ಮುಂಗಾರುಪೂರ್ವ ಸಂಕಷ್ಟದಲ್ಲಿ ರೈತರು

ಬೆಂಗಳೂರು:ಜೂ-7: ಮುಂಗಾರುಪೂರ್ವ ಮಳೆ ಕೊರತೆಯಿಂದ ಬೆಳೆಗಳು ಬಾಡುತ್ತಿದ್ದು, ರೈತ ಕಂಗಾಲಾಗಿದ್ದಾನೆ. ಕಡೇಪಕ್ಷ ಮುಂಗಾರು ಮಳೆಯಾದರೂ ಬರಬಹುದೆಂಬ ನಿರೀಕ್ಷೆಯಲ್ಲಿ ರೈತ ಆಕಾಶದತ್ತ ಚಿತ್ತಹರಿಸಿದ್ದಾನೆ.

ಕೃಷಿ ಚಟುವಟಿಕೆಗಳ ಆರಂಭ, ಅಂತರ್ಜಲ ಮತ್ತು ಮಣ್ಣಿನ ತೇವಾಂಶ ಸಂರಕ್ಷಣೆ, ಬರ ತಡೆ ಮತ್ತು ಮುಂಗಾರು ತುಸು ವಿಳಂಬವಾದರೂ ಜನ-ಜಾನುವಾರುಗಳ ರಕ್ಷಣೆಗೆ ಮುಂಗಾರುಪೂರ್ವ ಮಳೆ ಅಗತ್ಯ. ಆದರೆ, ಈ ಮಳೆ ಕಡಿಮೆಯಾಗಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ಮುಂಗಾರು ಮಳೆಯಾದರೂ ನಮ್ಮ ಕೈ ಹಿಡಿಯಬಹುದೆಂದು ರೈತ ಹೊಲ ಹದನು ಮಾಡಲು ಸಜ್ಜಾಗುತ್ತಿದ್ದಾನೆ. ಇನ್ನೊಂದೆಡೆ ಸರ್ಕಾರ ರೈತನ ನೆರವಿಗೆ ಧಾವಿಸಲು ರಸಗೊಬ್ಬರ ಮತ್ತು ಬಿತ್ತನೆಬೀಜಗಳಿಗೆ ಬರ ಬಾರದಂತೆ ವ್ಯವಸ್ಥೆ ಮಾಡಿದೆ.

ಮಳೆ ಕೊರತೆ ಎಷ್ಟು?: ರಾಜ್ಯದಲ್ಲಿ ಮೇ 31ರ ವರೆಗಿನ 129 ಮಿ.ಮೀ. ವಾಡಿಕೆ ಮಳೆಯಲ್ಲಿ ಕೇವಲ 74 ಮಿ.ಮೀ. ಮಳೆಯಾಗಿದ್ದು, ಶೇ.42 ಮಳೆ ಕೊರತೆಯಾಗಿದೆ.

ಕುಡಿಯುವ ನೀರಿಗೂ ತತ್ವಾರ: ಮುಂಗಾರುಪೂರ್ವ ಮಳೆ ಕೊರತೆಯಿಂದ ರಾಜ್ಯದ ಜಲಾಶಯಗಳಲ್ಲಿ ನೀರಿನ ಪ್ರಮಾಣ, ಅಂತರ್ಜಲ ಮಟ್ಟ ಕುಸಿದು ಕುಡಿವ ನೀರಿಗೂ ಹಾಹಾಕಾರ ಉಂಟಾಗಿದೆ. ಮಳೆ ಬರದಿದ್ದರೆ ಬೆಂಗಳೂರಿಗೂ ಕುಡಿಯುವ ನೀರಿನ ಬಿಸಿ ತಟ್ಟಲಿದೆ. ಮುಂಗಾರು ಪೂರ್ವ ಮಳೆ ಕೊರತೆಯಿಂದ ಮೇವಿನ ಅಭಾವ ತಲೆದೋರಿದ್ದು, ಮೇವು ಬ್ಯಾಂಕ್-ಗೋಶಾಲೆಗಳಿಗೆ ದಿನೇದಿನೆ ಬೇಡಿಕೆ ಹೆಚ್ಚುತ್ತಿದೆ.

ಗೊಬ್ಬರ, ಬೀಜಕ್ಕಿಲ್ಲ ಬರ: ಮುಂಗಾರು ಬಿತ್ತನೆಗಾಗಿ 22.45 ಲಕ್ಷ ಮೆ. ಟನ್ ರಸಗೊಬ್ಬರ ಅಗತ್ಯವಿದ್ದು, ರಾಜ್ಯ ಸರ್ಕಾರ 7.93 ಲಕ್ಷ ಮೆ. ಟನ್ ರಸಗೊಬ್ಬರ ದಾಸ್ತಾನಿಟ್ಟಿದೆ. ರಾಜ್ಯದಲ್ಲಿ ಸಾಮಾನ್ಯವಾಗಿ ಜೂನ್ 2-3ನೇ ವಾರ ಬಿತ್ತನೆ ಮುಂಗಾರು ಶುರುವಾಗಲಿದ್ದು, ಬಿತ್ತನೆ ಸಮಯದಲ್ಲಿ ಕಾಂಪ್ಲೆಕ್ಸ್ ಮತ್ತು ಡಿಎಪಿ ಗೊಬ್ಬರಕ್ಕೆ ಬೇಡಿಕೆ ಹೆಚ್ಚು. ಬಿತ್ತನೆಯಾಗಿ 20-25 ದಿನಗಳ ನಂತರ ಬೆಳೆಗೆ ಮೇಲುಗೊಬ್ಬರವಾಗಿ ಕೊಡುವ ಯೂರಿಯಾ ಕೊರತೆ ಆಗದಂತೆ ಕೃಷಿ ಇಲಾಖೆ ಎಚ್ಚರವಹಿಸಿದೆ. ಸೆಪ್ಟೆಂಬರ್ ಅಂತ್ಯದವರೆಗೆ ಬಿತ್ತನೆಗೆ 6.29 ಲಕ್ಷ ಕ್ವಿಂ. ವಿವಿಧ ಬಿತ್ತನೆಬೀಜದ ಅಗತ್ಯವಿದ್ದು, ಪ್ರಸ್ತುತ 1.06 ಲಕ್ಷ ಕ್ವಿಂ. ಬಿತ್ತನೆಬೀಜ ದಾಸ್ತಾನಿದೆ. ಈಗಾಗಲೇ 11,675 ಕ್ವಿಂ. ಬಿತ್ತನೆಯಾಗಿದೆ. ರಾಜ್ಯದ 647 ರೈತ ಸಂಪರ್ಕ ಕೇಂದ್ರಗಳಲ್ಲಿ ಶೇ.50ರ ಸಬ್ಸಿಡಿ ದರದಲ್ಲಿ ಬಿತ್ತನೆಬೀಜ ಲಭ್ಯವಿದೆ.

ಉ.ಕ.ದಲ್ಲಿ ಬಿತ್ತನೆಬೀಜ ದಾಸ್ತಾನು ಇಲ್ಲ

ಉತ್ತರ ಕರ್ನಾಟಕದಲ್ಲಿ ಮುಂಗಾರು ಮಳೆ ವಿಳಂಬವಾದ್ದರಿಂದ ಆ ಭಾಗದ ರೈತ ಸಂಪರ್ಕ ಕೇಂದ್ರಗಳಿಗೆ ಬಿತ್ತನೆಬೀಜ ದಾಸ್ತಾನು ಮಾಡಿಲ್ಲ. ಮಳೆ ಬಂದ ಕೂಡಲೇ ಅಲ್ಲಿಗೂ ಬಿತ್ತನೆಬೀಜ ಪೂರೈಸಲು ಕೃಷಿ ಇಲಾಖೆ ಸಜ್ಜಾಗಿದೆ. ಮುಂಗಾರಿನಲ್ಲಿ 76.69 ಲಕ್ಷ ಹೆ. ಬಿತ್ತನೆ ಗುರಿ ಹೊಂದಿದ್ದು, ರೈತರು ಮುಂಗಾರುಪೂರ್ವ ಮಳೆ ನೆಚ್ಚಿ ಮೈಸೂರು, ಚಾಮರಾಜನಗರ, ಹಾಸನ, ಚಿಕ್ಕಮಗಳೂರು ಮತ್ತಿತರ ಕಡೆಗಳಲ್ಲಿ 5.54 ಲಕ್ಷ ಹೆ. ಬಿತ್ತನೆ ಮಾಡಿದ್ದಾರೆ.
ಕೃಪೆ:ವಿಜಯವಾಣಿ

ಮುಂಗಾರುಪೂರ್ವ ಸಂಕಷ್ಟದಲ್ಲಿ ರೈತರು
mansoon-rain-farmer-drought-rain-water-dam/