‘ಬೆಳ್ಳಿ ಮಹೋತ್ಸವ’ದ ನೆಪದಲ್ಲಿ ಕೆಎಸ್ಒಯುವಿನಲ್ಲಿ ನಡೆಯುತ್ತಿದೆ ಅಕ್ರಮಗಳ ‘ಹಬ್ಬ’: ವಿಶ್ರಾಂತ ಕುಲಪತಿ ಆರೋಪ

ಮೈಸೂರು, ಆಗಸ್ಟ್ 22, 2021 (www.justkannada.in): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಸಾಕಷ್ಟು ಅಕ್ರಮಗಳು ನಡೆಯುತ್ತಿದ್ದು, ಈ ಕುರಿತು ಸಮಗ್ರ ತನಿಖೆ ನಡೆಯಬೇಕಿದೆ ಎಂದು ವಿಶ್ರಾಂತ ಕುಲಪತಿ ಡಾ.ಎನ್.ಎಸ್.ರಾಮೇಗೌಡ ಒತ್ತಾಯಿಸಿದ್ದಾರೆ.  ಜತೆಗೆ ಈ ಕುರಿತು ವಿಚಾರಣೆ ನಡೆಸಿದರೆ ನಾನೂ ಕೂಡ ಹಲವಾರು ಸಾಕ್ಷ್ಯಗಳನ್ನು ಒದಗಿಸುವುದಾಗಿ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮುಕ್ತ ವಿವಿ ನಡೆದು ಬಂದ ಹಾದಿ ಹಾಗೂ ಸದ್ಯ ನಡೆಯುತ್ತಿವೆ ಎನ್ನಲಾದ ನಿಯಮ ಉಲ್ಲಂಘನೆ, ಅಕ್ರಮಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಕೈಬರಹದ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ರಾಮೇಗೌಡ ಅವರ ಆರೋಪ, ದೂರುಗಳು ಹಾಗೂ ಸಾರಾಂಶ ಕೆಳಕಂಡಂತಿದೆ…

2021ಕ್ಕೆ ಕರ್ನಾಟ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ25 ತುಂಬಿ ರಾಜ್ಯಮಟ್ಟದ ಸಂಸ್ಥೆಯಾಗಿದೆ. ಈ ಸಂಸ್ಥೆಯಲ್ಲಿ ನಾನು ನಾಲ್ಕು ವರ್ಷ ಕುಲಪತಿಯಾಗಿ ಹಲವಾರು ಪ್ರಗತಿಪರ ಕೆಲಸಗಳೂ ಸೇರಿ ಇಗ್ನೋನಲ್ಲಿ 15 ವರ್ಷ ಕೆಲಸ ಮಾಡಿದ ಅನುಭವದ ಮೇಲೆ ಕರಸ್ಪಾಂಡೆಟ್ ಸಿಸ್ಟಂ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ದೂರ ಶಿಕ್ಷಣ ಆಗಿ ಪರಿವರ್ತಿಸಿದ ಅನುಭವವಿದೆ. ಇಂತಹ ಸಂದರ್ಭದಲ್ಲಿ ಕೆಲವು ಅನಾರೋಗ್ಯಕರ ಹಾಗೂ ಕೆಎಸ್‌ಒಯು ಆಕ್ಟ್‌ಗೆ ವಿರುದ್ಧದದ ಕಾರ್ಯಕ್ರಮಗಳು ಚಾಲ್ತಿಯಲ್ಲಿರುವುದನ್ನು ಪತ್ರದ ಮೂಲಕ ಬರೆಯುತ್ತಿದ್ದೇನೆ.

2015ರಲ್ಲಿ ಕೆಎಸ್‌ಒಯುನ ಡಿಗ್ರಿಗಳಿಗೆ ಮಾನ್ಯತೆ ರದ್ದುಗೊಳಿಸಿದ ಯುಜಿಸಿಯ ಕ್ರಮ ವಿಷಯ ಈಗಿದ್ದಾಗೂ ಇಂದಿನ ಕುಲಪತಿಗಳು ಹೊರ ರಾಜ್ಯದ ಸುಮಾರು 77ಸಾವಿರ ಅಂದಿನ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರದ ದಂಧೆಯಲ್ಲಿ ವಿತರಿಸುತ್ತಿದ್ದ ಕಾರ್ಯಕ್ಕೆ ಮಧ್ಯಪ್ರವೇಶಿಸಿ ವಿತರಣೆ ನಿಲ್ಲಿಸಿದ ಸುದ್ದಿ ವರದಿಯಾಗಿದೆ.

ಮುಕ್ತ ವಿವಿ ಆಕ್ಟ್ ವಿರುದ್ಧ ಸುಮಾರು 50 ಜನ ಹೊಸ ಪ್ರಾಧ್ಯಾಪಕರ್ನು ನೇಮಿಸಲಾಗುತ್ತಿದೆ. ವಿಶ್ವವಿದ್ಯಾನಿಲಯದಲ್ಲಿ ಸಾಕಷ್ಟು ವರ್ಕ್ ಲೋಡ್, ಸೆಮ್‌ಗಳ ಬರವಣಿಗೆ, ಸ್ಟಡಿ ಸೆಂಟರ್, ರೀಜನಲ್ ಸೆಂಟರ್ ನಿರ್ವಹಣೆ ಸೇರಿ ಬೇರೆ ಬೇರೆ ವಿವಿಗಳಿಗೆ ವರ್ಗಾವಣೆ ಮಾಡುವ ಪ್ರಯತ್ನವೂ ನಡೆದಿತ್ತು. ಡಾ.ರಂಗಪ್ಪನವರ ಕಾಲದಲ್ಲಿ ಒಂದೂವರೆ ಲಕ್ಷ ವಿರ್ದ್ಯಾರ್ಥಿಗಳು ಇದ್ದು, ಇದನ್ನೆಲ್ಲವನ್ನೂ 50 ಪ್ರಾಧ್ಯಾಪಕರು ಜವಾಬ್ದಾರಿ ನಿರ್ವಹಿಸುತ್ತಿದ್ದರು. ಆದರೀಗ ಈಗ ವಿದ್ಯಾರ್ಥಿಗಳ ಸಂಖ್ಯೆ ಒಟ್ಟು 50 ಸಾವಿರ ಇಲ್ಲವೆಂದು ತಿಳಿದುಬಂದಿದೆ. ಹೀಗಿದ್ದಲ್ಲಿ, ಹೊಸದಾಗಿ ಸುಮಾರು 40ರಿಂದ 50 ಪ್ರಾಧ್ಯಾಪಕರನ್ನು ಐದು ವರ್ಷಗಳ ಅವಧಿಗೆ ನೇಮಿಸಿದ್ದಾರೆಂದು ತಿಳಿದುಬಂದಿದೆ. ಇಂತಹ ನೇಮಕಾತಿಗೆ ಐದು ವರ್ಷಗಳ ಅವಧಿಗೆ (ತಾತ್ಕಾಲಿಕ) ಆಕ್ಟ್‌ನಲ್ಲಿ ಅವಕಾಶವಿಲ್ಲ. ಆದರೆ, ತರ್ತು ಸಮಯದಲ್ಲಿ ಆರು ತಿಂಗಳ ಅವಧಿಗೆ ಕಾರಣ ಸಹಿತ ನೇಮಕ ಮಾಡಲು ಅವಕಾಶವಿದೆ. ಆದರೆ, ಈಗ ಅಕ್ರಮ ನೇಮಕಾತಿಗಳ ದುಂದು ವೆಚ್ಚದಿಂದ ಮುಂದೆ ಇವರಿಗೆ ತೊಂದರೆಗಳಾಗಬಹುದಾದ ವಿಷಯವೂ ಸೇರಿದೆ.

ಸ್ಟಡಿ ಸೆಂಟರ್‌ಗಳು ಕೆಲಸವಿಲ್ಲದೆ ಸೊರಗುತ್ತಿವೆ. ಆಕ್ಟ್ ಪ್ರಕಾರ ಪ್ರತಿ ಸ್ಟಡಿ ಸೆಂಟರ್‌ನ ವಿದ್ಯಾರ್ಥಿಗಳಿಗೆ ಪ್ರವೇಶಾತಿ, ಟೀಚಿಂಗ್, ಟೆಸ್ಟ್ ಮತ್ತು ಪರೀಕ್ಷೆ ಎಲ್ಲವೂ ಆಯಾಯ ಸ್ಟಡಿ ಸೆಂಟರ್‌ನಲ್ಲೇ ಅಲ್ಲಿನ ಪ್ರಾಧ್ಯಾಪಕರಿಗೆ ನಿಗದಿತ ಪೇಮೆಂಟ್ ಮಾಡಿ ಅವರಿಂದ ಸೇವೆ ತಗೆದುಕೊಳ್ಳಬೇಕು. ಅದನ್ನು ಬಿಟ್ಟು ವಿವಿಯ ಪ್ರಾಧ್ಯಾಪಕರಿಂದ ಸ್ಟಡಿ ಸೆಂಟರ್‌ನ ಕೆಲಸಗಳನ್ನು ಮಾಡಿಸಿ ಅವರಿಗೆ ಸ್ಟಡಿ ಸೆಂಟರ್ ವರ್ಕ್ ಲೋಡ್ ತೋರಿಸಿ ಅವರ ಸಂಬಳ ಸಾರಿಗೆ ನೀಡುತ್ತಿದ್ದಾರೆ.  ಈಗಿನ ಕುಲಪತಿಗಳು ಉಪಾಧ್ಯಾಯರುಗಳಿಗೆ ಅನುಸರಿಸುತ್ತಿರುವ ಕ್ರಮ ವಿಚಾರಣೆಗೆ ಅರ್ಹವಾದದ್ದು. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಸರಕಾರ ಹಾಗೂ ಯುಜಿಸಿಗೆ ತಿಳಿಸಲು ನನ ಬಳಿ ಹಲವಾರು ವಿಷಯಗಳಿವೆ. ಮುಕ್ತವಿವಿಯ ಬೆಳ್ಳಿಹಬ್ಬದ ಮಹೋತ್ಸವದ ಹೆಸರಿನಲ್ಲಿ ಹಲವಾರು ಅಕ್ರಮಗಳು ನಡೆಯುತ್ತಿದೆಂದು ತಿಳಿದುಬಂದಿದ್ದು, ಈ ಬಗ್ಗೆ ತನಿಖೆ ನಡೆಸಿದರೆ ಬಹಳಷ್ಟು ವಿಷಯಗಳನ್ನುತಿಳಿಸಬಲ್ಲೆ.