ಬೆಂಗಳೂರು,ಜನವರಿ,8,2026 (www.justkannada.in): ಬಳ್ಳಾರಿಯಲ್ಲಿ ಬ್ಯಾನರ್ ಹಾಕುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಫೈರಿಂಗ್ ನಡೆದು ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವನ್ನಪ್ಪಿದ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ , ಪ್ರಕರಣವನ್ನು ಸಿಬಿಐಗೆ ಕೊಡುವ ಅಗತ್ಯ ಇಲ್ಲ ಎಂದಿದ್ದಾರೆ.
ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಇಂತಹ ಪ್ರಕರಣಗಳನ್ನು ಸಿಬಿಐಗೆ ಕೊಡಲ್ಲ ಅಂತ ಸಚಿವ ಸಂಪುಟ ಸಭೆಯಲ್ಲಿ ಈ ಹಿಂದೆಯೇ ತೀರ್ಮಾನಿಸಿದ್ದೇವೆ. ನಮ್ಮ ರಾಜ್ಯದ ಪೊಲೀಸರಿಗೆ ತನಿಖೆ ಮಾಡುವ ಸಾಮರ್ಥ್ಯವಿದೆ. ನಮ್ಮ ಪೊಲೀಸರು ಯಾವುದೇ ಪರಿಸ್ಥಿತಿಯನ್ನು ನಿಭಾಯಿಸುತ್ತಾರೆ. ಅವರಿಂದ ಇದರ ತನಿಖೆ ಆಗಲ್ಲ ಎನ್ನುವ ಸಂದರ್ಭ ಬಂದಾಗ ಸಿಬಿಐ ತನಿಖೆ ಅಥವಾ ಬೇರೆ ಯೋಚನೆ ಮಾಡಬಹುದು ಎಂದರು.
ಕೆಲವು ಪ್ರಕರಣಗಳಲ್ಲಿ ಸೆಲೆಕ್ಟಿವ್ ನಿರ್ಧಾರ ಮಾಡುತ್ತೇವೆ. ನ್ಯಾಯಾಲಯದಿಂದ ಆದೇಶ ಬಂದಾಗ ಅಥವಾ ಇನ್ಯಾವುದೋ ಸನ್ನಿವೇಶ ಬಂದಾಗಷ್ಟೇ ಸಿಬಿಐ ಗೆ ಕೊಡುವ ಬಗ್ಗೆ ತೀರ್ಮಾನಿಸಲಾಗುತ್ತದೆ. ಹಾಗಾಗಿ ಬಳ್ಳಾರಿ ಗಲಾಟೆ ಪ್ರಕರಣವನ್ನು ಸಿಬಿಐಗೆ ಕೊಡುವ ಅವಶ್ಯಕತೆ ಇಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.
Key words: Bellary, riot case, CBI, No need, Home Minister, G. Parameshwar







