ದುಷ್ಕರ್ಮಿಗಳಿಂದ ಶಾಲೆಯ ಕುಡಿಯುವ ನೀರಿನ ಟ್ಯಾಂಕ್ ಗೆ ಕ್ರಿಮಿನಾಶಕ ಮಿಶ್ರಣ: 11 ವಿದ್ಯಾರ್ಥಿಗಳು ಅಸ್ವಸ್ಥ

ಮಂಡ್ಯ: ಜುಲೈ-16:(www.justkannada.in) ಸರ್ಕಾರಿ ಶಾಲೆಯಲ್ಲಿ ಮಕ್ಕಳು ಕುಡಿಯುವ ನೀರಿನ ಟ್ಯಾಂಕ್ ಗೇ ದುಷ್ಕರ್ವಿುಗಳು ವಿಷ ಮಿಶ್ರಣ ಮಾಡಿದ್ದು, ನೀರು ಕುಡಿದ 11 ಮಕ್ಕಳು ಅಸ್ವಸ್ಥರಾಗಿರುವ ಘಟನೆ ಮಂದ್ಯದಲ್ಲಿ ನಡೆದಿದೆ.

ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದರಾದರೂ, ಘಟನೆಯಿಂದ ಎ.ಹುಲ್ಕೆರೆ, ಮೋಳೆಕೊಪ್ಪಲು ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದೆ.

ಫೋರೆಟ್ ಎಂಬ ಕ್ರಿಮಿನಾಶಕವನ್ನು ನೀರಿನ ಟ್ಯಾಂಕ್​ಗೆ ಹಾಕಿದ್ದು, ಬೆಳಿಗ್ಗೆ ಶಾಲೆಗೆ ಬಂದ 11 ವಿದ್ಯಾರ್ಥಿಗಳು ನೀರು ಕುಡಿಯಲು ಹೋಗಿದ್ದಾರೆ. ಈ ಪೈಕಿ ಐವರು ನೀರು ಕುಡಿದಿದ್ದು, 6 ವಿದ್ಯಾರ್ಥಿಗಳು ವಾಸನೆ ಬಂದ ಹಿನ್ನೆಲೆಯಲ್ಲಿ ಉಗಿದಿದ್ದಾರೆ. ಕೆಲ ಹೊತ್ತಿನಲ್ಲೇ ತಲೆ ಸುತ್ತು ಬಂದು ಅಸ್ವಸ್ಥರಾಗಿದ್ದಾರೆ.

10ನೇ ತರಗತಿಯ ಮಯೂರ್​ಗೌಡ, ಎಚ್.ಎಂ.ದರ್ಶನ್, ಎಚ್.ಎಂ.ಧನುಷ್, ಜಿ.ಕೆ.ಯಶ್ವಂತ್ (ಎ.ಹುಲ್ಕೆರೆ), ಚಂದು, ನಿಶಾ, (ಮೋಳೆಕೊಪ್ಪಲು), ಕೆ.ಶಿವಲಿಂಗ (ಬಿ.ಹುಲ್ಕೆರೆ), 8ನೇ ತರಗತಿಯ ಡಿ.ವಿ.ಸೋಮಶೇಖರ್, ಪ್ರಜ್ವಲ್, ವಿನಯ್ (ಮೋಳೆಕೊಪ್ಪಲು) ಮತ್ತು ತೇಜ (ಎ.ಹುಲ್ಕೆರೆ) ಅಸ್ವಸ್ಥರಾದವರು.

ಅಸ್ವಸ್ಥ ವಿದ್ಯಾರ್ಥಿಗಳನ್ನು ತಕ್ಷಣ ಸಮೀಪದ ಕೊತ್ತತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮಿಮ್ಸ್​ನಲ್ಲಿ ದಾಖಲಿಸಲಾಗಿದೆ. ಸದ್ಯ ವಿದ್ಯಾರ್ಥಿಗಳು ಚೇತರಿಸಿಕೊಳ್ಳುತ್ತಿದ್ದು, 24 ಗಂಟೆ ನಿಗಾ ವಹಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

ಶಾಲೆಯ ಆವರಣದಲ್ಲಿ ರಾತ್ರಿ ವೇಳೆ ಕೆಲವು ಪುಂಡರು ಜೂಜಾಟ ಆಡುವುದು, ಮದ್ಯ ಸೇವನೆ ಮಾಡುವುದು ನಡೆಯುತ್ತಿದೆ. ಅವರೇ ಈ ಕೆಲಸ ಮಾಡಿದ್ದಾರೆ ಎಂಬುದು ಸ್ಥಳೀಯರ ಆರೋಪ.

ಶಾಲೆಯ ಕುಡಿಯುವ ನೀರಿನ ಟ್ಯಾಂಕ್ ಗೆ ಕ್ರಿಮಿನಾಶಕ ಮಿಶ್ರಣ ಮಾಡಿದ ದುಷ್ಕರ್ಮಿಗಳು: ನೀರು ಕುಡಿದ 11 ವಿದ್ಯಾರ್ಥಿಗಳು ಅಸ್ವಸ್ಥ
Mandya,Government school,Drinking water,poison mix