ಮೈಸೂರು,ಮಾರ್ಚ್,2,2026 (www.justkannada.in): ನರಸೀಪುರದಲ್ಲಿ ರೇಷ್ಮೆ ಕಾರ್ಖಾನೆಯನ್ನು ಮುಚ್ಚುವ ಪ್ರಶ್ನೆಯೇ ಇಲ್ಲ. ಅನಗತ್ಯವಾಗಿ ಕೆಲವರು ಗೊಂದಲ ಸೃಷ್ಟಿಸಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ಸ್ಪಷ್ಟಪಡಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ರೇಷ್ಮೆ ಮಾರುಕಟ್ಟೆಗೆ ಉಪಯೋಗಿಸಲ್ಪಟ್ಟ ಒಂದೂವರೆ ಎಕರೆ ಜಾಗವನ್ನು ಉದ್ಯಾನವನ ಬಳಸಲು ತೀರ್ಮಾನ ಮಾಡಿದ್ದೆವು. ಈಗ ಮತ್ತೆ ಆ ಆದೇಶವನ್ನ ಮರು ಪರಿಶೀಲನೆ ಮಾಡಿದ್ದೇವೆ. ರೇಷ್ಮೆ ಕಾರ್ಖಾನೆಗೆ ತೊಂದರೆ ಆದರೆ ಆ ಜಾಗದಲ್ಲಿ ಕ್ರೀಡಾಂಗಣ ಮಾಡುವುದಿಲ್ಲ. ನಮಗೆ ರೇಷ್ಮೆ ಕಾರ್ಖಾನೆಯೇ ಮುಖ್ಯ. ಸರ್ಕಾರಕ್ಕೆ ಈ ವಿಚಾರದಲ್ಲಿ ಯಾವ ಪ್ರತಿಷ್ಠೆ ಇಲ್ಲ. ಕೆಲವರು ಇಂತಹ ವಿಚಾರದಲ್ಲಿ ಹುಡುಗಾಟ ಆಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಮಿಕರು ಆತಂಕ ಪಡುವುದು ಬೇಡ ಸಾರ್ವಜನಿಕರು ಆತಂಕ ಪಡುವುದು ಬೇಡ. ರೇಷ್ಮೆ ಕಾರ್ಖಾನೆ ಬೆಳವಣಿಗೆಗೆ ನಮ್ಮ ಸರ್ಕಾರ ಅತೀ ಹೆಚ್ಚು ಒತ್ತು ಕೊಟ್ಟಿದೆ. ವಿಚಾರ ಗೊತ್ತಿಲ್ಲದವರು ಬಾಯಿಗೆ ಬಂದಹಾಗೆ ಮಾತನಾಡಿದರೆ ಏನೂ ಮಾಡುವುದು ಹೇಳಿ. ರೇಷ್ಮೆ ಕಾರ್ಖಾನೆಗೆ ಕುಂದು ಬಾರದಂತೆ ಕಾಪಾಡುವುದು ನಮ್ಮ ಜವಾಬ್ದಾರಿ. ಇದರಲ್ಲಿ ಅನುಮಾನ ಬೇಡ. ಬಿಜೆಪಿ ಅವರು ರಾಜಕೀಯಕ್ಕಾಗಿ ಗೊಂದಲ ಸೃಷ್ಟಿಸಿದ್ದಾರೆ. ಕ್ರೀಡಾ ಅಧಿಕಾರಿಗಳು ಮತ್ತು ರೇಷ್ಮೆ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ. ತೀರ ಅನಿವಾರ್ಯ ಅನಿಸಿದರೆ ಆ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವುದಿಲ್ಲ ಎಂದರು.
ಮೈಸೂರಿನವರು ಸಿಲುಕಿರುವ ಬಗ್ಗೆ ಮಾಹಿತಿ ಇಲ್ಲ.
ಇಸ್ರೇಲ್ -ಇರಾನ್ ನಡುವಿನ ಯುದ್ಧದಲ್ಲಿ ಕನ್ನಡಿಗರ ರಕ್ಷಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಹೆಚ್.ಸಿ ಮಹದೇವಪ್ಪ, ಘಟನೆಯಲ್ಲಿ ಮೈಸೂರಿನವರು ಸಿಲುಕಿರುವ ಬಗ್ಗೆ ಮಾಹಿತಿ ಇಲ್ಲ. ರಾಜ್ಯ ಸರ್ಕಾರ ಕನ್ನಡಿಗರ ರಕ್ಷಣೆಗೆ ಕ್ರಮ ತೆಗೆದುಕೊಳ್ಳುತ್ತಿದೆ. ಮುಖ್ಯಮಂತ್ರಿಗಳು ಈ ಬಗ್ಗೆ ಮಾತನಾಡಿ ಕ್ರಮವಹಿಸಿದ್ದಾರೆ. ಈ ಘಟನೆಯಲ್ಲಿ ಮೈಸೂರಿನವರು ಇರುವ ಮಾಹಿತಿ ಇಲ್ಲಿಯವರೆಗೂ ಸಿಕ್ಕಿಲ್ಲ ಎಂದರು.
ಅಧಿಕಾರ ಹಂಚಿಕೆ ವಿಚಾರ: ಸೈಲೆಂಟ್ ಆದ ಸಚಿವ ಡಾ.ಎಚ್ಸಿ ಮಹದೇವಪ್ಪ.
ಅಧಿಕಾರ ಹಂಚಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಮಹದೇವಪ್ಪ, ನಾನು ಯಾರ ಬಗ್ಗೆಯೂ ಯಾವುದರ ಬಗ್ಗೆಯೂ ಮಾತನಾಡುವುದಿಲ್ಲ. ಯಾರು ನನ್ನ ಬಗ್ಗೆ ಏನೇ ಹೇಳಿಕೆ ನೀಡಿದರೂ ಅದರ ಬಗ್ಗೆ ಉತ್ತರ ಕೊಡುವುದಿಲ್ಲ. ಪಕ್ಷದ ವಿಚಾರವನ್ನ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಬೇರೆ ವಿಚಾರಗಳು ನನಗೆ ಗೊತ್ತಿಲ್ಲ ಎಂದರು.
Key words: no closing, silk factory, Minister, H.C. Mahadevappa







