ಸಚಿವ ಡಾ.ಹೆಚ್.ಸಿ.ಮಹದೇವಪ್ಪ ನೇತೃತ್ವದಲ್ಲಿ SCP/ TSP ಅನುದಾನದ ಹಂಚಿಕೆ ಕುರಿತ ನೋಡಲ್ ಅಧಿಕಾರಿಗಳ ಸಭೆ

ಬೆಂಗಳೂರು, ಜುಲೈ 26, 2023 (www.justkannada.in): ಬೆಂಗಳೂರಿನ ವಿಕಾಸಸೌಧದಲ್ಲಿ ಮಾನ್ಯ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಹೆಚ್.ಸಿ.ಮಹದೇವಪ್ಪನವರ ನೇತೃತ್ವದಲ್ಲಿ ಇಲಾಖೆಯ ಅಡಿಯಲ್ಲಿ ಬರುವ SCP/ TSP ಅನುದಾನದ ಹಂಚಿಕೆಯ ಕುರಿತಂತೆ ಜರುಗಿದ ನೋಡಲ್ ಅಧಿಕಾರಿಗಳ ಸಭೆಯು ಜರುಗಿತು.

ಈ ಹಿಂದಿನ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದ ಅವಧಿಯಲ್ಲಿ ರೂಪಿಸಲಾದ SCP/TSP ಕಾಯ್ದೆಯ ಉದ್ದೇಶಕ್ಕೆ ಅನುಗುಣವಾಗಿ ಎಲ್ಲಾ ಇಲಾಖೆಗಳಲ್ಲಿ ಯಾವ ರೀತಿ ಅನುದಾನವನ್ನು ಬಳಸಿಕೊಳ್ಳಲಾಗುತ್ತಿದೆ. ಪ್ರಗತಿಯ ಸ್ಥಿತಿಗತಿ ಏನಾಗಿದೆ ಮತ್ತು ಪ್ರಗತಿಯ ಹಾದಿಯಲ್ಲಿ ಇಲಾಖೆಗಳು ಏನಾದರೂ ಕೊರತೆಗಳನ್ನು ಎದುರಿಸುತ್ತಿವೆಯೇ? ಎಂಬ ವಿಷಯಗಳ ಕುರಿತು ಮಾನ್ಯ ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಿದರು

ಸಭೆಯ ಆರಂಭದಲ್ಲೇ 7ಡಿ ಅನ್ನು ರದ್ದುಪಡಿಸಿರುವ ಸಂಗತಿಯನ್ನು ಎಲ್ಲಾ ಅಧಿಕಾರಿಗಳೂ ಗಮನದಲ್ಲಿ ಇಟ್ಟುಕೊಳ್ಳಬೇಕು, ಎಂದು ತಿಳಿಸಿದ ಸಚಿವರು ಇಲಾಖಾವಾರು ಉಪಸ್ಥಿತರಿದ್ದ ಅಧಿಕಾರಿಗಳಿಗೆ SCP/ TSP ಅನುದಾನವನ್ನು ಬೇರೆ ಉದ್ದೇಶಗಳಿಗೆ ಬಳಸದೇ ಕೇವಲ ಪರಿಶಿಷ್ಟ ಜಾತಿ ಮತ್ತು ಪಂಗಡದ ಏಳಿಗೆಗೆ ಮಾತ್ರ ಬಳಸಬೇಕು ಎಂದು ತಿಳಿಸಿದರು.

ಜಲಜೀವನ್ ಮಿಷನ್ ನಲ್ಲಿ ಸಾಮಾನ್ಯವಾಗಿ  ಕೇಂದ್ರ ಸರ್ಕಾರದ 50% ಹಣ ಮತ್ತು ರಾಜ್ಯ ಸರ್ಕಾರದ 50% ಹಣ ಇದ್ದು ಈ ಪೈಕಿ ಜಲಜೀವನ್ ಮಿಷನ್ ನಲ್ಲಿ ರಾಜ್ಯದ ಹಣದ ಪಾಲು ಹೆಚ್ಚಾಗಿದ್ದು,  ಜನವರಿ ವೇಳೆಗೆ ಕೇಂದ್ರದಿಂದ ಅಗತ್ಯ ಅನುದಾನ ಪಡೆಯಬೇಕು. ಇಲ್ಲವಾದಲ್ಲಿ ಹೆಚ್ಚುವರಿಯಾಗಿ ನೀಡಲಾಗುತ್ತಿರುವ ಹಣವನ್ನು ಹಿಂಪಡೆಯಲಾಗುವುದು ಎಂದು ಸಚಿವರು ತಿಳಿಸಿದರು.

ಮೂಲಭೂತ ಸೌಕರ್ಯಗಳಾದ ರಸ್ತೆಗಳ ವಿಷಯದಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಅದರ  ಗುಣಮಟ್ಟದ ಅವಧಿ 50 ವರ್ಷ ಇರಬೇಕು. ಹಾಗಿದ್ದಾಗ ಮಾತ್ರ ಪದೇ ಪದೇ ರಸ್ತೆಗಳ ಮೇಲೆ ಅನುದಾನವನ್ನು ಬಳಸುವುದು ತಪ್ಪುತ್ತದೆ ಮತ್ತು ಆ ಅನುದಾನವನ್ನು ಇತರೆ ಕೆಲಸಗಳಿಗೆ ಬಳಸಬಹುದು ಎಂದು ಸಚಿವರು ಅಭಿಪ್ರಾಯಪಟ್ಟರು.

ರಾಜ್ಯದ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿ  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಕಡ್ಡಾಯವಾಗಿ 100 ದಿನಗಳ ನರೇಗಾ ಕೆಲಸವನ್ನು ನೀಡಬೇಕು . ಆಗ ಅವರ ಬದುಕಲ್ಲಿ ಒಂದಷ್ಟು ಧನಾತ್ಮಕ ಬದಲಾವಣೆ ತರಬಹುದು ಎಂದರು.

ಇದೇ ವೇಳೆ ಉನ್ನತ ಶಿಕ್ಷಣ ಇಲಾಖೆಯಲ್ಲಿ  SCP/TSP ಕಾಯ್ದೆಯಡಿ ಬಳಸದೇ ಇರುವ ಅನುದಾನದ ಬಳಕೆಗೆ ಸೂಕ್ತ ಪ್ರಾಶಸ್ತ್ಯ ನೀಡಬೇಕು ಮತ್ತು ಹಾಸ್ಟೆಲ್ ಕಾಲೇಜುಗಳ ಮೂಲಸೌಕರ್ಯದ ಅಭಿವೃದ್ದಿಗೆ ಒತ್ತು ನೀಡಿ ಶಿಕ್ಷಣ ಕ್ಷೇತ್ರವನ್ನು ಬಲಪಡಿಸಬೇಕು ಎಂದು ಸಚಿವರು ಕಟ್ಟುನಿಟ್ಟಾಗಿ ಸೂಚಿಸಿದರು.

ಇನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಮಕ್ಕಳ ಶಾಲಾ ನೊಂದಣಿ ಪ್ರಮಾಣವು ನೆರೆಯ ರಾಜ್ಯಗಳಿಗಿಂತ ಕಡಿಮೆ ಇದ್ದು ನೊಂದಣಿಯ ಪ್ರಮಾಣವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಇದೇ ವೇಳೆ ಆರ್ ಟಿ ಇ ಶಿಕ್ಷಣ ಕಾಯ್ದೆ ಅಡಿಯಲ್ಲಿ ಈಗ ಇರುವ 1 ರಿಂದ 8 ನೇ ತರಗತಿ ಶಿಕ್ಷಣದ ಪ್ರಮಾಣವನ್ನು 9 ರಿಂದ 10 ನೇ ತರಗತಿಗೆ ಏರಿಸಲು ಕ್ರಮ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಇದರ ಜೊತೆ ಕೃಷಿ, ಸಾರಿಗೆ, ಆಹಾರ ಮತ್ತು ನಾಗರೀಕ ಪೂರೈಕೆ ಹಾಗೂ ಇನ್ನೂ ಹಲವು ಇಲಾಖೆಗಳಲ್ಲಿ ಆಗುತ್ತಿರುವ ಪ್ರಗತಿಯ ಮಟ್ಟವನ್ನು ಪರಿಶೀಲಿಸಿದ ಸಚಿವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ  ಅನುದಾನದ ಹಂಚಿಕೆಯು ಸಮರ್ಪಕವಾಗಿ ಬಳಕೆಯಾಗಬೇಕು, ಇಲ್ಲದೇ ಹೋದಲ್ಲಿ ಆ ಅನುದಾನವನ್ನು ಹಿಂಪಡೆಯಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.