ಮೈಸೂರು,ಡಿಸೆಂಬರ್,22,2025 (www.justkannada.in): ಇಂದು ನಡೆದ ಮೈಸೂರು ಅಭಿವೃದ್ದಿ ಪ್ರಾಧಿಕಾರದ ಸಭೆಯಲ್ಲಿ ಖಾಸಗಿ ಟ್ರಸ್ಟ್ ಗಳಿಗೆ ಹೊಸ ವರ್ಷದ “ಬಂಪರ್ ಗಿಫ್ಟ್” ನೀಡಲಾಗಿದೆ.
ಸಭೆಯಲ್ಲಿ ಹೊಸ ನಿವೇಶನಗಳ ನಿರ್ಮಾಣ, ಕ್ಷಿಪ್ರ ಕಾರ್ಯಪಡೆ ರಚನೆ ಮಾಡುವುದು. ಮುನ್ನೂರು ಸಿಎ ನಿವೇಶನಗಳಿಗೆ ಅರ್ಜಿ ಆಹ್ವಾನ ಮಾಡುವ ಕುರಿತು ನಿರ್ಣಯ ಕೈಗೊಳ್ಳಲಾಗಿದ್ದು ಸಭೆಯಲ್ಲಾದ ತೀರ್ಮಾನ ಈ ಕೆಳಕಂಡಂತಿದೆ.
ಪ್ರಾಧಿಕಾರದ ವತಿಯಿಂದ ಮೈಸೂರು ತಾಲ್ಲೂಕು, ಇಲವಾಲ ಹೋಬಳಿ, ಬೊಮ್ಮೇನಹಳ್ಳಿ, ನಾಗವಾಲ, ಕಮ್ಮರಹಳ್ಳಿ ಮತ್ತು ದೊಡ್ಡಮಾರಗೌಡನಹಳ್ಳಿ ಗ್ರಾಮಗಳ ವ್ಯಾಪ್ತಿಯ ವಿವಿಧ ಸರ್ವೆ ನಂಬರ್‌ಗಳನ್ನು ಗುರುತಿಸಿ ಹೊಸ ಬಡಾವಣೆ ನಿರ್ಮಾಣ ಮಾಡಲು ಉದ್ದೇಶಿಸಿದೆ. ಅದರಂತೆ ಮೈಸೂರು ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ-2024ರ ಕಲಂ 40 ಮತ್ತು 41 ಹಾಗೂ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ಭೂಸ್ವಾಧೀನಪಡಿಸಿಕೊಂಡಿರುವುದಕ್ಕೆ ಪರಿಹಾರಗಳ ಬದಲಿಗೆ ನಿವೇಶನ ಹಂಚಿಕೆ) ನಿಯಮಗಳು-2009 ಮತ್ತು (ತಿದ್ದುಪಡಿ) ನಿಯಮಗಳು-2015ರ ನಿಯಮಗಳನ್ವಯ ಸದರಿ ಗ್ರಾಮಗಳ ರೈತರು/ಭೂಮಾಲೀಕರುಗಳ ಸಹಭಾಗಿತ್ವದಲ್ಲಿ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಂಡು ಶೇ.50:50 ರ ಅನುಪಾತದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡುವ ಸಂಬಂಧ ಯೋಜನೆಯನ್ನು ರೂಪಿಸಲಾಗಿದೆ. 
ಪ್ರಾಧಿಕಾರದ ವತಿಯಿಂದ ರಚಿಸಲಾಗುತ್ತಿರುವ ಹೊಸ ಬಡಾವಣೆ ಸಂಬಂಧ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿ ಸ್ಥಳೀಯವಾಗಿ ವ್ಯಾಪಕ ಪ್ರಚಾರ ಮಾಡುವುದು, ಸಂಬಂಧಪಟ್ಟ ಭೂಮಾಲೀಕರನ್ನು ಸಂಪರ್ಕಿಸಿ ಯೋಜನೆಗೆ ಜಮೀನು ನೀಡುವ ಬಗ್ಗೆ ಆಸಕ್ತ ಭೂಮಾಲೀಕರಿಂದ ಒಪ್ಪಿಗೆ ಪತ್ರವನ್ನು ಪಡೆದು ತದನಂತರ ಯೋಜನೆ ಅನುಮೋದನೆ ಪಡೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳಲಾಗಿದೆ.
ಪ್ರಾಧಿಕಾರದ ವ್ಯಾಪ್ತಿಯಲ್ಲಿನ ಅನಧಿಕೃತ ಚಟುವಟಿಕೆಗಳು ಹಾಗೂ ಅತಿಕ್ರಮ ಪ್ರವೇಶ ತಡೆಗಳಂತಹ ತುರ್ತು ಪರಿಸ್ಥಿತಿಯಲ್ಲಿ ಪ್ರಾಧಿಕಾರದ ಅಧಿಕಾರಿಗಳಿಗೆ/ನೌಕರರಿಗೆ ಸಹಾಯವಾಗುವಂತೆ ಹೊರಗುತ್ತಿಗೆ ಆಧಾರದ ಮೇಲೆ ಕ್ಷಿಪ ಕಾರ್ಯಪಡೆ ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ನಗರದಾದ್ಯಂತ 300 CA ನಿವೇಶನಗಳ ವಿತರಣೆಗೆ ಮುಂದಾದ ಮೈಸೂರು ಅಭಿವೃದ್ಧಿ ಪ್ರಾಧಿಕಾರ. ಮುಂದಿನ ವಾರ ಈ ಸಂಬಂಧ ಅಧಿಸೂಚನೆ ಹೊರಡಿಸಲಾಗುವುದು. ಎಲ್ಲಾ ಖಾಸಗಿ ಟ್ರಸ್ಟ್‌ಗಳು ಅರ್ಜಿ ಸಲ್ಲಿಸಬಹುದು. ಇಂದಿನ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗಿದೆ.
Key words: MDA, Meeting, Bumper Gift, Private Trusts







