ಮೈಸೂರು,ಜುಲೈ,16,2025 (www.justkannada.in): ಜುಲೈ 19 ರಂದು ಮೈಸೂರಿನಲ್ಲಿ ಕಾಂಗ್ರೆಸ್ ಸಾಧನ ಸಮಾವೇಶ ನಡೆಯಲಿದ್ದು ಈ ಹಿನ್ನಲೆಯಲ್ಲಿ ಇಂದು ಮೈಸೂರು ಮಹಾರಾಜ ಗ್ರೌಂಡ್ ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ವೇದಿಕೆ ಸ್ಥಳ ಪರಿಶೀಲನೆ ನಡೆಸಿದರು.
ಸರ್ಕಾರದಲ್ಲಿ 2 ವರ್ಷ ಹಿನ್ನಲೆಯಲ್ಲಿ ಮೈಸೂರಿನಲ್ಲಿ ಕಾಂಗ್ರೆಸ್ ಸಾಧನ ಸಮಾವೇಶ ಹಮ್ಮಿಕೊಂಡಿದ್ದು, ಸಮಾವೇಶದಲ್ಲಿ ಕಾಂಗ್ರೆಸ್ ನ ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರು ಭಾಗಿಯಾಗಲಿದ್ದಾರೆ. ಸಾಧನ ಸಮಾವೇಶಕ್ಕೆ ಭರದ ಸಿದ್ದತೆ ನಡೆಸಲಾಗುತ್ತಿದ್ದು ಮಹಾರಾಜಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ಹಾಕಲಾಗುತ್ತಿದೆ. ಹೀಗಾಗಿ ಇಂದು ಸಚಿವ ಹೆಚ್.ಸಿ ಮಹದೇವಪ್ಪ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಅಂದು ಸರ್ಕಾರದ ಎರಡು ವರ್ಷದ ಸಾಧನೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನ ಸಿಎಂ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ. ಸಾಧನಾ ಸಮಾವೇಶದ ಮೂಲಕ ತವರಿನಲ್ಲಿ ಸಿಎಂ ಸಿದ್ದರಾಮಯ್ಯ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ಸಿದ್ದತೆ ಕಾರ್ಯ ವೀಕ್ಷಣೆ ಮಾಡಿದ ಸಚಿವ ಎಚ್ ಸಿ ಮಹದೇವಪ್ಪಗೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಪೋಲಿಸ್ ಕಮಿಷನರ್ ಸೀಮಾ ಲಾಟ್ಕರ್ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದರು.
ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ಸಿಎಂ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಗೆ 3 ದಿನ ಪ್ರವಾಸ ಬರುತ್ತಿದ್ದಾರೆ. ಮೈಸೂರಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ಮಂಜೂರು ಆಗಿತ್ತು. ಕೆಲವೊಂದು ಉದ್ಘಾಟನೆ ಆಗಬೇಕು. ಇನ್ನು ಅನೇಕ ಶಂಕುಸ್ಥಾಪನೆ ಮಾಡಬೇಕು. ಜಿಲ್ಲೆಗೆ ಸರ್ಕಾರದಿಂದ ಏನೆಲ್ಲಾ ಅನುದಾನ ಬಂದಿದೆ ಅಂತ ಚರ್ಚೆ ಮಾಡಿದ್ದೇವೆ. 502 ಕೋಟಿ ಹಣ ಲೋಕೋಪಯೋಗಿ ಇಲಾಖೆಗೆ ಬಂದಿದೆ. ಜಲ ಸಂಪನ್ಮೂಲ ಇಲಾಖೆಗೆ 419 ಕೋಟಿ ಹಣ ಬಂದಿದೆ. ಸೆಸ್ಕ್ ಗೆ 408 ಕೋಟಿ ರೂಪಾಯಿ ಹಣ ಬಂದಿದೆ. ಸಣ್ಣ ಕೈಗಾರಿಕೆಗೆ 198 ಕೋಟಿ ಹಣ ಕೊಟ್ಟಿದ್ದಾರೆ. ಜಿಲ್ಲಾ ಕೋಶದಿಂದ 120 ಕೋಟಿ ಹಣ ಬಂದಿದೆ. ವೈದ್ಯಕೀಯ ಶಿಕ್ಷಣ ಇಲಾಖೆಗೆ 100 ಕೋಟಿ ಕೊಟ್ಟಿದೆ . ಇತರೆ ಇಲಾಖೆಗಳಿಗೆ ನೂರಾರು ಕೋಟಿ ಹಣ ಕೊಟ್ಟಿದ್ದೇವೆ. 2569 ಕೋಟಿ ಹಣ ಮೈಸೂರು ನಗರ ವ್ಯಾಪ್ತಿಗೆ ಸರ್ಕಾರದಿಂದ ಬಂದಿದೆ. ಹೀಗಾಗಿ ಮೈಸೂರು ಜಿಲ್ಲೆಯಲ್ಲಿ ಸರ್ಕಾರದ ಸಾಧನ ಸಮಾವೇಶ ಮಾಡುತ್ತಿದ್ದೇವೆ. ಜುಲೈ 19 ರಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಶಂಕು ಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮ ಮಾಡಲಿದ್ದಾರೆ ಎಂದರು.
ಸಮಾವೇಶದಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಭಾಗಿ
ಸಾಧನಾ ಸಮಾವೇಶದಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗಲಿದ್ದಾರೆ. ಅದಕ್ಕೆ ಬೇಕಾದ ಸಿದ್ಧತೆ ಜಿಲ್ಲಾಡಳಿತ ಮಾಡುತ್ತಿದೆ. ಮೈಸೂರು ಸರ್ವಾಂಗೀಣ ಅಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯ ಪಣ ತೊಟ್ಟಿದ್ದಾರೆ. ಕಾರ್ಯಕ್ರಮಕ್ಕೆ ಕೇಂದ್ರದಿಂದ ಮಲ್ಲಿಕಾರ್ಜುನ್ ಖರ್ಗೆ ಬರಲಿದ್ದಾರೆ ಎಂದರು.
ಸಿಎಂ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಹೆ್ಚ್. ಸಿ ಮಹದೇವಪ್ಪ, ಇದು ಶಕ್ತಿ ಪ್ರದರ್ಶನ ಅಲ್ಲ. ಶಕ್ತಿ ಕಾರ್ಯಕ್ರಮಗಳು ಈಗಾಗಲೇ ಯಶಸ್ವಿ ಆಗಿದೆ. ರಾಜ್ಯದ ಜನರು ಆಶೀರ್ವಾದ ಮಾಡಿ ಈಗಾಗಲೇ ಶಕ್ತಿ ಕೊಟ್ಟಿದ್ದಾರೆ ಎಂದರು.
ಸುರ್ಜೇವಾಲ ನಮ್ಮ ಪಕ್ಷದ ವರಿಷ್ಠರು. ಕರ್ನಾಟಕದ ಉಸ್ತುವಾರಿ ಆಗಿದ್ದಾರೆ. ಅವರು ಮಂತ್ರಿಗಳನ್ನು ಕರೆದು ಸಲಹೆ ಸೂಚನೆ ಕೊಡಲು ಎಲ್ಲಾ ಹಕ್ಕಿದೆ. ನನ್ನನು ಕೂಡ ಕರೆದಿದ್ದರು. ನಾನು ಹೋಗಿ ಬಂದಿದ್ದೇನೆ. ಸಿಎಂ ಇದ್ದಾಗಲೇ ಮಂತ್ರಿಗಳ ಜೊತೆ ಚರ್ಚೆ ಮಾಡಬೇಕು ಅಂತೇನಿಲ್ಲ ಎಂದರು.
ಶಿಷ್ಟಾಚಾರ ಬದಿಗಿಟ್ಟು ಉದ್ಘಾಟನೆ ಪ್ರಜಾಪ್ರಭುತ್ವದಲ್ಲಿ ಸರಿಯಾದ ಬೆಳವಣಿಗೆ ಅಲ್ಲ
ಸಿಗಂದೂರು ಸೇತುವೆ ಉದ್ಘಾಟನೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಸಿ ಮಹದೇವಪ್ಪ, 1985 ನಲ್ಲಿ ನಾನು ಮೊದಲ ಬಾರಿ ಎಂ.ಎಲ್. ಎ ಆಗಿದ್ದೆ. ನಾನು ಪಿಡಬ್ಲ್ಯೂಡಿ ಮಿನಿಸ್ಟರ್ ಆದ ಮೇಲೆ ಬ್ರಿಡ್ಜ್ ಮಾಡಬೇಕು ಅಂತ ಅನ್ನಿಸಿತ್ತು. 2013 ರಲ್ಲಿ ಡಿಪಿಆರ್ ಮಾಡಿದವು. ಲೈನ್ ಎಸ್ಟಿಮೇಟ್ ಮಾಡಿದವು. ಯಡಿಯೂರಪ್ಪ ನನಗೆ ಕರೆ ಮಾಡಿ ಮಹದೇವ್ ಬ್ರಿಡ್ಜ್ ಮಾಡಿ ಅಂತ ಅಂದರು. ಅದು ಕೂಡ ಪ್ರೀತಿಯಿಂದ ಯಡಿಯೂರಪ್ಪ ಹೇಳಿದ್ರು. ನಾನು ಗಡ್ಕರಿಗೆ ಮನವಿ ಮಾಡಿದ್ದೆ. ನಮ್ಮ ಕಾಲದಲ್ಲಿ ಡಿಪಿಆರ್ ಆಯಿತು. ಅದು ನಮ್ಮ ರಾಜ್ಯ ಸರ್ಕಾರದ ವಿಷನ್ . ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಒಟ್ಟಾಗಿ ಅಭಿವೃದ್ದಿ ಮಾಡ್ಬೇಕು. ಅದನ್ನು ಬಿಟ್ಟು ಶಿಷ್ಟಾಚಾರ ಬದಿಗಿಟ್ಟು ಉದ್ಘಾಟನೆ ಮಾಡಿದರು. ಇದು ಪ್ರಜಾಪ್ರಭುತ್ವದಲ್ಲಿ ಸರಿಯಾದ ಬೆಳವಣಿಗೆ ಅಲ್ಲ. ಒತ್ತಡದಿಂದ ಬಿಜೆಪಿಗರು ಈ ರೀತಿ ಮಾಡಿದ್ದಾರೆ. ಸಿಗಂದೂರು ಸೇತುವೆ ನಿರ್ಮಾಣದಲ್ಲಿ ನನ್ನ ಪಾತ್ರವಿದೆ ಎಂದು ಸಚಿವ ಮಹದೇವಪ್ಪ ಹೇಳಿದರು.
ಸುರ್ಜೆವಾಲ ಸೂಪರ್ ಸಿಎಂ ಎಂಬ ನಿಖಿಲ್ ಕುಮಾರಸ್ವಾಮಿ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಸಿ ಮಹದೇವಪ್ಪ, ಸಿಎಂ ಸಿದ್ದರಾಮಯ್ಯ ಒಬ್ಬರು ಸಿಎಂ . ಬೇರೆ ಯಾರೂ ಸಿಎಂ ಅಲ್ಲ ಎಂದು ಟಾಂಗ್ ಕೊಟ್ಟರು.
Key words: Sadhana conference, Mysore, July 19, Minister, H.C. Mahadevappa