ಮಂಡ್ಯ, ಅಕ್ಟೋಬರ್,21,2025 (www.justkannada.in): ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಮಂಡ್ಯ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದು ಈ ಹಿನ್ನೆಲೆಯಲ್ಲಿ ಸಮೀಕ್ಷಾ ಕಾರ್ಯದಲ್ಲಿ ಭಾಗವಹಿಸಿದ ಎಲ್ಲರಿಗೂ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಡಿಸಿ ಡಾ.ಕುಮಾರ ಅವರು, ರಾಜ್ಯದ ಎಲ್ಲಾ ವರ್ಗಗಳ/ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಕುರಿತು ಸಮೀಕ್ಷೆ ಮುಖಾಂತರ ಸಮಗ್ರ ಅಂಕಿ-ಅಂಶಗಳನ್ನು ಸಂಗ್ರಹಿಸುವ ಕಾರ್ಯವನ್ನು ದಿನಾಂಕ: 22.09.2025 ರಿಂದ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಕೈಗೊಳ್ಳಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಒಟ್ಟು 5,10,000 ಕುಟುಂಬಗಳನ್ನು ಸಮೀಕ್ಷೆ ಮಾಡಲಾಗಿದ್ದು, ಒಟ್ಟು 18, 29 ,582 ಜನಸಂಖ್ಯೆಯ ಸಮೀಕ್ಷೆಯನ್ನು ಪೂರ್ಣಗೊಳಿಸಲಾಗಿದೆ.
ಈ ನಿಟ್ಟಿನಲ್ಲಿ ಮಂಡ್ಯ ಜಿಲ್ಲೆಯಲ್ಲಿ ಬೃಹತ್ ಪ್ರಮಾಣದ ಸಮೀಕ್ಷಾ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ ಹಾಗೂ ಮಂಡ್ಯ ಜಿಲ್ಲೆಯು ರಾಜ್ಯದಲ್ಲೇ 1ನೇ ಸ್ಥಾನವನ್ನು ಪ್ರತಿನಿಧಿಸಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ.
ಈ ಸಮೀಕ್ಷಾ ಕಾರ್ಯದ ಯಶಸ್ಸಿಗೆ ಸಾಕಷ್ಟು ಜನರು ಹಗಲೂ ಇರುಳು ಎಂಬುದನ್ನೂ ಲೆಕ್ಕಿಸದೆ ದುಡಿದಿದ್ದಾರೆ. ನಮ್ಮ ಜಿಲ್ಲಾಹಂತದ ಮತ್ತು ತಾಲ್ಲೂಕು ಹಂತದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲೆಯ ಸಮಸ್ತ ಶಿಕ್ಷಕ ಸಮುದಾಯದ ಸಕ್ರಿಯ ಭಾಗವಹಿಸುವಿಕೆ ಮತ್ತು ಪಾಲ್ಗೊಳ್ಳುವಿಕೆಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಕುರಿತು ಸಮೀಕ್ಷೆ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಈ ಸಮೀಕ್ಷಾ ಕಾರ್ಯ ನಮ್ಮೆಲ್ಲರ ಜವಾಬ್ದಾರಿ ಎಂಬ ಮನೋಭಾವದೊಂದಿಗೆ ಪರಿಭಾವಿಸಿ ಪ್ರತಿ ಹಂತದಲ್ಲೂ ನಮ್ಮೊಟ್ಟಿಗೆ ಸಹಕರಿಸುವ ಮೂಲಕ ನಿಮ್ಮ ಬದ್ಧತೆ ಮತ್ತು ಕರ್ತವ್ಯ ತತ್ಪರತೆಯನ್ನು ಪ್ರದರ್ಶಿಸಿರುತ್ತೀರಿ. ನಿಮ್ಮ ತಂಡ ಸ್ಪೂರ್ತಿ, ಇಚ್ಛಾ ಶಕ್ತಿಯ ಜೊತೆಗೆ ಮಂಡ್ಯ ಜಿಲ್ಲೆಯ ಸಾರ್ವಜನಿಕರು ಧನಾತ್ಮಕವಾಗಿ ಸ್ಪಂದನೆ ನೀಡಿ ಸಹಕರಿಸಿದ್ದು ಸಹ ಈ ಯಶಸ್ಸಿಗೆ ಕಾರಣವಾಗಿದೆ. ಅದಕ್ಕಾಗಿ ತುಂಬು ಹೃದಯದ ಧನ್ಯವಾದಗಳನ್ನ ಅರ್ಪಿಸುವುದಾಗಿ ಡಾ.ಕುಮಾರ್ ತಿಳಿಸಿದ್ದಾರೆ.
ಹಾಗೆಯೇ ಈ ಬೃಹತ್ ಕಾರ್ಯದಲ್ಲಿ ಭಾಗಿಯಾದ ಜಿಲ್ಲಾ ಹಂತದ ಅಧಿಕಾರಿಗಳು, ತಾಲ್ಲೂಕು ನೋಡಲ್ ಅಧಿಕಾರಿಗಳು, ತಹಶೀಲ್ದಾರ್ ಗಳು , ಕಾರ್ಯನಿರ್ವಾಹಕ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪುರಸಭೆ ಮುಖ್ಯಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸಮೀಕ್ಷಾ ಮೇಲ್ವಿಚಾರಕರು, ಸಮೀಕ್ಷಾದಾರರು, ವಿಶೇಷವಾಗಿ ಅಪಾರ ಶಿಕ್ಷಕಸಮುದಾಯ ಹಾಗೂ ಕುಟುಂಬಗಳನ್ನು ಗುರುತಿಸುವ ಕಾರ್ಯದಲ್ಲಿ ಸಹಕರಿಸಿದ ಚೆಸ್ಕಾಂ ನೌಕರರು, ಗ್ರಾಮಪಂಚಾಯತಿ ಸಿಬ್ಬಂದಿ ಹಾಗೂ ಅಂಗನವಾಡಿ ಕಾರ್ಯಕರ್ತರು ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಿಳಿಸಿದ್ದಾರೆ.
Key words: Mandya, district , first place, survey, DC, Dr. Kumar