MANGALORE UNIVERSITY: ಇನ್ಮುಂದೆ ನಿವೃತ್ತರಿಗಿಲ್ಲ ಪಿಂಚಣಿ ” ಗ್ಯಾರಂಟಿ “.

ಮಂಗಳೂರು,ಜನವರಿ,13,2024(www.justkannada.in): ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ನಿವೃತ್ತಿಯಾಗಿರುವ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಪಿಂಚಣಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ.

ಹೌದು,  ಮಂಗಳೂರು ವಿವಿಯಲ್ಲಿ ಇದ್ದ 50 ಕೋಟಿ ರೂ.ಗೂ ಅಧಿಕ ಮೀಸಲು ನಿಧಿ ಕರಗಿ ಈಗ ಲಕ್ಷಕ್ಕೆ ಇಳಿದಿದೆ.ಇದರಿಂದಾಗಿ ವಿವಿಯಿಂದ ನಿವೃತ್ತಿಯಾಗಿರುವ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗೆ ಪಿಂಚಣಿ ನೀಡಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಂಗಳೂರು ವಿವಿಯಲ್ಲಿ ಆಂತರಿಕ ನಿಧಿ ಖಾಲಿಯಾಗಿದೆ. ಈ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರ, ಶಿಕ್ಷಕೇತರ ತಾತ್ಕಾಲಿಕ ಸಿಬ್ಬಂದಿ, ಹೊರಗುತ್ತಿಗೆ ಸಿಬ್ಬಂದಿಯ ವೇತನ ನೀಡಲು ಸಹ ಸಂಕಷ್ಟ ಎದುರಾಗಿದೆ. ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗೆ ಪಿಂಚಣಿ, ಗ್ರಾಚ್ಯುಟಿ, ಪರಿವರ್ತಿತ ಪಿಂಚಣಿ ಸೇರಿದಂತೆ ಹಲವು ಸೌಲಭ್ಯಗಳ ಮೊತ್ತವನ್ನು ನಿವೃತ್ತಿಯ ಸಂದರ್ಭ ನೀಡಬೇಕು. ಬಹುತೇಕ ನಿವೃತ್ತರಿಗೆ ಇದು ಸಿಗದೆ ಅಲೆದಾಡುತ್ತಿದ್ದಾರೆ. ನಿವೃತ್ತರಾಗುವ ಹಿರಿಯ ಪ್ರಾಧ್ಯಾಪಕರ 300 ಗಳಿಕೆ ರಜೆಗೆ ನಿವೃತ್ತಿಯ ದಿನ 20-23 ಲಕ್ಷ ರೂ. ನೀಡುವುದು ವಾಡಿಕೆ. ಆದರೆ ಅವರೆಲ್ಲ ಬರಿಗೈಯಲ್ಲೇ ನಿವೃತ್ತರಾಗುತ್ತಿದ್ದಾರೆ. ಲಭ್ಯ ಮಾಹಿತಿ ಪ್ರಕಾರ ಎಂಟು ಶಿಕ್ಷಕೇತರ ಸಿಬ್ಬಂದಿ, 14 ಶಿಕ್ಷಕ ಸಿಬ್ಬಂದಿಗೆ ಒಟ್ಟು 20 ಕೋಟಿ ರೂ.ಗೂ ಅಧಿಕ ಮೊತ್ತ ಪಾವತಿಯಾಗದೆ ಬಾಕಿಯಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹಾಗೆಯೇ ಕರೊನಾ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಿಗೆ ನೀಡಬೇಕಿದ್ದ ಕೋಟ್ಯಂತರ ರೂ. ಗೌರವಧನವನ್ನೂ ಬಾಕಿಯಿರಿಸಿಕೊಂಡಿದೆ. ಇತ್ತೀಚೆಗೆ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಮಂಗಳೂರು ವಿವಿಗೆ ಭೇಟಿ ನೀಡಿದ್ದಾಗ ವಿವಿಅಧಿಕಾರಿಗಳ ವಿರೋಧದ ಮಧ್ಯೆಯೂ ನಿವೃತ್ತರ ನಿಯೋಗ ಈ ಬಗ್ಗೆ ಗಮನ ಸೆಳೆದಿದ್ದರಿಂದ ಮೀಸಲು ನಿಧಿ ಖಾಲಿಯಾಗಿರುವ ಬಗ್ಗೆ ಮಾಹಿತಿ ಬೆಳಕಿಗೆ ಬಂದಿದೆ.

ಈ ಹಿಂದೆ ಮೀಸಲು ನಿಧಿಯನ್ನು ಬೇರೆ ಅಭಿವೃದ್ಧಿ ಕಾರ್ಯಕ್ಕೆ ಬಳಸಿದ್ದರು ಹೀಗಾಗಿ ಆ ನಿಧಿಯಲ್ಲಿ ಈಗ ಹಣವಿಲ್ಲ ಎಂಬುದು ವಿವಿ ಅಧಿಕಾರಿಗಳ ಆರೋಪವಾಗಿದೆ.

Key words: MANGALORE UNIVERSITY-No more- pension –guarantee-retirees.