ಬೌದ್ಧ ನೆಲೆ ಕುರುಹುಗಳಿಂದ ರಾಜಘಟ್ಟ ಹೆಚ್ಚು ಮಹತ್ವ ಪಡೆದುಕೊಳ್ಳಲಿದೆ- ಸಚಿವ ಎಚ್.ಕೆ ಪಾಟೀಲ್

ಬೆಂಗಳೂರು ಜುಲೈ,17,2025 (www.justkannada.in):  ಬೌದ್ಧ ನೆಲೆಗಳನ್ನು ಪ್ರತಿಬಿಂಬಿಸುವ ಚೈತ್ಯ-ವಿಹಾರ ಸಂಕೀರ್ಣದ ಸಂಪೂರ್ಣ ಚಿತ್ರಣವನ್ನು ಬೆಳಕಿಗೆ ತರಲು ಬೌದ್ಧ ನೆಲೆ ಉತ್ಖನನಕ್ಕೆ ಚಾಲನೆ ನೀಡಲಾಗಿದ್ದು ರಾಜಘಟ್ಟವು ಮುಂದೆ ಮಹತ್ವದ ನೆಲೆಯಾಗಲಿದೆ ಎಂದು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಸಚಿವ  ಡಾ.ಎಚ್.ಕೆ ಪಾಟೀಲ್ ಅವರು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ರಾಜಘಟ್ಟ ಗ್ರಾಮದ ಬೂದಿಗುಂಡಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪ್ರವಾಸೋದ್ಯಮ ಇಲಾಖೆ, ರಾಜ್ಯದ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಬೌದ್ಧನೆಲೆಯ ಉತ್ಖನನಕ್ಕೆ ಚಾಲನೆ ನೀಡಿ ಸಚಿವ ಹೆಚ್.ಕೆ ಪಾಟೀಲ್ ಮಾತನಾಡಿದರು.

ರಾಜಘಟ್ಟ ಗ್ರಾಮದಲ್ಲಿ ಬೌದ್ಧನೆಲೆಯ ಕುರಿತಾದ ಸ್ತೂಪಗಳು, ಹಾಗೂ ವಿವಿ‍ಧ ಅವಶೇಷಗಳು  ಪತ್ತೆಯಾಗಿದ್ದು, ಕಾರಣಾಂತರದಿಂದ ಅಪೂರ್ಣಗೊಂಡಿದ್ದ ಉತ್ಖನನಕ್ಕೆ, ಕೇಂದ್ರ ಪುರಾತತ್ವ ಇಲಾಖೆ ಅನುಮೋದನೆಯೊಂದಿಗೆ ಈಗ ರಾಜ್ಯ ಸರ್ಕಾರದಿಂದ ಮರು ಚಾಲನೆ ನೀಡಲಾಗಿದೆ. ಪ್ರೋ ಎಮ್.ಎಸ್ ಕೃಷ್ಣ ಮೂರ್ತಿ ಅವರು ಈ ಉತ್ಖನನದ ಪ್ರಧಾನ ನಿರ್ದೇಶಕರಾಗಿರುತ್ತಾರೆ. 2001 ಮತ್ತು 2004ರಲ್ಲಿ ಸಂಶೋಧಕ ಪ್ರೊ.ಎಂ.ಎಸ್.ಕೃಷ್ಣಮೂರ್ತಿ ಮಾರ್ಗದರ್ಶನದಲ್ಲಿ ರಾಜಘಟ್ಟದಲ್ಲಿ ಕ್ರಮಬದ್ಧವಾಗಿ ಉತ್ಖನನ ಕಾರ್ಯ ನಡೆದಿತ್ತು. ಅದರ ಫಲವಾಗಿ ಬೌದ್ದ ಧರ್ಮಿಯರು ಚೈತ್ಯಾಲಯ ಮತ್ತು ಅದರ ಸುತ್ತಲೂ ನಿರ್ಮಿತವಾಗಿದ್ದ ಬೌದ್ಧ ವಿಹಾರದ ಪಾಯದ ಅವಶೇಷಗಳು ಬೆಳಕಿಗೆ ಬಂದವು. ಈಗ ನಡೆಯಲಿರುವ ಈ ಮಹತ್ತರ ಉತ್ಖನನ ಕಾರ್ಯಕ್ರಮದಿಂದ ಬೌದ್ಧಧರ್ಮದ ಇತಿಹಾಸ, ಕುರುಹುಗಳು, ಮಾರ್ಗದರ್ಶನ ಹಾಗೂ ಬುದ್ದನ ಸಂದೇಶ ಅರಿಯಲು ಸಹಕಾರಿಯಾಗಲಿದೆ ಎಂದರು.

ಬುದ್ಧನ ಸಂದೇಶಗಳು ಜನರ ಬದುಕಿಗೆ ಸಮೀಪವಾಗಿದ್ದು ನಾವೆಲ್ಲರೂ ಬುದ್ಧನ ಸಂದೇಶಗಳನ್ನು ಅರಿಯಬೇಕು, ಅವರ ಸಂದೇಶಗಳೇ ನಮಗೆ ಪ್ರೇರಣೆ ಎಂದರಲ್ಲದೆ ಉತ್ಖನನ ಕಾರ್ಯಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವ ಡಾ.ಎಚ್.ಕೆ ಪಾಟೀಲ್ ಅವರು ಸೂಚಿಸಿದರು.

ಉತ್ಖನನ ಕಾರ್ಯಕ್ಕೆ ಅಗತ್ಯ ನೆರವು- ಸಚಿವ ಮುನಿಯಪ್ಪ

ಕರ್ನಾಟಕದಲ್ಲಿ ಬೌದ್ಧಕಲೆ ಮತ್ತು ಸಂಸ್ಕೃತಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ ಅವರು ಬೌದ್ಧ ಧರ್ಮವನ್ನು ಇಡೀ ಜಗತ್ತು ಒಪ್ಪಿಕೊಂಡಿದೆ. ನಾವು ಬುದ್ಧನನ್ನು ಮಾತ್ರ ನೋಡುತ್ತೇವೆ ಅವನ ಸಿದ್ದಾಂತ ಅವನು ತೋರಿಸಿದ ಸುಖ ಜೀವನದ ದಾರಿ ದೀಪವನ್ನು ತಿಳಿದುಕೊಳ್ಳಬೇಕು.

ರಾಜ್ಯ ಪುರತತ್ವ ಇಲಾಖೆ ರಾಜಘಟ್ಟದಲ್ಲಿ ಸಿಕ್ಕಿರುವ ಬೌದ್ಧ ಧರ್ಮದ ಚೈತ್ಯ- ವಿಹಾರ ಸಂಕೀರ್ಣದ ಸಂಪೂರ್ಣ ಚಿತ್ರಣವನ್ನು ಬೆಳಕಿಗೆ ತರುವ ಯೋಜನೆಯನ್ನು ಹಮ್ಮಿಕೊಂಡಿದೆ. ಈ ಭೂಗರ್ಭದಲ್ಲಿ ಅಡಗಿರುವ ಬೌದ್ಧ ಮಂತ್ರ ಮುದ್ರಿತ ಮಣ್ಣಿನ ಬಿಲ್ಲೆಗಳು ಅವುಗಳ ಗಾತ್ರ ಅಗಲ ಚೈತ್ಯ ವಿಹಾರ ಎಲ್ಲಾವೂ ಬೌದ್ಧ ಧರ್ಮದ ಧಾರ್ಮಿಕ ಶಕ್ತಿ ಮತ್ತು ಮೌಲ್ಯವನ್ನು ಪ್ರತಿಬಿಂಬಿಸುತ್ತದೆ ಹಾಗಾಗಿ ಇದರ ಸಂಪೂರ್ಣ ಅಭಿವೃದ್ಧಿಗೆ ನಾವೆಲ್ಲರು ಕೈಜೋಡಿಸಬೇಕು. ನಮ್ಮ ಇತಿಹಾಸವನ್ನು ಅರಿಯುವ ನಿಟ್ಟಿನಲ್ಲಿ ಉತ್ಖನನ ಕಾರ್ಯಗಳಿಗೆ ಸರ್ಕಾರದಿಂದ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ  ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರು ಹಾಗೂ ಸಂಶೋಧಕ ಎಂ.ಎಸ್ ಕೃಷ್ಣಮೂರ್ತಿ, ಸಾಹಿತಿಗಳಾದ ಡಾ.ಎಲ್ ಹನುಮಂತಯ್ಯ, ನಾಡೋಜ ಪ್ರೊ.ಹಂಪ ನಾಗರಾಜ್, ಮೈಸೂರಿನ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ದೇವರಾಜು ಎ, ದೊಡ್ಡಬಳ್ಳಾಪುರ ಮಾಜಿ ಶಾಸಕ ವೆಂಕಟರಮಣಯ್ಯ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ರಾಜಣ್ಣ, ರಾಜಾಘಟ್ಟ ಉತ್ಖನನ ಭೂಮಾಲೀಕರು ಕೃಷ್ಣಪ್ಪ ಎನ್.ಅಂಜಿನಪ್ಪ, ಸ್ಥಳೀಯ ಜನ ಪ್ರತಿನಿಧಿಗಳು, ಇತರರು ಉಪಸ್ಥಿತರಿದ್ದರು.

Key words: Rajghat, importance, remains. Buddhist, Minister, H.K. Patil