಾಣವಾಗಲಿವೆ. ಇದರಿಂದಾಗಿ ಸ್ಥಳೀಯ ನೇಕಾರರು ತಾವು ಉತ್ಪಾದಿಸುವ ಸೀರೆಯ ಜವಳಿ ವ್ಯಾಪಾರಕ್ಕೆ ಬಹಳಷ್ಟು ಅನುಕೂಲವಾಗುವ ಜತೆಗೆ ನಮ್ಮ ರೇಷ್ಮೆ ಬೆಳೆಗಾರರನ್ನು ಉತ್ತೇಜಿಸಲಾಗುವುದು ಎಂದರು.
ದೊಡ್ಡಬಳ್ಳಾಪುರ ಶಾಸಕರಾದ ಧೀರಜ್ ಮುನಿರಾಜು ಅವರು ಮಾತನಾಡಿ ಈ ಜವಳಿ ಮಾರುಕಟ್ಟೆ ಸಂಕೀರ್ಣ ಸ್ಥಾಪನೆಯಿಂದ ಸ್ಥಳೀಯ ನೇಕಾರರು ನೇಯ್ದ ಸೀರೆಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಸಿಗಲಿದೆ. ಇದರಿಂದ ನೇಕಾರರಿಗೆ ಮಧ್ಯವರ್ತಿಗಳ ಅವಲಂಬನೆ ತಪ್ಪಿಸಿ, ನ್ಯಾಯಯುತ ಮತ್ತು ಲಾಭದಾಯಕ ಆರ್ಥಿಕವಾಗಿ ಸದೃಢರಾಗಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ. ರಾಜಣ್ಣ, ನಗರಸಭೆ ಅಧ್ಯಕ್ಷರಾದ ಸುಮಿತ್ರಾ ಕೆ. ಆನಂದ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಚುಂಚೇಗೌಡ, ಜಿಲ್ಲಾ ಜವಳಿ ಮತ್ತು ಕೈಮಗ್ಗ ಇಲಾಖೆ ಉಪನಿರ್ದೇಶಕ ಸುರೇಶ್ ಕುಮಾರ್. ಎಸ್ ಸೇರಿ ಮುಖಂಡರು, ಕೈಮಗ್ಗ ಜವಳಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
Key words: Construction, textile market, complex, local weavers, Minister, K.H. Muniyappa







