ಕ್ರೀಡಾಪಟುಗಳಿಗೆ ಶೇ.2 ರಷ್ಟು ಮೀಸಲಾತಿ ಸೇರಿ ಸಚಿವ ಸಂಪುಟ ಸಭೆಯ ಹಲವು ನಿರ್ಧಾರ.

ಬೆಂಗಳೂರು, ಫೆಬ್ರವರಿ,1,2024(www.justkannada.in):  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ  ಇಂದು ಸಚಿವ ಸಂಪುಟ ನಡೆದಿದ್ದು ಕ್ರೀಡಾಪಟುಗಳಿಗೆ ಶೇ.2 ರಷ್ಟು ಮೀಸಲಾತಿ ಸೇರಿ ಹಲವು ನಿರ್ಣಯಗಳನ್ನ ಕೈಗೊಳ್ಳಲಾಗಿದೆ.

ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು ಹೀಗಿವೆ.

ಕರ್ನಾಟಕ ಸಿವಿಲ್ ಸೇವಾ(ಸಾಮಾನ್ಯ ನೇಮಕಾತಿ)(ತಿದ್ದುಪಡಿ)ನಿಯಮಗಳು, 2024ಕ್ಕೆ ಸಮಬಂಧಿಸಿದಂತೆ ಗೆಜೆಟ್ ಅಧಿಸೂಚನೆ ಹೊರಡಿಸಿದ ನಂತರ ಬರುವ ಆಕ್ಷೇಪಣೆಗಳನ್ನು  ಪರಿಗಣಿಸಿದ ನಂತರ ರಾಜ್ಯ ಸಿವಿಲ್ ಸೇವೆಗಳ ನೇರ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇಕಡ.2 ರಷ್ಟು ಮೀಸಲಾತಿ ನೀಡುವ ಬಗ್ಗೆ ಸಚಿವ ಸಂಪುಟ ನಿರ್ಧರಿಸಿತು.

ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಯ ಪರಿಷ್ಕೃತ ಅಂದಾಜು ಮೊತ್ತ ರೂ.142.47 ಕೋಟಿ ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.

ರಾಯಚೂರು ವಿಶ್ವವಿದ್ಯಾಲಯ ಆವರಣದಲ್ಲಿ ‘ಕಲ್ಯಾಣ ಕರ್ನಾಟಕ ಮಾನವ ಜಿನೋಮ್ ಅಧ್ಯಯನ ಸಂಸ್ಥೆ’ ನಿರ್ಮಾಣವನ್ನು ರೂ.47.32 ಕೋಟಿಗಳ ಅಂದಾಜು ಮೊತ್ತದಲ್ಲಿ ಕೆಕೆಆರ್ ಡಿ ಬಿ ಅನುದಾನದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.

2023-24 ನೇ ಸಾಲಿಗೆ 93 ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಲ್ಲಿನ 104 ‘ಕರ್ನಾಟಕ ಪಬ್ಲಿಕ್ ಶಾಲೆ’ ಗಳಿಗೆ 60 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕಲಿಕಾ ವಾತಾವರಣ ಅಭಿವೃದ್ಧಿಗೆ ಅನುಮೋದನೆ ನೀಡಲಾಯಿತು.

ಬೈಯ್ಯಪ್ಪನಹಳ್ಳಿ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಅನ್ನು ಸಂಪರ್ಕಿಸಲು ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು 263 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ  ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.

ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲ್ಲೂಕಿನ ಉಚ್ಛಗಾಂವ್ ಹಾಗೂ ಸಂತಿಬಸ್ತವಾಡ ಹೋಬಳಿಯ 20 ಕೆರೆಗಳನ್ನು 287.55 ಕೋಟಿ ರೂ.ಗಳಲ್ಲಿ ನಿರ್ಮಿಸುವ ಯೋಜನಾ ವರದಿಗೆ ಹಾಗೂ ಹಿರೇಬಾಗೇವಾಡಿಯ 61 ಕೆರೆಗಳನ್ನು ತುಂಬಿಸುವ ‘ಬಾಗೇವಾಡಿ ಕೆರೆ ತುಂಬಿಸುವ ಯೋಜನೆ’ಯ 519.10 ಕೋಟಿಗಳ ಅಂದಾಜು ಮೊತ್ತದ ಪರಿಷ್ಕೃತ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ರಾಯಚೂರು ತಾಲ್ಲೂಕಿನ ಚಿಕ್ಕಮಂಚಾಲಿ ಗ್ರಾಮದ ಹತ್ತಿರ ತುಂಗಭದ್ರಾ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕಾಗಿ 158.10 ಕೋಟಿ ರೂ.ಗಳ ಯೋಜನಾ ವರದಿಗೆ ಅನುಮೋದನೆ ನೀಡಲಾಗಿದೆ.

ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಹೊಸ ವೈದ್ಯಕೀಯ ಕಾಲೇಜು, ಬಾಲಕ ಬಾಲಕಿಯರ ಹಾಸ್ಟೆಲ್, ಬೋಧಕ ಮತ್ತು ಬೋಧಕೇತರ ಹಾಸ್ಟೆಲ್, ಸಿಬ್ಬಂದಿಗಳ ವಸತಿ ನಿಲಯಗಳ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪರಿಷ್ಕೃತ ಅಂದಾಜು ಮೊತ್ತ 499 ಕೋಟಿ ರೂ.ಗಳಿಗೆ ಅಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ರಾಜ್ಯದ 6 ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಅಂದರೆ ಮಹತ್ವಾಕಾಂಕ್ಷಿ ತಾಲ್ಲೂಕು (ರಾಯಚೂರು, ಬಳ್ಳಾರಿ, ವಿಜಯಪುರ)ಗಳಲ್ಲಿ 52.81 ಕೋಟಿ ರೂ. ವೆಚ್ಚದಲ್ಲಿ ಮತ್ತು ಮಹತ್ವಾಕಾಂಕ್ಷಿ ತಾಲ್ಲೂಕುಗಳಲ್ಲದ (ಬೆಂಗಳೂರಿನ ಹೊಸೂರು ರಸ್ತೆ, ಕಲಬುರಗಿ, ಮೈಸೂರು) ಸರ್ಕಾರಿ ಕೈಗಾರಿಕಾ ಸಂಸ್ಥೆಗಳಲ್ಲಿ ರೂ. 47.18 ಕೋರಿ ಗಳ ವೆಚ್ಚದಲ್ಲಿ ಉನ್ನತೀಕರಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ , ಕೆಲ ಮೂಲಭೂತ ಸೌಕರ್ಯ ಕಾಮಗಾರಿಗಳ 120 ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಅನುಮತಿ ನೀಡಿ, ದಿನಾಂಕ: 12-01-2024 ರಂದು ಹೊರಡಿಸಿದ ಸರ್ಕಾರಿ ಆದೇಶಕ್ಕೆ ಘಟನೋತ್ತರ ಅನುಮೋದನೆ ನೀಡಲಾಯಿತು.

ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆ ಆವರಣಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ , ಲಾಂಡ್ರಿ ಕಟ್ಟಡ, ಎಸ್ ಟಿ ಪಿ ಉನ್ನತೀಕರಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಒಟ್ಟು 150 ಕೋಟಿ ರೂ.ಗಳ ಅಂದಾಜು ಮೊತ್ತದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ವೈದ್ಯಕೀಯ ಕಾಲೇಜು, ಬಾಲಕ ಬಾಲಕಿಯರ ಹಾಸ್ಟೆಲ್, ಬೋಧಕ ಮತ್ತು ಬೋಧಕೇತರ ಹಾಸ್ಟೆಲ್, ಸಿಬ್ಬಂದಿಗಳ ವಸತಿ ನಿಲಯಗಳ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪರಿಷ್ಕೃತ ಅಂದಾಜು ಮೊತ್ತ 455 ಕೋಟಿ ರೂ.ಗಳಿಗೆ ಅಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಗೊಂಡಿರುವ 110 ಹಳ್ಳಿಗಳಲ್ಲಿ ಬಿಟ್ಟುಹೋಗಿರುವ ಪ್ರದೇಶಗಳಿಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ 2ನೇ ಹಂದಲ್ಲಿ 208.45 ಕೋಟಿ ಅಂದಾಜು ಮೊತ್ತದ ಕುಡಿಯು ನೀರಿನ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ರಾಜ್ಯದ ಸಹಕಾರ ಸಂಘಗಳ ಮೂಲಕ ರೈತರು ಸಾಲ ಪಡೆದು 31-12-2023 ಕ್ಕೆ ಸುಸ್ತಿಯಾಗಿರುವ  ಮಧ್ಯಾಮಾವಧಿ, ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳ ಅಸಲು ಪಾವತಿಸಿದಲ್ಲಿ ಅದರ ಮೇಲಿನ ಒಟ್ಟು 440.20 ಕೋಟಿ ರೂ.ಗಳ ಬಡ್ಡಿ ಮನ್ನಾ ಮಾಡುವ ಸಂಬಂಧ ಹೊರಡಿಸಿದ್ದ 20-01-2024ರ ಸರ್ಕಾರಿ ಅದೇಶಕ್ಕೆ ಘಟನೋತ್ತರ ಅನುಮೋದನೆಯನ್ನು ನೀಡಲಾಗಿದೆ.

Key words: Many -decisions – Cabinet -meeting