ಮಹದೇಶ್ವರರ ವಿಚಾರಧಾರೆಗಳನ್ನ ಅಳವಡಿಸಿಕೊಂಡರೆ ಶಾಂತಿ, ನೆಮ್ಮದಿಯ ಬದುಕು ಸಾಧ್ಯ – ಸಚಿವ ಡಾ. ಹೆಚ್. ಸಿ. ಮಹದೇವಪ್ಪ

ಮೈಸೂರು,ನವೆಂಬರ್, 14,2025 (www.justkannada.in): ನಾವು ದೇವರೆಂದು‌ ಪೂಜಿಸುತ್ತಿರುವ ಮಹದೇಶ್ವರ  ಅವರು ಹೇಳಿರುವ ವಿಚಾರಧಾರೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಶಾಂತಿ, ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ. ನಾವೆಲ್ಲರೂ ಒಂದೇ ಎನ್ನುವ ಭಾವನೆ ಎಲ್ಲರಲ್ಲೂ ಬರಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು  ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್. ಸಿ ಮಹದೇವಪ್ಪ ಅವರು ಹೇಳಿದರು.

ಇಂದು ಜಿಲ್ಲಾಡಳಿತ ಮತ್ತು ಕಾವೇರಿ ನೀರಾವರಿ ನಿಗಮ ನಿಯಮಿತ, ಮೈಸೂರು ಸಂಯುಕ್ತ ಆಶ್ರಯದಲ್ಲಿ “ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಂಜನಗೂಡು ತಾಲ್ಲೂಕು ಹದಿನಾರು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಹದಿನಾರು ಗ್ರಾಮದ ಶ್ರೀ ಬಿಳಿಕೆರೆ ಮಹದೇಶ್ವರ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭ”ವನ್ನು  ಉದ್ಘಾಟಿಸಿ ಸಚಿವ ಹೆಚ್.ಸಿ ಮಹದೇವಪ್ಪ ಮಾತನಾಡಿದರು.

ಮಹದೇಶ್ವರ ಅವರು ಜನರ ಬದುಕಿನ ನೋವು, ಕಷ್ಟಗಳನ್ನು ಜಾನಪದ ಸಾಹಿತ್ಯದ ಮೂಲಕ ಹೇಳುತ್ತಿದ್ದರು. ಬದುಕನ್ನು ಅರ್ಥ ಪೂರ್ಣವಾಗಿ ಹೇಳುವುದರ ಮೂಲಕ ಜನರನ್ನು ಜಾಗೃತಿ ಗೊಳಿಸುತ್ತಿದ್ದರು. ಮಹದೇಶ್ವರ ಜಾನಪದ ಸಾಹಿತ್ಯದ ನಾಯಕ, ಸಮಾಜದ ಸುಧಾರಣೆ ಮೂಲಕ ಜನರನ್ನು ಎಚ್ಚರಗೊಳಿಸುತ್ತಿದ್ದರು. ಪೂಜಾ ಕೈಂಕರ್ಯಗಳು .ಜನರನ್ನೆಲ್ಲ ಒಂದೇ ಕಡೆ ಸೇರಿಸಿ ನಾವೆಲ್ಲರೂ ಒಂದೇ ಎನ್ನುವುದನ್ನು  ತಿಳಿಸುವುದು, ಯಾವುದೇ ತಾರತಮ್ಯ ಮಾಡದೇ ಮನುಷ್ಯರೆಲ್ಲರೂ ಒಂದೇ ಎಂಬುದು ಮಹದೇಶ್ವರರ ತತ್ವವಾಗಿತ್ತು ಎಂದು ತಿಳಿಸಿದರು.

ನಾನು ರಾಜಕೀಯಕ್ಕೆ ಬಂದ ನಂತರ ನನಗೆ ನನ್ನ ತಾಯಿ ಊರಿನ ಜನರಿಗೆ ನೀನು ಒಳ್ಳೆಯದನ್ನು ಮಾಡಬೇಕು. ರಸ್ತೆ , ದೇವಸ್ಥಾನ,  ಕುಡಿಯುವ ನೀರಿನ ವ್ಯವಸ್ಥೆ ಉತ್ತಮವಾಗಿ ಮಾಡಿಕೊಡಬೇಕು ಎಂಬ ಹೇಳಿದರು. ಅದರಂತೆ ಊರಿನ ಅಭಿವೃದ್ಧಿ ಮಾಡುತ್ತಾ ಬರುತ್ತಿದ್ದೇನೆ. ರಾಜಕೀಯದಲ್ಲಿ ನನ್ನ ತಾಯಿಯೇ  ನನಗೆ ಪ್ರೇರಣೆ ಎಂದು ಹೇಳಿ ಅವರ ತಾಯಿಯನ್ನು ಸ್ಮರಿಸಿದರು.

ಹದಿನಾರು ಗ್ರಾಮದ ಪಕ್ಕದಲ್ಲಿ ಚಿತ್ರನಗರಿ, ಕಾರ್ಖಾನೆಗಳು ಸ್ಥಾಪನೆಯಾಗಲಿದ್ದು,  ಪ್ರವಾಸಿತಾಣವಾಗುವುದರ ಜೊತೆಗೆ ಧಾರ್ಮಿಕ ಕ್ಷೇತ್ರವಾಗುವುದು ಕಂಡಿತಾ ಆದ್ದರಿಂದ ಈ ಸ್ಥಳದ ಸ್ವಚ್ಛತೆಯನ್ನು ಕಾಪಾಡಬೇಕು, ಸರ್ಕಾರ ಜನರ ಅನುಕೂಲಕ್ಕಾಗಿ ಅನೇಕ ಸೌಕರ್ಯಗಳನ್ನು ನೀಡಿದೆ.  ಅದನ್ನು ಪಡೆದುಕೊಳ್ಳಬೇಕು ಎಂದರು.

ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ಸುನೀಲ್ ಬೋಸ್ ಅವರು ಮಾತನಾಡಿ, ನಾನು ಹುಟ್ಟಿದ ಊರಲ್ಲಿ ಈ ದೇವಸ್ಥಾನದ ಅಭಿವೃದ್ಧಿ ನೋಡಿ ಸಂತಸವಾಗುತ್ತಿದೆ. ಯಾರೇ ಆಗಲಿ ಒಂದು ಉನ್ನತ ಸ್ಥಾನಕ್ಕೆ ಹೋದಾಗ ತಮ್ಮ ಗ್ರಾಮಕ್ಕೆ ಒಂದಷ್ಟು ಒಳ್ಳೆಯ ಕೆಲಸ ಮಾಡಬೇಕು, ನನ್ನ ಹುಟ್ಟೂರಿಗೆ ಏನಾದರೂ  ಮಾಡಬೇಕು ಎಂಬ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಅದೇ ರೀತಿ ಮಹದೇವಪ್ಪ ಅವರು ಸ್ವಗ್ರಾಮಕ್ಕೆ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ, ಈ ಹಿಂದೆ ಲೋಕೋಪಯೋಗಿ ಸಚಿವರಾಗಿದ್ದಾಗ ಅನೇಕ ರಸ್ತೆಗಳು ಸೇತುವೆ ಮಾಡಿದ್ದಾರೆ ಗಬ್ಬುನಾರುತ್ತಿದ್ದ ಸ್ಥಳವನ್ನು ಉದ್ಯಾನವನ ನಿರ್ಮಾಣ ಮಾಡಿ ಈ ಗ್ರಾಮದ ಜನರಿಗೆ ಕೊಡುಗೆ ನೀಡಿದ್ದಾರೆ ಎಂದು ಸಚಿವರನ್ನು ಕೊಂಡಾಡಿದರು.

ಈಗಾಗಲೇ ಈ ಭಾಗದಲ್ಲೇ ಫಿಲ್ಮ್ ಸಿಟಿ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಹದಿನಾರು ಗ್ರಾಮವು ಕೂಡ ಒಂದು ಪ್ರವಾಸಿತಾನವಾಗಲಿದೆ. ಸುಸಜ್ಜಿತವಾದ ದೇವಾಲಯವನ್ನು ಊರಿನ ಜನರು ಸ್ವಚ್ಛವಾಗಿ ಕಾಪಾಡಿಕೊಂಡು ಹೋಗಬೇಕು. ನಾವು ಇದೇ ರೀತಿ ಇನ್ನೂ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ನಮ್ಮ ಗ್ರಾಮಕ್ಕೆ ಮಾಡುತ್ತೇವೆ, ಏನೇ ಮಾಡಿದರೂ ಹುಟ್ಟೂರಿನ ಋಣ ತೀರಿಸಲು ಆಗದು ಎಂದು ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಸ್.ವಿಷ್ಣುವರ್ಧನ್, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಎಸ್. ಯುಕೇಶ್ ಕುಮಾರ್, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶೇಖ್ ತನ್ವೀರ್ ಅಸೀಫ್, ಅಪರ ಜಿಲ್ಲಾಧಿಕಾರಿಗಳಾದ ಡಾ. ಪಿ.ಶಿವರಾಜು, ಮೈಸೂರು ಮೃಗಾಲಯದ ಅಧ್ಯಕ್ಷರಾದ ರಂಗಸ್ವಾಮಿ,  ಹದಿನಾರು ಗ್ರಾಮಪಂಚಾಯಿತಿಯ ಅಧ್ಯಕ್ಷರಾದ ಸಣ್ಣತಾಯಮ್ಮ ,ಸೇರಿಂದತೆ  ಹದಿನಾರು ಗ್ರಾಮದ ಮುಖಂಡರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Key words: adopt, principles, Mahadeshwara,Minister, Dr. H. C. Mahadevappa