ಟೊಮ್ಯಾಟೊಗಾಗಿ ವ್ಯಕ್ತಿಗೆ ಚಾಕು ಇರಿತ.

ರಾಯಚೂರು,ಜುಲೈ,12,2023(www.justkannada.in): ಇತ್ತೀಚೆಗೆ ಟೊಮ್ಯಾಟೋ ದರ 100 ರೂಪಾಯಿಯ ಗಡಿ ದಾಟಿದ್ದು ಈ ಬೆನ್ನಲ್ಲೆ ಅಲ್ಲಲ್ಲಿ ಕಳ್ಳತನ ಪ್ರಕರಣಗಳು ವರದಿಯಾಗಿದೆ. ಈ ನಡುವೆ ಇಲ್ಲೊಬ್ಬ ದುಷ್ಕರ್ಮಿ ಟೊಮ್ಯಾಟೊಗಾಗಿ ವ್ಯಕ್ತಿಗೆ ಚಾಕು ಇರಿದಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ಜಿಲ್ಲೆಯ ಮಾನ್ವಿ ಪಟ್ಟಣದ ಮಾರ್ಕೆಟ್​ನಲ್ಲಿ ಈ ಘಟನೆ ನಡೆದಿದೆ. ರಫಿ ಎಂಬುವವರಿಗೆ ಚಾಕು ಇರಿಯಲಾಗಿದೆ. ಜುಲೈ 8ರ ತಡರಾತ್ರಿ ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮಾನ್ವಿ ಪುರಸಭೆ ಮಳಿಗೆಯ ತರಕಾರಿ ಮಾರ್ಕೆಟ್​ನಲ್ಲಿ ರಫಿ ಕಾವಲಿಗಾಗಿ ತಳ್ಳುವ ತರಕಾರಿ ಗಾಡಿಯಲ್ಲಿ ಮಲಗಿದ್ದ. ಈ ವೇಳೆ ರಫಿ ಜೊತೆ ಮಾತನಾಡುವ ನೆಪದಲ್ಲಿ ಅಪರಿಚಿತ ವ್ಯಕ್ತಿ ಬಂದಿದ್ದಾನೆ. ಸಡನ್​ ಆಗಿ ಕುತ್ತಿಗೆ ಭಾಗಕ್ಕೆ ಚಾಕು ಇರಿದು ಎಸ್ಕೇಪ್ ಆಗಿದ್ದಾನೆ.ಆರೋಪಿಯ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಗಾಯಾಳು ರಫಿಗೆ ಮಾನ್ವಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಟೊಮ್ಯಾಟೊ ಕಳ್ಳತನಕ್ಕೆ ಯತ್ನಿಸಿರೋ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಕುರಿತು ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Man -stabbed –market- tomatoes.