ಮೈಸೂರು,ಅಕ್ಟೋಬರ್,27,2025 (www.justkannada.in): ಹುಲಿ ದಾಳಿಗೆ ಮೃತಪಟ್ಟ ರೈತನ ಕುಟುಂಬಕ್ಕೆ ಅಗತ್ಯ ಪರಿಹಾರ ಅಗತ್ಯ ಪರಿಹಾರ ನೀಡುತ್ತೇವೆ. ಇಂತಹ ಘಟನೆ ಮರುಕಳಿಸದ ರೀತಿ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದರು.
ಹುಲಿ ದಾಳಿಯಿಂದ ರೈತ ರಾಜಶೇಖರ್ ಸಾವು ಘಟನೆಗೆ ಸಂಬಂಧಿಸಿದಂತೆ ರೈತರ ಪ್ರತಿಭಟನೆ ಮುಂದುವರೆದಿದ್ದು, ಸಚಿವ ಹೆಚ್.ಸಿ ಮಹದೇವಪ್ಪ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಈ ಕುರಿತು ಮಾತುಕತೆ ನಡೆಸಿದ್ದಾರೆ.
ಈ ವೇಳೆ ಮೃತ ರಾಜಶೇಖರ ಅವರ ಪುತ್ರ ಆಕ್ರೋಶ ಹೊರಹಾಕಿದ್ದು, ಶವವನ್ನು ಯಾಕೆ ಮೈಸೂರಿಗೆ ತಂದಿದ್ದಿರಿ? ನಮ್ಮಪ್ಪನ ಶವ ನೋಡೋಕೆ ನೀವು ಬರಬೇಕು. ಅದರ ಬದಲಿಗೆ ನೀವೇ ಶವವನ್ನು ಇಲ್ಲಿಗೆ ತಂದಿರುವುದು ಎಷ್ಟು ಸರಿ..? ನಮಗೆ ನ್ಯಾಯ ಬೇಕೆ ಬೇಕು. ನ್ಯಾಯ ಸಿಗುವವರಿಗೂ ನಾವು ಶವ ಇಲ್ಲಿಂದ ಹೋಗಲ್ಲ. ತಪ್ಪಿತಸ್ಥ ಅಧಿಕಾರಿಗಳ ತಲೆದಂಡ ಅಗಲೇ ಬೇಕು ಅಲ್ಲಿಯವರೆಗೂ ನಾವು ಇಲ್ಲಿದ ಶವ ತೆಗೆದುಕೊಂಡು ಹೋಗುವುದಿಲ್ಲ ಎಂದು ಕಿಡಿಕಾರಿದರು.
ಈ ಕುರಿತು ಮಾತನಾಡಿದ ಸಚಿವ ಎಚ್.ಸಿ.ಮಹದೇವಪ್ಪ, ಹುಲಿ ದಾಳಿಗೆ ಒಳಗಾದ ಕುಟುಂಬಕ್ಕೆ ಅಗತ್ಯ ಪರಿಹಾರ ನೀಡುತ್ತೇವೆ. ಇಂತಹ ಘಟನೆ ಮರುಕಳಿಸದ ರೀತಿ ಕ್ರಮಕ್ಕೆ ಮುಂದಾಗುತ್ತೇವೆ. ಕಾಡು ಕ್ಷೀಣಿಸುತ್ತಿರುವುದು ಒಂದು ಕಾರಣ. ಹುಲಿಗಳ ಸಂಖ್ಯೆ ಹೆಚ್ಚಳ ಮತ್ತೊಂದು ಕಾರಣ. ಗುಂಪು ಸೇರಿದಾಗ ಜನರು ಕೂಗಾಟ ನಡೆಸುತ್ತಾರೆ. ಇದರಿಂದ ಭಯಗೊಂಡ ಕಾಡು ಪ್ರಾಣಿಗಳು ದಾಳಿ ಮಾಡುತ್ತವೆ. ಇದಕ್ಕೆಲ್ಲ ಸಭೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಎಚ್.ಡಿ.ಕೋಟೆ ಭಾಗದಲ್ಲಿ ಅಕ್ರಮ ರೆಸಾರ್ಟ್ ಗಳು ಹೆಚ್ಚಾಗಿವೆ. ಈ ಕುರಿತು ಸಾಕಷ್ಟು ದೂರುಗಳು ಬಂದಿವೆ. ಈ ಸಂಬಂಧ ಡಿಸಿ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಸರಗೂರಿನಲ್ಲಿ ಶವ ಇರಿಸಲು ವ್ಯವಸ್ಥೆ ಇಲ್ಲ. ಆ ಕಾರಣಕ್ಕೆ ಮೈಸೂರಿಗೆ ಶವ ತಂದಿದ್ದಾರೆ. ಮಂತ್ರಿಗಳು ನೋಡಲಿ ಎಂಬ ಕಾರಣ ಅಲ್ಲ. ಪಂಚನಾಮೆ ಮುಗಿಸಿ ಶವ ಕಳುಹಿಸಿಕೊಡುತ್ತೇವೆ ಎಂದು ತಿಳಿಸಿದರು.
Key words: compensation, farmer, died,tiger, attack, Minister, H.C. Mahadevappa







