ತುರಗನೂರು ವಿಸ್ತರಣೆ ಶಾಖಾ ನಾಲೆಗಳ ಅಭಿವೃದ್ಧಿಯಿಂದ 1800 ಎಕರೆಗೆ ನೀರು: ಸಚಿವ ಡಾ: ಹೆಚ್.ಸಿ ಮಹದೇವಪ್ಪ

ಮೈಸೂರು,ಫೆಬ್ರವರಿ,21,2026 (www.justkannada.in):  ತುರಗನೂರು ಶಾಖಾ ನಾಲೆಯು ವಿಶ್ವೇಶ್ವರಯ್ಯ ನಾಲೆಯ ಅಂತಿಮ‌ ನೆಲೆಯಾಗಿದ್ದು, ಈ ನಾಲೆಯನ್ನು 1943 ರಲ್ಲಿ ನಿರ್ಮಿಸಲಾಗಿದೆ. ಇದರ ಆಧುನೀಕರಣದಿಂದ ಸುಮಾರು 1800 ಕೃಷಿ ಭೂಮಿಗೆ ನೀರು ಸಿಗಲಿದೆ ಎಂದು ಸಮಾಜ ಕಲ್ಯಾಣ  ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ: ಹೆಚ್.ಸಿ ಮಹದೇವಪ್ಪ ಅವರು ತಿಳಿಸಿದರು.

ಇಂದು ಚಿದರವಳ್ಳಿಯಲ್ಲಿ 91.33 ಕೋಟಿ ರೂ ವೆಚ್ಚದ  ತಿ.ನರಸಿಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತುರಗನೂರು ವಿಸ್ತರಣೆ, ಉಕ್ಕಲಗೆರೆ ಹಾಗೂ ಹಲವಾರ ಶಾಖಾ ನಾಲೆಗಳ ಗುದ್ದಲಿ ಪೂಜೆ ನೆರವೇರಿಸಿ‌ ಸಚಿವ ಮಹದೇವಪ್ಪ ಮಾತನಾಡಿದರು. ತುರಗನೂರು ನಾಲೆ ಅಭಿವೃದ್ಧಿಯ ಬಗ್ಗೆ ಸಮೀಕ್ಷೆ ಅಧ್ಯಯನ ನಡೆಸಲಾಗಿದೆ. 70 ವರ್ಷಗಳ ನಂತರ ಅಭಿವೃದ್ಧಿಯ ಬಗ್ಗೆ ಆಸಕ್ತಿ ವಹಿಸಿ ಕಾಮಗಾರಿ ರೂಪಿಸಿ ಅನುದಾನ ನೀಡಿರುವ ಮಾನ್ಯ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

ನಂಜಾಪುರ ಏತ ನೀರಾವರಿ ಯೋಜನೆಯ ಪ್ರಾರಂಭವಾದ ದಿನದಿಂದಲೂ ಇದ್ದ ತೊಡಕನ್ನು ಪ್ರಸಕ್ತ ಸಾಲಿನಲ್ಲಿ ಅಭಿವೃದ್ಧಿಪಡಿಸಲು ಹಾಗೂ ಎಲ್ಲಾ ಮೋಟಾರ್‌ ಗಳನ್ನು ಹೊಸದಾಗಿ ಅಳವಡಿಸಿ ದುರಸ್ಥಿಪಡಿಸಲು ಸುಮಾರು ರೂ.20.00 ಕೋಟಿ ಅನುದಾನ ಒದಗಿಸಲಾಗುವುದು ಎಂದರು‌.

ತುರಗನೂರು ಅಭಿವೃದ್ದಿ ಕಾಮಗಾರಿಯಿಂದ ಸುಮಾರು 100 ಕ್ಯೂಸೆಕ್ಸ್ ಗಿಂತ ಅಧಿಕ ಪ್ರಮಾಣದ ನೀರು ಸೋಸಲೆ ಹೋಬಳಿಯ ಗ್ರಾಮಗಳಿಗೆ ಲಭಿಸುವುದರಿಂದ ಈ ಪ್ರದೇಶವು ಹಚ್ಚ ಹಸಿರಿನಿಂದ ಕಂಗೊಳಿಸುವ ದಿನಗಳು ದೂರವಿಲ್ಲ ಎಂದರು.

ನಂಜಾಪುರ, ಸಿ.ವಿ.ಕೊಪ್ಪಲು, ಹೊಸಕೊಪ್ಪಲು, ಚಿಮಿಲಿ, ಚಿಕ್ಕಕಲ್ಲುಣಿ, ಬೊಮ್ಮನಹಳ್ಳಿ, ಎಸ್. ದೊಡ್ಡಪುರ, ಕೆಂಪನಪುರ, ಸೀಗೋಡಿಪುರ, ಬೋಳೇಗೌಡನಹುಂಡಿ, ರಾಮೇಗೌಡನಪುರ, ವಡ್ಡರಕೊಪ್ಪಲು, ಮರಿಯೂರು, ಬಿ.ಬೆಟ್ಟಹಳ್ಳಿ, ಮೇಗಲಕೊಪ್ಪಲು, ಕುಂತನಹಳ್ಳಿ, ದೇವಿನಹಳ್ಳಿ, ಎಂ.ಎಲ್.ಹುಂಡಿ, ಕಳ್ಳಪುರ, ಬೂದಹಳ್ಳಿ, ಉತ್ಸಲಗೆರೆ, ಕನ್ನಾಯಕನಹಳ್ಳಿ, ತಮ್ಮಡಿಪುರ, ನಾಗಲಿಗೆರೆ, ಕೋಣಗಹಳ್ಳಿ, ಚಿಟ್ಟಗಯ್ಯನಕೊಪ್ಪಲು, ನೆರೆಗ್ಯಾತನಹಳ್ಳಿ, ಹೊರಳಹಳ್ಳಿ, ಚಿದರವಳ್ಳಿ, ಮುಡುಕನಪುರ. ಹಲವಾರ, ದೊಡ್ಡಬಾಗಿಲು, ಕೊಳತ್ತೂರು ಗ್ರಾಮಗಳಿಗೆ ಈ ಕಾಮಗಾರಿಯಿಂದ ಉಪಯುಕ್ತವಾಗಲಿದೆ ಎಂದರು.

ಪಂಚ ಗ್ಯಾರಂಟಿ ಯೋಜನೆಗಳು ಬಡವರ‌ ಜೀವನ ಮಟ್ಟ ಸುಧಾರಿಸಿದೆ. ಬಡ ಮಹಿಳೆ ಹಾಗೂ ಕುಟುಂಬಕ್ಕೆ ಒಟ್ಟಾರೆ 4 ರಿಂದ 5 ಸಾವಿರ ರೂ ದೊರೆಯುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀ ಕಾಂತ ರೆಡ್ಡಿ ಜಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಯುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮಾಜಿ‌ ಜಿಲ್ಲಾ ಪಂಚಾಯತ್ ಸದಸ್ಯೆ ಸುನೀತ ವೀರಪ್ಪ, ಗಣ್ಯರಾದ ಹೆಚ್.ಸಿ ಸಿದ್ದಾರ್ಥ, ಸೋಸಲೆ ಮಹದೇವಸ್ವಾಮಿ, ವರದನಾಯಕ್, ಚಲುವರಾಜು, ಮಲ್ಲಿಕಾರ್ಜುನ, ಪರಶಿವಮೂರ್ತಿ ಸೇರಿದಂತರ ಇನ್ನಿತರರು ಉಪಸ್ಥಿತರಿದ್ದರು.

Key words: Development, Turaganur, extension, branch, canals, Minister, Dr. H.C. Mahadevappa